ಅವಳು ದಿವ್ಯಾ ಭಾರ್ತಿ `ಶಿ ಈಸ್ ಎಟರ್ನಲ್, ಶಿ ಈಸ್ ವಂಡರ್ ಫಾರ್ ಎವರ್'

1
93

raaaಸತ್ತ ಮಗಳ ಫೋಟೋ ಎದುರಿಗೆ ನಿಂತ ಆ ವೃದ್ಧ ತಂದೆ, ಭಾವುಕರಾಗಿ ಹೇಳುತ್ತಿದ್ದರು, `ಶೀ ವಾಸ್ ಎಟರ್ನಲ್, ಶೀ ವಾಸ್ ವಂಡರ್ ಫಾರ್ ಎವರ್’. ಅವರ ಮಾತು ಸುಳ್ಳಲ್ಲ. ದಿವ್ಯಾಭಾರ್ತಿ ಯಾವತ್ತಿಗೂ ವಂಡರ್. ಜೋರು ಮಳೆಯಂತೆ ಸುರಿದುಹೋದವಳು. ಅವಕಾಶ, ಖ್ಯಾತಿ, ಮದುವೆ, ಸಾವು ಎಲ್ಲವೂ ಅವಳ ಜೀವನದಲ್ಲಿ ಅವಸವಸರವಾಗಿಯೇ ಮುಗಿದುಹೋಗಿತ್ತು. ಸತ್ತು ಇಪ್ಪತ್ಮೂರು ವರ್ಷಗಳು ಕಳೆದರು ದಿವ್ಯಾ ಇನ್ನಿಲ್ಲದಂತೆ ಕಾಡಲು, ಅವಳ ಸೌಂದರ್ಯ ಮಾತ್ರ ನಿಮಿತ್ತವಲ್ಲ, ಅವಳ ಅಪಾರ ಪ್ರತಿಭೆಯೂ ಕಾರಣ’

ಮುದ್ದು ಮುಖ, ಮತ್ತೇ ಮತ್ತೇ ನೋಡಬೇಕೆನ್ನುವ ಚೆಲುವು. ಕನಸ್ಸಿನಲ್ಲೂ ಕಚಗುಳಿಯಿಡುವ ಸೌಂದರ್ಯ..!. ನಾಟಿ, ಬ್ಯೂಟಿಫುಲ್, ಎನರ್ಜಿಟಿಕ್… ದಿವ್ಯಾ ಭಾರ್ತಿಯನ್ನ ಬಣ್ಣಿಸಲು ನಿಜಕ್ಕೂ ಪದಗಳನ್ನು ಹುಡುಕಲೇಬೇಕು. ಜೀವನ ಅಂದರೇ ಎಂಜಾಯ್. ಖುಷಿ ಖುಷಿಯಾಗಿ ಬದುಕಿ ಒಂದು ದಿನ ಸತ್ತು ಹೋಗಬೇಕು. ಹೀಗೊಂದು ಗುರಿಯಿಟ್ಟುಕೊಂಡು, ಗುರಿ ತಲುಪುವ ಮುನ್ನವೇ ಮುಗಿದುಹೋದ ಮುಗ್ದ ಹುಡುಗಿ ಅವಳು. ದಿವ್ಯಾ ಭಾರ್ತಿ ಇನ್ನಿಲ್ಲವಾಗಿ ಇಪ್ಪತ್ಮೂರು ವರ್ಷ ಕಳೆದರೂ, ಮತ್ತೆ ಮತ್ತೆ ಕಾಡಲು ಅವಳ ಅಪಾರ ಸೌಂದರ್ಯ, ಯಶಸ್ಸು ಮಾತ್ರ ಕಾರಣವಲ್ಲ. ಬೇಡದ ಸಾವು ಅವಳನ್ನು ಆಕ್ರಮಿಸುವ ಮುನ್ನ ಆಕೆ ಬರೆದು ಹೋದ ದಾಖಲೆ, ಹೃದಯವನ್ನು ಹಿಂಡಿ ಹಾಕುವ ಅವಳ ಚಿತ್ರಗಳ ದೃಶ್ಯ ವೈಭವವೂ ನಿಮಿತ್ತ.

