ಇಂದಿನ ಟಾಪ್ 10 ಸುದ್ದಿಗಳು..! 16.01.2016

Date:

1. ಕರ್ತವ್ಯ ನಿರತ ಅಧಿಕಾರಿಗೆ ಕಪಾಳಕ್ಕೆ ಹೊಡೆದ ಸಿಎಂ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ತವ್ಯ ನಿರತ ಅಧಿಕಾರಿಯೊಬ್ಬರಿಹೆ ಕಪಾಳಕ್ಕೆ ಹೊಡೆದ ಘಟನೆ ಇಂದು ಬಳ್ಳಾರಿಯಲ್ಲಿ ನಡೆದಿದೆ.
ಕೌಲ್ ಬಜಾರ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಕಟ್ಟಡದ ಉದ್ಘಾಟನೆ ಸಮಯದಲ್ಲಿ ಬಂದಿದ್ದ ಮುಖ್ಯಮಂತ್ರಿಗಳಿಗೆ ಅಡ್ಡಬಂದ ಬಳ್ಳಾರಿ ನಗರಪಾಳಿಕೆ ಆಯುಕ್ತ ರಮೇಶ್ ಅವರಿಗೆ ಸಿಎಂ ಕಪಾಳಕ್ಕೆ ಹೊಡೆದಿದ್ದಾರೆ, ಆದರೆ ಸ್ವತಃ ರಮೇಶ್ ಇದನ್ನು ಅಲ್ಲಗಳೆದಿದ್ದಾರೆ.

2. ಪಾಕ್ ತನಿಖಾ ತಂಡಕ್ಕೆ ಪಠಾಣ್ಕೋಟ್ ವಾಯುನೆಲೆ ಪ್ರವೇಶಿಸಲು ಬಿಡಲ್ಲ : ಮನೋಹರ್ ಪರಿಕ್ಕರ್
ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಯೋತ್ಪಾದಕ ಶಕ್ತಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಪಾಕಿಸ್ತಾನದ ನಡೆ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯರ ತಾಳ್ಮೆಗೂ ಒಂದು ಮಿತಿ ಇದೆ, ಮುಂದಿನ ವರ್ಷಗಳಲ್ಲಿ ಅದರ ಫಲಿತಾಂಶ ಏನೆಂಬುದನ್ನು ಇಡೀ ಜಗತ್ತು ನೋಡಲಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಪಠಾಣ್ಕೋಟ್ ದಾಳಿಯ ಬಗ್ಗೆ ತನಿಖೆ ನಡೆಸಲು ಪಾಕ್ ತನಿಖಾ ತಂಡಕ್ಕೆ ಪಠಾಣ್ಕೋಟ್ ವಾಯುನೆಲೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲವೆಂದೂ ರಕ್ಷಣ ಸಚಿವರ ತಿಳಿಸಿದ್ದಾರೆ.
3. ಭಾರತ ಎಲ್ಲಾರಂಗಗಳಲ್ಲೂ ಚೀನಾವನ್ನು ಹಿಂದಿಕ್ಕಲಿದೆ : ರಾಹುಲ್ ಗಾಂಧಿ

ಭಾರತ ಎಲ್ಲಾ ರಂಗಗಳಲ್ಲೂ ಚೀನಾವನ್ನು ಹಿಂದಿಕ್ಕುವ ವಿಶ್ವಾಸವಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬೈನ ಮ್ಯಾನೆಜ್ಮೆಂಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಅವರು ಭಾರತ ಚೀನಾಕ್ಕಿಂತಲೂ ದೊಡ್ಡ ದೇಶ, ಅತ್ಯಂತ ಶಕ್ತಿಶಾಲಿ, ಚೀನಾಕ್ಕೆ ಹೋಲಿಸಿದರೆ ಭಾರತ ಅತ್ಯಂತ ಮೃದು ದೇಶವಾಗಿದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವುದಕ್ಕೆ ನನಗೆ ಸಂತಸವಿದೆ ಎಂದೂ ಕೂಡ ರಾಹುಲ್ ಅಭಿಪ್ರಾಯಿಸಿದ್ದಾರೆ.

