ಬರಪೀಡಿತರು ಮತ್ತು ಮಿನರಲ್ ವಾಟರಲ್ಲಿ ಕೈ ತೊಳೆಯೋರು

1
2771

ನೀರಿನ ಟ್ಯಾಂಕರ್ ಬರೋ ಸದ್ದು ಕಿವಿಗೆ ಬೀಳ್ತಿದ್ದ ಹಾಗೆ ಎಲ್ಲೆಲ್ಲೋ ಇದ್ದವರು ಎದ್ದುಬಿದ್ದು ಮನೆಯಲ್ಲಿರೋ ಬಿಂದಿಗೆ, ಪಾತ್ರೆ, ಬಕೆಟ್ ಹಿಡಿದು ಓಡೋಡಿ ಬಂದ್ರು. ಹೆಂಗಸರು,ಗಂಡಸರು, ವೃದ್ದರು,ಮಕ್ಕಳ ಕೈಲೆಲ್ಲಾ ಬಿಂದಿಗೆ ಬಕೆಟ್ ಗಳು. ಟ್ಯಾಂಕರ್ ಬಂದ ತಕ್ಷಣ ಅದರ ಹಿಂದೆ ನೂರಾರು ಖಾಲಿ ಕೊಡಗಳು. ಹೇಗಾದರೂ ಮಾಡಿ ನನಗೆ ಒಂದೆರೆಡು ಕೊಡ ನೀರು ಸಿಕ್ಕಿದ್ರೆ ಯುದ್ಧ ಗೆದ್ದ ಖುಷಿ. ಅಷ್ಟರೊಳಗೆ ಜಗಳ, ಕಿತ್ತಾಟ, ನೀರು ತುಂಬಿಸಿಕೊಳ್ಳಲು ಗುದ್ದಾಟ, ಸಿಗುತ್ತೋ ಇಲ್ವೋ ಅನ್ನೋ ಸಂಕಟ..! ಇದು ಪ್ರಸ್ತುತ ಬರಪೀಡಿತ ಉತ್ತರ ಕರ್ನಾಟಕದಲ್ಲಿ ಕಣ್ಣಾರೆ ಕಂಡ ದೃಶ್ಯ..! ಒಂದು ಬಿಂದಿಗೆ ಅವರು ಪಡೋ ಪಾಡು ನೋಡಿದ್ರೆ ಹೊಟ್ಟೆ ಉರಿದು ಹೋಗುತ್ತೆ. ಟ್ಯಾಂಕರ್ ನೀರೇ ಅವರ ಜೀವಾಳ. ಸಿಗೋ ಒಂದೆರೆಡು ಕೊಡ ನೀರಲ್ಲೇ ಮನೆಯವರ ಸ್ನಾನ ಆಗ್ಬೇಕು, ಬಟ್ಟೆ ಒಗೀಬೇಕು,ಪಾತ್ರೆ ತೊಳೀಬೇಕು, ಅಡಿಗೆ ಮಾಡಬೇಕು, ಶೌಚಾಲಯಕ್ಕೆ ಬಳಸಬೇಕು. ಕುಡಿಯಲು ಯೋಗ್ಯವಲ್ಲದಿದ್ದರೂ ಅದನ್ನೇ ಸೋಸಿಕೊಂಡು ಕುಡೀಬೇಕು..! ಇಂತದ್ದೊಂದು ಬದುಕು ಊಹಿಸಿಕೊಳ್ಳೋದೇ ಕಷ್ಟ,ಅಂತದ್ರಲ್ಲಿ ಅವರು ಈ ನರಕಯಾತನೆಯನ್ನು ಪ್ರತಿದಿನ ಅನುಭವಿಸ್ತಿದ್ದಾರೆ..! ಇದು ಉತ್ತರ ಕರ್ನಾಟಕದ ಜನರ ಪ್ರತಿದಿನದ ನೋವಿನ ಕಥೆ..! ಮಹಾರಾಷ್ಟ್ರದಲ್ಲಿ ರೋ ಅಷ್ಟು ಬರಗಾಲ ಇಲ್ಲಿ ಬಂದಿಲ್ಲ ಅನ್ನೋ ಮುಖ್ಯಮಂತ್ರಿಗಳು ಹೋಗಿ ಅವರ ಹಳ್ಳಿಯಲ್ಲಿ ಒಂದು ದಿನ ಕಳೆದು ಬನ್ನಿ. ಬರ ಅದೆಷ್ಟು ಬರ್ಬರ ಅನ್ನೋದರ ಅರಿವಾಗುತ್ತೆ. ನಾವು ಬಿಜಾಪುರ ಜಿಲ್ಲೆಯ ಚಡಚಣದ ಬಳಿಯ ಒಂದು ಹಳ್ಳಿಗೆ ಶುದ್ದ ಕುಡಿಯುವ ನೀರಿನ ಟ್ಯಾಂಕರ್ ನಲ್ಲಿ ನೀರು ಹಂಚುತ್ತಿದ್ದಾಗ ವೃದ್ದೆಯೊಬ್ಬರು ‘ ಪಂಚಾಯ್ತಿಯವರು ಕೊಡೋ ನೀರು ಗಲೀಜ್ ಇರ್ತಾವೆ. ಈ ನೀರು ಚಲೋ ಅದ,ನಿನ್ ಕೈ ಮುಗೀತೀನಿ ವಾರಕ್ಕೆ ಎರಡು ದಿನ ಇಂತಾ ನೀರು ಕೊಡೋ ಮಗನೆ’ ಅಂದಾಗ ಕಣ್ತುಂಬಿ ಬಂತು. ಇಷ್ಟು ದಿನ ಗಲೀಜು ನೀರು ಕುಡಿದು ಆರೋಗ್ಯ ಕೆಟ್ಟುಹೋಗಿದೆ ಅನ್ನೋದನ್ನು ಅವರ ಕೆಮ್ಮು ಒತ್ತಿ ಹೇಳ್ತಿತ್ತು. ಪ್ರಧಾನಿ ಮಂತ್ರಿಗಳು ಡಿಗ್ರಿ ಮಾಡಿರೋದು ನಿಜಾನಾ ಅಂತ ಕೇಳೋರು, ಮುಖ್ಯಮಂತ್ರಿಗಳ ವಾಚಿಗೆ ಜಗಳ ಆಡೋರೆಲ್ಲಾ ನಿಮಗೆ ತಾಕತ್ತಿದ್ರೆ ಉತ್ತರ ಕರ್ನಾಟಕದ ಜನರ ಕಷ್ಟ ಪರಿಹರಿಸೋಕೆ ಜಗಳ ಆಡಿ. ಹೋರಾಟ ಮಾಡಿ..! ಮಿನರಲ್ ವಾಟರಲ್ಲಿ ಕೈ ತೊಳೆಯೋ ನಿಮಗೆ ಹೇಗೆ ಗೊತ್ತಾಗುತ್ತೆ ಅವರ ಕಷ್ಟ.? ಎಸಿ ಕಾರಲ್ಲಿ ಕೂತು ಬರ ನೋಡೋಕೆ ಹೋಗಿ ಬಂದ್ರಲ್ಲ, ಅಲ್ಲಿಂದ ಬಂದು ಅದೇನು ಮಾಡಿದೀರಿ ಹೇಳಿ.? ಅವರು ಕೇಳ್ತಿರೋದು ನೀರು, ಕುಡಿಯೋ ನೀರು..! ಅದನ್ನೂ ಈ ಬರಗಾಲದಲ್ಲಿ ಒದಗಿಸೋಕೆ ಆಗಿಲ್ಲ ಅಂದ್ರೆ ಈ ಚೆಂದಕ್ಕೊಂದು ಸರ್ಕಾರ ಬೇಕಾ.? ನೀವು ಕೊಡೋ ನೀರು ಕುಡಿಯೋಕಾಗ್ತಿಲ್ಲ, ಸಾಕಾಗ್ತಿಲ್ಲ, ಅವರು ವಾರಕ್ಕೊಮ್ಮೆಯೂ ಸ್ನಾನ ಮಾಡ್ತಿಲ್ಲ. ಒಂದೇ ಬಟ್ಟೆ ಹತ್ತು ದಿನವಾದ್ರೂ ಬಿಚ್ತಿಲ್ಲ, ಆರೋಗ್ಯ ಹದಗೆಟ್ಟು ಹೋಗ್ತಿದೆ. ಏನಾದ್ರೂ ಒಂದು ವ್ಯವಸ್ಥೆ ಮಾಡಿ ಪುಣ್ಯ ಕಟ್ಕೊಳಿ. ಈ ಮೂಲೆಯಿಂದ ಆ ಮೂಲೆಯ ತನಕ ಎಲ್ಲೆಲ್ಲೂ ಬರಡು ಭೂಮಿ. ಹಾಕಿದ ಬೆಳಗಳೆಲ್ಲಾ ಬಿಸಿಲ ಹೊಡೆತಕ್ಕೆ ಸತ್ತು ಹೋಗಿವೆ. ಆ ಸಾವು ನೋಡಲಾಗದೇ ರೈತ ಆತ್ಮಹತ್ಯೆ ಮಾಡ್ಕೊತಿದ್ದಾನೆ. ಸಾವಿರಾರು