ದಿವ್ಯಾಭಾರ್ತಿಯನ್ನ ನಟಿ ಶ್ರೀದೇವಿಯ ಮತ್ತೊಂದು ರೂಪ ಎಂದಾಗ, `ಓ ಮೈ ಗಾಡ್… ನಾನು ಶ್ರೀದೇವಿ ಥರಾ ಇದ್ದೀನಾ….. ಥ್ಯಾಂಕ್ ಗಾಡ್…’ ಇದು ನಿಜಕ್ಕೂ ಸುಂದರ ಸುಳ್ಳೆಂದ ದಿವ್ಯಾ, ತನ್ನ ಸೌಂದರ್ಯದ ಬಗ್ಗೆ ಎಂದೂ ಅಹಂಕಾರಪಡಲಿಲ್ಲ. ಜಗತ್ತು ಮಾತ್ರ ಆ ಸೌಂದರ್ಯವನ್ನ ಆರಾಧಿಸಿತ್ತು. ತನ್ನದೇ ವಿಶಿಷ್ಟ ಮ್ಯಾನರಿಸಂನಿಂದ ಎಲ್ಲರ ಮನದಾಳದಲ್ಲಿ ಸದ್ದಿಲ್ಲದೇ ನುಸುಳಿ, ಸದ್ದಿಲ್ಲದೇ ಮಾಯವಾದ ಮಾಯಜಿಂಕೆ ಇವಳು. ದಿವ್ಯಾ ಭಾರ್ತಿಯ ಬಗ್ಗೆ ಹೇಳಿದಷ್ಟೂ ಮುಗಿಯದ ವಿಚಾರವಿದೆ. ಮೊಗೆದಷ್ಟು ಉಕ್ಕುವ ಸಂತಸವಿದೆ. ಓಪಿ ಭಾರ್ತಿ, ಮೀತಾ ಭಾರ್ತಿಯ ಇಬ್ಬರು ಮಕ್ಕಳ ಪೈಕಿ, ದಿವ್ಯಾ ಮೊದಲನೇ ಮಗಳು, ಕುನಾಲ್ ಎರಡನೇ ಮಗ. ಮಗಳು ಸತ್ತ ದಿನ ಈ ಹೃದಯ ಸ್ತಬ್ಧವಾಗದೇ ಇದ್ದಿದ್ದು ದಿವ್ಯಾ ಬದುಕಿದ್ದಾಗ ಮಾಡಿಹೋಗಿದ್ದ ಒಂದಿಷ್ಟು ಪುಣ್ಯದ ಕೆಲಸದ ಪ್ರತಿಫಲ. ಶೀ ವಾಸ್ ಎಟರ್ನಲ್, ಶೀ ವಾಸ್ ವಂಡರ್ ಫಾರ್ ಎವರ್..! ಇಪ್ಪತ್ತು ವರ್ಷಗಳ ಕರಾಳ ಬದುಕನ್ನು ಕಳೆದ ಓಪಿ ಭಾರ್ತಿ ಇವತ್ತಿಗೂ ತನ್ನ ಹೆಮ್ಮೆಯ ಮಗಳ ಬಗ್ಗೆ ಹೇಳಿಕೊಳ್ಳುವುದು ಹೀಗೆ, `ಶೀ ವಾಸ್ ಎಟರ್ನಲ್, ಶೀ ವಾಸ್ ವಂಡರ್ ಫಾರ್ ಎವರ್’

`ನನ್ನ ತಂದೆ, ನನ್ನ ತಾಯಿ, ನನ್ನ ತಮ್ಮ.. ಇವರು ನನ್ನ ಪ್ರಾಣ’ ಎನ್ನುತ್ತಲೇ ಸದಾ ನಗುನಗುತ್ತ ಬದುಕನ್ನು ಸಾರ್ಥಕವಾಗಿಸಿಕೊಂಡವಳು ದಿವ್ಯಾ. ಅವಳ ತಾಯಿ ಮೀತಾ ಹೇಳುವ ಪ್ರಕಾರ, `ದಿವ್ಯಾ ಇನ್ನೋಸೆಂಟ್, ಅವಳಿಗೆ ಬಡವರನ್ನು ಕಂಡ್ರೆ ಪ್ರೀತಿ, ಕಾಳಜಿ. ಮಕ್ಕಳನ್ನು ಕಂಡ್ರೆ ಪ್ರಾಣ. ಇವತ್ತಿಗೂ ದಿವ್ಯಾಳ ಹುಟ್ಟುಹಬ್ಬದ ದಿನ, ಸ್ವತಃ ತಮ್ಮ ಕೈಯ್ಯಾರೆ ಚಾಕ್ಲೆಟ್ ತಯಾರಿಸಿ ಸಮೀಪದ ಕಾನ್ವೆಂಟ್, ಮುನ್ಸಿಪಲ್ ಸ್ಕೂಲ್ ಮಕ್ಕಳಿಗೆ ಹಂಚುತ್ತಾರಂತೆ. ದಿವ್ಯಾ ಬದುಕಿದ್ದಾಗ ಸಮೀಪದ ನರ್ಸರಿಯ ಮಕ್ಕಳನ್ನು ಮಾರ್ಕೆಟ್ಗೆ ಕರೆದುಕೊಂಡು ಹೋಗಿ ಗೊಂಬೆಗಳನ್ನು