4. ನಿರ್ಗತಿಕ ಮಕ್ಕಳಿಗೆ ದೇವೇಗೌಡ ದಂಪತಿಗಳಿಂದ ಹೊದಿಕೆ ವಿತರಣೆ
ಬೆಂಗಳೂರಲ್ಲಿಂದು ಮಾಜಿ ಪ್ರಧಾನಿ ದೇವೆಗೌಡರು ಹಾಗು ಅವರ ಪತ್ನಿ ಚೆನ್ನಮ್ಮ ನಿರ್ಗತಿಕ ಮಕ್ಕಳಿಗೆ ಹೊದಿಕೆ ವಿತರಿಸಿದರು. ಪದ್ಮನಾಭನಗರ ನಿವಾಸದಲ್ಲಿ ಹೊದಿಕೆ ವಿತರಣೆ ಮಾಡಿ ಮಾತಾಡಿದ ಗೌಡರು ಸಾಂಕೇತಿಕವಾಗಿ ಸಾವಿರ ಮಕ್ಕಳಿಗೆ ಹೊದಿಕೆ ನೀಡಿದ್ದೇವೆ, ಉಳಿದ ಹೊದಿಕೆಗಳನ್ನು ಬೀದಿ ಬದಿಯಲ್ಲಿ ವಾಸಿಸುವ ಮಕ್ಕಳಿಗೆ ವಿತರಿಸಲಾಗುವುದೆಂದು ತಿಳಿಸಿದ್ದಾರೆ. ಚಳಿ ಸಂದರ್ಭದಲ್ಲಿ ನಿರ್ಗತಿಕ ಮಕ್ಕಳಿಗೆ ನನ್ನದೊಂದು ಸಣ್ಣ ಕಾಣಿಕೆ ಎಂದು ಗೌಡರು ಹೇಳಿದ್ದಾರೆ.

5. ಇನ್ನು ಎಲ್ಲಾ ಉನ್ನತ ಶಿಕ್ಷಣದಲ್ಲೂ ಕಡ್ಡಾಯ ಕನ್ನಡ..!
ಇನ್ನುಮುಂದೆ ಎಲ್ಲಾ ಉನ್ನತ ಶಿಕ್ಷಣದಲ್ಲೂ ಕನ್ನಡ ಭಾಷಾ ಬೋಧನೆ ಕಡ್ಡಾಯವಾಗಲಿದೆ ಎಂದು ಹಿ.ಚಿ ಬೋರಲಿಂಗಯ್ಯ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಕನ್ನಡಾಭಿವೃದ್ಧಿ ಪ್ರಾಧಿಕಾರ ನೇಮಿಸಿರುವ ಹಿ.ಚಿ.ಬೋ ಸಮಿತಿ ಬೇರೆ ರಾಜ್ಯದಿಂದ ಬರುವವರಿಗೆ ಕನ್ನಡ ಪರಿಚಯಿಸುವ ಪಠ್ಯವನ್ನು ಕಡ್ಡಾಯಮಾಡುವಂತೆ ಶಿಫಾರಸ್ಸು ಮಾಡಿದೆ. ಶಿಪಾರಸ್ಸಿನಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿಯೂ ಕನ್ನಡ ಕಡ್ಡಾಯ ಮಾಡುವಂತೆ ಸೂಚಿಸಲಾಗಿದೆ.

6. ಗ್ರಾಮಸ್ಥರನ್ನು ಕರೆದು, ಆತ್ಮಹತ್ಯೆಗೆ ಶರಣಾದ ರೈತ

ಬರ ಮತ್ತು ಸಾಲಬಾಧೆಯಿಂದ ನೊಂದಿದ್ದ ರೈತನೋರ್ವ ತನ್ನ ಅಂತ್ಯಸಂಸ್ಕಾರಕ್ಕೆ ಊರಿನ ಜನರಿಗೆಲ್ಲಾ ಆಹ್ವಾನ ನೀಡಿ ಬಳಿಕ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮರಾಠವಾಡದಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಶೇಷರಾವ್ ಷೆಜುಲ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಶೇಷರಾವ್ ತನ್ನ ಗ್ರಾಮದವರಿಗೆಲ್ಲಾ ತಾನು ಸಾಯುತ್ತಿದ್ದೇನೆ. ನನ್ನ ಅಂತ್ಯ ಸಂಸ್ಕಾರಕ್ಕೆ ತಪ್ಪದೇ ಬನ್ನಿ ಎಂದು ಆಹ್ವಾನ ನೀಡಿದ್ದನಂತೆ. ಆದರೆ ಶೇಷರಾವ್ ನ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಂಡ ಗ್ರಾಮಸ್ಥರು, ಆತನ ಮಾತುಗಳನ್ನು ಗಂಭೀರವಾಗಿ ಪರಿಗಣಸಲೇ ಇಲ್ಲ. ಆದರೆ ಮಾರನೆಯ ದಿನ ಶೇಷರಾವ್ ತನ್ನದೇ ತೋಟದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

7. ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ
ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ನಾಲ್ವರು ಕಾಮುಕರು ಗೃಹಿಣಿಯೊಬ್ಬರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 42 ವರ್ಷದ ಗೃಹಿಣಿ ಜೈಲಿನಲ್ಲಿದ್ದ ತನ್ನ ಗಂಡನನ್ನು ಕಾಣಲು ಬಸ್ ಸ್ಟಾಂಡ್ ನಲ್ಲಿ ಕಾಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ನಾಲ್ವರು ಡ್ರಾಪ್ ಮಾಡುವುದಾಗಿ ಹೇಳಿ ಕಾರನ್ನು ಹತ್ತಿಕೊಂಡಿದ್ದಾರೆ ನಂತರ ಆಕೆಗೆ ತಿಂಡಿ ಹಾಗೂ ಕುಡಿಯಲು ಪಾನೀಯ ನೀಡಿದ್ದಾರೆ. ಪಾನೀಯ ಸೇವನೆ ಬಳಿಕ ಪ್ರಜ್ಞಾಹೀನರಾದ ಮಹಿಳೆ ಮೇಲೆ ನಾಲ್ವರು ಕಾಮಿಗಳು ಅತ್ಯಾಚಾರವೆಸಗಿ, ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.