ರೂಪಾಯಿ ಕೊಟ್ಟು ನೀರಿನ ಟ್ಯಾಂಕರ್ ಹಾಕಿಸಿಕೊಳ್ಳೋ ಶಕ್ತಿ ಆ ಬಡ ರೈತನಿಗಿಲ್ಲ. ಕಳೆದ 40 ವರ್ಷದಲ್ಲೇ ಅತ್ಯಂತ ಭೀಕರ ಬರಕ್ಕೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಹನಿಹನಿ ನೀರಿಗೂ ಒದ್ದಾಡ್ತಾ ಇದ್ದಾರೆ. ಜಾನುವಾರುಗಳಿಗೆ ನೀರು ಸಿಗದೇ ಬಡವಾಗಿವೆ, ಬರ ಜನರ ಬದುಕನ್ನೇ ನುಂಗಿ ಹಾಕಿದೆ. ರಾಜಕಾರಣಿಗಳು ಅಂತ ಕರೆಸಿಕೊಳ್ಳೋ ನೀವುಗಳು ಬರರಾಜಕೀಯ ಮಾಡ್ಕೊಂಡು ಕೂತಿದ್ದೀರಿ. ಜನರ ನೋವಿಗೆ ಸ್ಪಂದಿಸದ ನಿಮ್ಮಂಥ ರಾಜಕಾರಣಿಗಳು ಇರೋ ಈ ನಾಡಿಗೆ ‘ಬರ’ಬಾರದಿತ್ತು..! ಬರ ಪ್ರವಾಸಕ್ಕೆ ಸಿಎಂ ಬಂದಾಗ ಒಂದಷ್ಟು ಭರವಸೆ ಮೂಡಿತ್ತು, ಯಡ್ಯೂರಪ್ಪನವರು ಬಂದಾಗ ಮೋದಿಯವರಿಗೆ ಹೇಳಿ ನಮ್ಮ ಉತ್ತರ ಕರ್ನಾಟಕ್ಕೂ ರೈಲಲ್ಲಿ ನೀರು ಕಳಿಸ್ತಾರೆ ಅನ್ಕೊಂಡಿದ್ವಿ. ಆದ್ರೆ ಇಬ್ಬರೂ ಬಂದ್ರು, ಹೋದ್ರು. ನಮ್ಮ ಬದುಕು ಚೂರೂ ಬದಲಾಗಲಿಲ್ಲ ಅಂತಾರೆ ಚಡಚಣದ ಯುವಕ ಕೇದಾರ್. ಈ ಚೆಂದಕ್ಕೆ ಅಂತಹ ಬರಪ್ರವಾಸ ಯಾಕೆ ಬೇಕಿತ್ತು? ಇಂಥಾ ಕಣ್ಣೊರೆಸೋ ತಂತ್ರ ಬಿಟ್ಟು ಏನಾದ್ರೂ ಮಾಡಿ. ಇಲ್ಲವಾದರೆ ಇನ್ಯಾವತ್ತೂ ಉತ್ತರ ಕರ್ನಾಟಕಕ್ಕೆ ನೀವು ಉತ್ತರ ಕೊಡೋಕೆ ಸಾಧ್ಯವಾಗೋದಿಲ್ಲ. ಉತ್ತರ ಕರ್ನಾಟಕದ ಯಾವ ಬೋರ್ ವೆಲ್ ಗಳೂ ನೀರು ಕೊಡ್ತಿಲ್ಲ, ನಲ್ಲಿಗಳು ತುಕ್ಕು ಹಿಡಿದಿವೆ, ಕೆರೆಗಳು ಬತ್ತಿಹೋಗಿವೆ, ನದಿಗಳು ಇತ್ತು ಅನ್ನೋದರ ಸುಳಿವೂ ಇಲ್ಲ, ಇನ್ನೆಲ್ಲಿದೆ ನೀರು.? ಅಲ್ಲಲ್ಲಿ ಬೋರ್ ಹೊಡೆಸಿದವರು ಮಾತ್ರ ನೆಮ್ಮದಿ ಯಾವ ಇದ್ದಾರೆ. ದುಡ್ಡು ಕೊಟ್ಟವರಿಗೆ ಟ್ಯಾಂಕರ್ ನೀರು ಹೊಡೀತ