ಕೊಡಿಸುತ್ತಿದ್ದಳಂತೆ. ಆ ಮೂಲಕ ಮುಗ್ದ ಮಕ್ಕಳ ಜೊತೆ ತಾನೂ ಮಗುವಾಗುತ್ತಿದ್ದಳು ದಿವ್ಯಾ..!. ಮುಂಬೈ ಮಾರ್ಕೆಟ್ ಸಮೀಪದಲ್ಲಿ ಪತಿ ಸಾಜಿದ್ ಆಫೀಸ್ ಮಾಡಿಕೊಂಡಿದ್ದ. ಮಕ್ಕಳಿಗೆ ಆಟಿಕೆ ಖರೀದಿಸಿ ಅಂಗಡಿಯಾತನ ಬಳಿ ಸಾಜಿದ್ ಹತ್ತಿರ ಬಿಲ್ ತೆಗೆದುಕೋ ಅನ್ನುತ್ತಿದ್ದ ದಿವ್ಯಾ ಯಾವತ್ತು ತನ್ನ ಬಳಿ ಹಣವಿಟ್ಟುಕೊಳ್ಳುತ್ತಿರಲಿಲ್ಲ.

ದಿವ್ಯಾ ಎಷ್ಟರ ಮಟ್ಟಿಗೆ ಚೆಲ್ಲು ಹುಡ್ಗಿ ಅಂದರೆ, ಶೂಟಿಂಗ್ ಸಮಯದಲ್ಲೂ ಆಟವಾಡುತ್ತ, ತಮಾಷೆ ಮಾಡುತ್ತ ಇರುತ್ತಿದ್ದಳು. ದಶಕಗಳ ಹಿಂದೆ ಬಾಲಿವುಡ್ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದ `ಶೋಲಾ ಔರ್ ಶಬ್ನಂ’ ಚಿತ್ರೀಕರಣದ ವೇಳೆ ತಮ್ಮನ ಜೊತೆ ಷಟಲ್ ಆಡುತ್ತಿದ್ದ ದಿವ್ಯಾಳನ್ನು ಗದರಿದ ನಿರ್ದೇಶಕ ಡೇವಿಡ್, `ದಿವ್ಯಾ… ನೆಕ್ಸ್ಟ್ ಕ್ಲೈಮ್ಯಾಕ್ಸ್ ಸೀನ್ ಇದೆ, ಗಂಭೀರ ದೃಶ್ಯವದು, ನೀನು ಸೀರಿಯಸ್ ಆಗಿರ್ಬೇಕು.. ಆಟ ಆಡ್ತಾ ಇದ್ದಿಯಲ್ಲ… ‘ ಎಂದರಂತೆ. ಅದಕ್ಕೆ ದಿವ್ಯಾ, `ನಾನು ಸಾಯುವ ಸೀನ್ ಇದ್ದಾಗ ಚಿತ್ರೀಕರಣಕ್ಕೂ ಮುನ್ನ ಸತ್ತಂತಿರಬೇಕಾ? ನೀವು ಶೂಟಿಂಗ್ಗೆ ರೆಡಿ ಮಾಡಿಕೊಳ್ಳಿ, ನನ್ನಿಂದ ಸಣ್ಣ ಮಿಸ್ಟೇಕ್ ಆದ್ರೂ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ’ ಎಂದಳಂತೆ. ದಿವ್ಯಾ ಹಾಕಿದ ಸವಾಲಿಗೆ ಪ್ರತಿಕ್ರಿಯಿಸದೇ ಡೇವಿಡ್ ಚಿತ್ರೀಕರಣ ಶುರುಮಾಡಿದ್ದ. ಶೂಟಿಂಗ್ ಮುಗಿದಿತ್ತು. ರಶಸ್ ನೋಡುತ್ತ ಕುಳಿತ ಡೇವಿಡ್ ಕಣ್ಣು ತುಂಬಿ ಬಂದಿತ್ತು. ಅವಳ ತಾಯಿ ಮೀತಾ ಭಾರ್ತಿಯ ಕೈ ಹಿಡಿದು, `ಅಮ್ಮಾ ನೀವು ಹೆತ್ತಿರೋದು ಅಪ್ಪಟ ವಜ್ರಾನಾ..! ಇವಳಿಗೆ ಏನೂ ಕಲಿಸೋ ಅಗತ್ಯವಿಲ್ಲ, ಕಲೆ ಇವಳಿಗೆ ಒಲಿದಾಗಿದೆ, ಇವಳು ಗಾಡ್ ಗಿಫ್ಟ್. ನಿಜಕ್ಕೂ ನೀವು ಪುಣ್ಯವಂತರು’ ಅಂದಿದ್ದ. ಈ ಅಣಿಮುತ್ತುಗಳನ್ನು ಕೇಳಿದ್ದೇ ಮೀತಾ ಭಾರತಿ ಕಣ್ಣಲ್ಲಿ ಹನಿ ನೀರು.