8 ಪಶ್ಚಿಮ ಆಫ್ರಿಕಾದದಲ್ಲಿ ಉಗ್ರರ ಅಟ್ಟಹಾಸ: 20 ಮಂದಿ ಸಾವು
ಬುರ್ಕಿನಾ ಫಾಸೊದ ವಾಗಡೂಗು ನಗರದ ಹೊಟೇಲ್ ಒಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಆಫ್ರಿಕಾದ ಬುರ್ಕಿನಾ ರಾಜಧಾನಿ ಫಾಸೊದ ಪ್ರಮುಖ ಹೊಟೇಲ್ ಸ್ಪೇನ್ಡಿಡ್ ನಲ್ಲಿ ಅಲ್ ಖೈದಾ ಭಯೋತ್ಪಾದನೆ ಸಂಘಟನೆಯ ಮುಸುಕುಧಾರಿ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದು, 15 ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಉಗ್ರ ದಾಳಿ ನಡೆಯುತ್ತಿದ್ದಂತೆ ಬುರ್ಕಿನಾ ಭದ್ರತಾ ಪಡೆಗಳು ಹೊಟೇಲ್ ಸುತ್ತುವರೆದಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ.

9. ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ಬೆಂಬಲವಿದೆ: ರಾಹುಲ್ ಗಾಂಧಿ
ನಮ್ಮ ಬೇಡಿಕೆಗಳನ್ನು ಎನ್ ಡಿಎ ಸರ್ಕಾರ ಒಪ್ಪಿಕೊಂಡಿದ್ದೇ ಆದರೆ, ಸರಕು ಮತ್ತು ಸೇವಾ ತೆರಿಗೆ ವಿಧೇಯಕವನ್ನು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿದ್ದೇ ಆದರೆ, ಜಿಎಸ್ ಟಿ ವಿಧೇಯಕವನ್ನು 15 ನಿಮಿಷಗಳಲ್ಲಿ ಅಂಗೀಕಾರವಾಗುವಂತೆ ಮಾಡುತ್ತೇವೆ. ಸ್ಟಾರ್ಟ್ ಅಪ್ ಇಂಡಿಯಾಗೆ ಮುಕ್ತ ಕಲ್ಪನೆಗಳ ಅಗತ್ಯವಿದೆ. ಆದರೆ, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸಹಿಷ್ಣುತೆ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಜೊತೆಯಲ್ಲಿ ಸಾಗಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

10 ಪುಷ್ಕರ್ ಸಾವಿನ ನಿಖರ ಕಾರಣ ಬಸ್ಸಿ ಹೇಳುತ್ತಿಲ್ಲ: ಸ್ವಾಮಿ

`ಕಾಂಗ್ರೆಸ್ನಾಯಕ ಶಶಿ ತರೂರ್ ರ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ನಿರ್ದಿಷ್ಟವಾಗಿ ಯಾವ ರಾಸಾಯನಿಕ ಮಿಶ್ರಣದ ವಿಷವು ಕಾರಣವಾಯಿತೆಂಬುದನ್ನು ದೆಹಲಿ ಪೊಲೀಸ್ ಮುಖ್ಯಸ್ಥ ಬಿ ಎಸ್ಬಸ್ಸಿ ಅವರು ಬಹಿರಂಗಪಡಿಸುತ್ತಿಲ್ಲ’ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ಸ್ವಾಮಿ ಆಪಾದಿಸಿದ್ದಾರೆ. ಸುನಂದಾ ಪುಷ್ಕರ್ ಸಾಯಲು ಇಂಜೆಕ್ಷನ್ ಮೂಲಕ ನೀಡಬಲ್ಲ ಲಿಡೋಕೇನ್ ಎಂಬ ವಿಷಕಾರಿ ಅಂಶವು ಅವರ ದೇಹದಲ್ಲಿ ಕಂಡುಬಂದಿತ್ತು ಎಂದು ಎಫ್ ಬಿಐ ಹೇಳಿರುವುದನ್ನು ಬಸ್ಸಿ ಮಾಧ್ಯಮಕ್ಕೆ ತಿಳಿಸಿಲ್ಲ’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...