ಿದ್ದಾರೆ. ಬಡವ ಮಾತ್ರ ಅಪರೂಪಕ್ಕೆ ಬರೋ ನಿಮ್ಮ ಕೊಳಕು ನೀರಿಗೆ ಚಾತಕ ಪಕ್ಷಿಯಂತೆ ಕಾಯ್ತಾ ಕೂತಿದ್ದಾನೆ. ರಾಜಕಾರಣಿಗಳಿಗೆ ಉತ್ತರ ಕರ್ನಾಟಕದ ಜನ ಅದೆಷ್ಟು ಹೊಲಸಾಗಿ ಬಯ್ತಾರೆ ಅಂತ ಗೊತ್ತಾಗ್ಬೇಕು ಅಂದ್ರೆ ಒಂದು ಟ್ಯಾಂಕರ್ ಶುದ್ದ ನೀರು ತೆಗೆದುಕೊಂಡು ಒಂದು ಹಳ್ಳಿಗೆ ಹೋಗಿ ಸಾಕು. ದಪ್ಪ ಚರ್ಮದ ರಾಜಕಾರಣಿಗಳ ಜನ್ಮ ಜಾಲಾಡಿಬಿಡ್ತಾರೆ ಕೋಪದಲ್ಲಿರೋ ಜನ. ಕುಡಿಯೋಕೆ ನೀರು ಸಿಗಲ್ಲ ಅಂದ್ರೆ ಅದೆಂಥಾ ಬದುಕು ನೀವೇ ಊಹಿಸಿ. ಅಲ್ಲೆಲ್ಲೋ ಇರೋ ಉಗಾಂಡ, ಆಫ್ರಿಕಾದ ಬಗ್ಗೆ ಮಾತಾಡೋ ನಾವು ನೀವು 500 ಕಿಲೋಮೀಟರ್ ದೂರದಲ್ಲಿರೋ ನಮ್ಮವರ ಕಷ್ಟ ಕೇಳ್ತಿಲ್ಲ. ಚೆನ್ನೈಗೆ ಸಮಸ್ಯೆ ಆದಾಗ ಬೊಬ್ಬೆ ಹೊಡೆದ ಮೀಡಿಯಾಗಳು ಈಗ ತಮ್ಮ ಕ್ಯಾಮೆರಾಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೋ ಗೊತ್ತಾಗ್ತಿಲ್ಲ.! ಮಾಧ್ಯಮಗಳು ಮನಸ್ಸು ಮಾಡಿದ್ರೆ ವಾರದೊಳಗೆ ಬರಪೀಡಿತ ಪ್ರದೇಶದ ಜನ ನೆಮ್ಮದಿಯಾಗಿ ಇರಬಹುದು. ಬೆಳೆಗಳಂತೂ ಸತ್ತು ಹೋಗ್ತಿವೆ, ಜೀವಗಳು ಸತ್ತು ಹೋಗದಿರಲಿ. ಈಗಲಾದ್ರೂ ಕಣ್ಣುಬಿಡಿ ಪ್ಲೀಸ್. ನೀವು ನಂಬಲಿಕ್ಕಿಲ್ಲ,ಜಾನುವಾರುಗಳಿಗೆ ನೀರು ಮೇವು ಸಿಗದೇ ಕಣ್ಣೆದುರೇ ಸಾಯೋದು ನೋಡಲಾಗದೇ ತಾವಾಗೇ ಕಸಾಯಿಖಾನೆಗಳಿಗೆ ಮಾರಾಟ ಮಾಡ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಮುಂದಿನ ಬೆಳೆಗೆ ಆಧಾರವಾಗುವ ಜಾನುವಾರುಗಳನ್ನೂ ಈ ಬರ ನುಂಗುತ್ತಿದೆ. ಕನಿಷ್ಟ ಸರ್ಕಾರ ಅಂತ ಜಾನುವಾರುಗಳನ್ನು ಮಳೆ ಬರುವವರೆಗೂ ದತ್ತು ಪಡೆದು ಅವುಗಳ ಜೀವ ಉಳಿಸಿ ನಂತರ ರೈತನಿಗೆ ಮರಳಿಸೋ ಕೆಲಸ ಮಾಡಿದ್ರೂ ಮುಂದಿನ ಸಲ ಅವರ ಓಟು ನಿಮಗೆ ಫಿಕ್ಸ್. ಅದಕ್ಕಾದ್ರೂ ಅವರಿಗೋಸ್ಕರ ಒಂದಷ್ಟು ನೆರವು ನೀಡಿ. ನಟ ಯಶ್ ಅದೆಷ್ಟೋ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸ್ತಿದ್ದಾರೆ. ಉಳಿದ ನಟರೂ ಅಂತಹ ಯೋಚನೆ ಮಾಡಲಿ. ಚೆನ್ನೈಗೆ ಲಕ್ಷಾಂತರ ನೆರವು ನೀಡಿದ ಬೆಂಗಳೂರಿನ ಜನ ವಾರಾಂತ್ಯಕ್ಕೆ ಉತ್ತರ ಕರ್ನಾಟಕಕ್ಕೆ ಹೋಗಿ ಅವರಿಗೆ ಒಂದಷ್ಟು ನೀರು ಒದಗಿಸಿ, ಮಾತಾಡಿಸಿ ಬನ್ನಿ. ಅವರ ಜೊತೆಗೆ ನಾವೆಲ್ಲಾ ಇದ್ದೀವಿ ಅನ್ನೋ ಧೈರ್ಯ ಬರಲಿ. ಅನ್ನ ಕೊಡೋ ಜೀವಗಳು ದಾಹ ಅಂತ ಗೋಗರೆಯುತ್ತಿವೆ. ಸರ್ಕಾರವನ್ನು ಕಾಯದೇ ನಾವೇ ಏನನ್ನಾದ್ರೂ ಮಾಡೋಣ. ಗೆಳೆಯರ ಸಹಕಾರದೊಂದಿಗೆ ನಾನು ನಾಲ್ಕು ಹಳ್ಳಿ ದತ್ತು ಪಡೆದು ಕುಡಿಯುವ ನೀರು ಒದಗಿಸುತ್ತಿದ್ದೇನೆ. ನೀವು ಒಂದೊಂದು ಹಳ್ಳಿ ದತ್ತು ಪಡೆದು ನೀರು ಕೊಟ್ಟರೆ ಅವರ ಆಶೀರ್ವಾದ ನಿಮ್ಮ ಮೇಲಿರುತ್ತೆ. ಜಾನುವಾರುಗಳಿಗೆ ನೀರು ಸಿಗುತ್ತೆ, ಅವರ ಮಳೆ ಬರುವವರೆಗೂ ನೆಮ್ಮದಿಯಾಗಿರುತ್ತಾರೆ. ಈ ಬಾರಿ ಒಳ್ಳೆಯ ಮಳೆಯಾದ್ರೆ ನಮಗೆ ಅನ್ನ ಹಾಕೋರು ಅವರೇ ತಾನೇ. ಸರ್ಕಾರಕ್ಕೆ ಅವಮಾನವಾಗುವ ಹಾಗೆ ಅವರಿಗೆ ನೆರವಾಗಿ. ಬನ್ನಿ ನಮ್ಮವರಿಗೆ ನಾವಲ್ಲದೇ ಇನ್ಯಾರು ನೆರವಾಗಬೇಕು.?

  • ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

POPULAR  STORIES :

ಯೂಟ್ಯೂಬ್ ನಲ್ಲಿ ಕಾಣಿಸಿದವಳೇ ಸೋದರಿಯಾಗಿದ್ದಳು..! ಇದು ಅವಳಿ-ಜವಳಿ ಸೋದರಿಯರ ಬ್ಯೂಟಿಫುಲ್ ಸ್ಟೋರಿ…!

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

1 COMMENT

LEAVE A REPLY

Please enter your comment!
Please enter your name here