ದಿವ್ಯಾ ಅದೆಂಥಾ ಅಯಸ್ಕಾಂತಿಯ ಸೌಂದರ್ಯ ಮತ್ತು ಪ್ರತಿಭೆ ಹೊಂದಿದ್ದಾಳೆಂದರೇ, ಅವಳ ಮನೆ ತುಂಬಾ ಪ್ರೊಡ್ಯೂಸರ್ಗಳ ದಂಡೇ ನೆರೆದಿರುತ್ತಿತ್ತು. ಈ ಸಂದರ್ಭದಲ್ಲಿ ದಿವ್ಯಾ… `ಅಮ್ಮ ನಾನು ಸಿನಿಮಾ ಪ್ರಪಂಚಕ್ಕೆ ಹೋದ್ರೆ…. ನನ್ನ ಎಜುಕೇಷನ್ ಗತಿ ಏನು? ಅಂತ ಮುಗ್ಧವಾಗಿ ಕೇಳಿದ್ದಳು. ಜೊತೆಗೆ ಅಪ್ಪಟ ಗೃಹಿಣಿಯಾಗಬೇಕೆಂದು ದಿವ್ಯಾ ಬಯಸಿದ್ದಳು. ದಿವ್ಯಾ ತನ್ನ ತಂದೆಯನ್ನು ಅದೆಷ್ಟು ಇಷ್ಟಪಡುತ್ತಿದ್ದಳೆಂದರೇ, ಒಂದೊಮ್ಮೆ ತಂದೆಗೆ ಸುದೀರ್ಘವಾದ ಪತ್ರವೊಂದನ್ನು ಬರೆದಿಟ್ಟಿದ್ದಳು. ಆ ಪತ್ರದ ಸಾಲೊಂದು ಹೀಗಿತ್ತು. `ಡಾರ್ಲಿಂಗ್ ಡ್ಯಾಡ್, ವಿತ್ ಆಲ್ ಮೈ ಲವ್, ಅಂಡ್ ಲಾಟ್ಸ್, ಲಾಟ್ಸ್, ಲಾಟ್ಸ್ ಆಫ್ ಕಿಸ್ಸಸ್’. ಆ ಪತ್ರವನ್ನು ಇವತ್ತಿಗೂ ಜೋಪಾನ ಮಾಡಿಟ್ಟಿರುವ ತಂದೆಯ ನಿರಂತರ ನಿಟ್ಟುಸಿರು ಕೇಳಿಸಿಕೊಳ್ಳಲು ದಿವ್ಯಾ ಇವತ್ತಿಗೆ ಬದುಕಿಲ್ಲ. ವಿಪರ್ಯಾಸವೆಂದರೇ, ಮಲಗುವ ಮುನ್ನ ದಿಂಬಿನ ಕೆಳಗೆ ದೇವರ ಫೋಟೋ ಇಟ್ಟು ನಿದ್ರೆ ಹೋಗುತ್ತಿದ್ದ ದಿವ್ಯಾಳ ಮೇಲೆ ದೇವರೂ ಮುನಿಸಿಕೊಂಡಿದ್ದ. ಸಾಯುವ ಕಡೇ ದಿನಗಳಲ್ಲಿ ದಿವ್ಯಾ ಬದುಕಿದ್ದ ರೀತಿಯೂ ವಿಚಿತ್ರವಾಗಿತ್ತು. ತಾನು ಆರಾಧಿಸುತ್ತಿದ್ದ ಪ್ರೀತಿಯ ತಂದೆಗೂ ಹೇಳದೇ ಮದ್ವೆಯಾದ ದಿವ್ಯಾ, ಸಾಯುವ ಹದಿನೈದು ನಿಮಿಷ ಮೊದಲು, ತನ್ನ ತಂದೆಯ ಜೊತೆ ಮಗುವಿನಂತೆ ಆಟವಾಡಿದ್ದಳು.

ದಿವ್ಯಾಭಾರ್ತಿಗೆ ಚಿತ್ರರಂಗದ ಪ್ರವೇಶ ಕಷ್ಟದ ವಿಚಾರವಾಗಿಲ್ಲದ್ದಿದ್ದರೂ ಆರಂಭದ ಒಂದೆರಡು ಚಿತ್ರಗಳಲ್ಲಿ ಅವಕಾಶವಂಚಿತಳಾದಳು. ಅವಮಾನ ಎದುರಿಸಬೇಕಾಯಿತು. ದಿಲೀಪ್ ಶಂಕರ್ ಜೊತೆ `ರುದ್ರವತಾರ್ಗೆ’ ಸಹಿ ಹಾಕಿದರೂ, ಆ ಚಿತ್ರ ಸೆಟ್ಟೇರಲಿಲ್ಲ. ಇನ್ನು ಕೀರ್ತಿಕುಮಾರ್ ಜೊತೆ `ರಾಧಾ ಕಾ ಸಂಗಮ್’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದರೂ ದಿವ್ಯಾ ತನ್ನ ಮ್ಯಾನರಿಸಂಗೆ ಸೂಟ್ ಆಗುವುದಿಲ್ಲ ಅಂತ ಅವಳಿಗೆ ಚಿತ್ರದಿಂದ ಕೋಕ್ ಕೊಟ್ಟಿದ್ದ ಕೀರ್ತಿಕುಮಾರ್. ಆನಂತರ ಸುಭಾಷ್ ಘಾಯ್ ನಿರ್ಮಾಣದ `ಸೌಧಾಗರ್’ ಚಿತ್ರ ತಂಡವೂ ದಿವ್ಯಾಳ ಕೈ ಬಿಟ್ಟಿತ್ತು. ಇದು ದಿವ್ಯಾಳ ಪಾಲಿನ ಕಷ್ಟದ ದಿನಗಳು. ಸಿನಿಮಾಕ್ಕೆ ಗುಡ್ ಬೈ ಹೇಳಿ, ಓದೋಣ ಅಂದ್ರೂ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಕರೆಸ್ಪಾಂಡೆನ್ಸ್ ಮಾಡೋಣ ಅಂದ್ರು, ಮಾರ್ಕ್ಸ್ ಎರಡಂಕಿಯನ್ನು ದಾಟಿರಲಿಲ್ಲ. ಡಿಪ್ರೆಸ್ ಆಗಿದ್ದ ದಿವ್ಯಾಳನ್ನು ಕೈ ಬೀಸಿ ಕರೆದದ್ದು ತೆಲುಗು ಚಿತ್ರರಂಗ. ಬೋನಿ ಕಪೂರ್ ಕೃಪೆಯಿಂದ, ವಿಕ್ಟರಿ ವೆಂಕಟೇಶ್ ಜೊತೆ `ಬೊಬ್ಬಿಲಿ ರಾಜಾ’ ಚಿತ್ರದಲ್ಲಿ ದಿವ್ಯಾ ನಟಿಸಿದಳು. ಬೊಬ್ಬಿಲಿ ರಾಜಾ’ ಯಶಸ್ಸಾಗಿದ್ದೇ ದಿವ್ಯಾಳ ಸಿನಿಮಾ ಕೆರಿಯರ್ನಲ್ಲಿ ದಾಖಲೆಯೊಂದು ನಿರ್ಮಾಣವಾಗಿತ್ತು. ಇವತ್ತಿಗೂ ಆ ದಾಖಲೆಯನ್ನು ಯಾರಿಂದಲೂ ಅಳಿಸಲಾಗಿಲ್ಲ. `ಬೊಬ್ಬಿಲಿ ರಾಜಾ’ ಯಶಸ್ಸಿನ ಬೆನ್ನಲ್ಲೇ, ದಿವ್ಯಾ ನಟಿಸಿದ್ದ `ವಿಶ್ವಾತ್ಮ’, `ಶೋಲಾ ಔರ್ ಶಬ್ನಮ್’ ಹಾಗೂ `ದಿಲ್ ಕಾ ಕ್ಯಾ ಕಸೂರ್’ ಚಿತ್ರ ಸತತ ಮೂರು ವಾರ ಒಂದರ ಹಿಂದೆ ಒಂದು ಬಿಡುಗಡೆಯಾಗಿ ದಾಖಲೆ ನಿರ್ಮಿಸಿತ್ತು. ಆದ್ರೆ ಶೋಲಾ ಔರ್ ಶಬ್ನಮ್ ಬಿಟ್ಟರೇ ಮಿಕ್ಕ ಎರಡು ಚಿತ್ರಗಳು ಹಿಟ್ಟಾಗಲಿಲ್ಲ. ಈ ಸಂದರ್ಭದಲ್ಲಿ ದಿವ್ಯಾಳ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದು ರಿಷಿಕಪೂರ್, ಶಾರೂಕ್ ಜೊತೆ ನಟಿಸಿದ್ದ ಬ್ಲಾಕ್ ಬಸ್ಟರ್ ಚಿತ್ರ ದಿವಾನ.

ಟ್ರಯಾಂಗಲ್ ಪ್ರೇಮಕಾವ್ಯದ `ದಿವಾನ’ ಚಿತ್ರ ಹಿಟ್ಟಾದನಂತರ ದಿವ್ಯಾ ಫುಲ್ ಟೈಂ ಬ್ಯುಸಿ ಆಗಿಬಿಟ್ಟಿದ್ದಳು. ಹಲವಾರು ಅವಾರ್ಡ್ ಗಳು ಅವಳನ್ನು ಹುಡುಕಿಕೊಂಡು ಬಂದಿತ್ತು. ಇದಕ್ಕೂ ಮುನ್ನ `ಶೋಲಾ ಔರ್ ಶಬನಂ’ ಚಿತ್ರೀಕರಣದ ವೇಳೆ ನಿರ್ಮಾಪಕ ಸಾಜಿದ್ ನಾದಿಯಾವಾಲನ ಪರಿಚಯವಾಗಿತ್ತು, ಪರಿಚಯ ಪ್ರೇಮಕ್ಕೆ ತಿರುಗಿ ಮದ್ವೆ ವಿಚಾರ ಪ್ರಸ್ತಾಪವಾದಾಗ, ದಿವ್ಯಾಳ ತಂದೆ ಓಪಿ ಭಾರ್ತಿ ಒಪ್ಪಲಿಲ್ಲ. ಅಪ್ಪನಿಗೆ ಹೇಳದೇ ಸಾಜಿದ್ ಜೊತೆ ರಿಜಿಸ್ಟ್ರಾರ್ ಮದ್ವೆಯಾದಳು. ಮದ್ವೆಯಾದ ನಂತರ ಎಂದಿನಂತೆ ಹೆತ್ತವರ ಜೊತೆಯಲ್ಲೇ ಇದ್ದಳು. ನಾಲ್ಕು ತಿಂಗಳ ನಂತರ ಒಂದು ಶುಭ ದೀಪಾವಳಿಯ ಸಂದರ್ಭದಲ್ಲಿ ಸಾಜಿದ್ ದಿವ್ಯಾಳ ತಂದೆಯ ಮುಂದೆ ನಿಂತು ತಾನು ದಿವ್ಯಾಳನ್ನು ಮದ್ವೆಯಾದ ವಿಚಾರ ಹೇಳಿದ್ದ. ಓಪಿ ಭಾರ್ತಿ… ದೂಸ್ರಾ ಮಾತಾಡಲಿಲ್ಲ, ಒಂದೊಳ್ಳೆ ಸಂದರ್ಭದಲ್ಲಿ ಈ ವಿಚಾರವನ್ನ ಅನೌನ್ಸ್ ಮಾಡೋಣ, ಈಗ ಬೇಡ ಅಂದುಬಿಟ್ಟಿದ್ದರು.

ಏಪ್ರಿಲ್ 5, 1993. ಇಡೀ ಚಿತ್ರರಂಗ ಒಂದು ಕ್ಷಣ ಬೆಚ್ಚಿ ಬಿದ್ದ ದಿನವದು. ಅವತ್ತು ಬೆಳಿಗ್ಗೆ ತಂದೆಯ ಮನೆಗೆ ಬಂದ ದಿವ್ಯಾ, ಅಪ್ಪನ ಮಡಿಲಲ್ಲಿ ತಲೆಯಿಟ್ಟು ಕಾಲು ನೋವು ಅಂತ ಮಲಗಿದ್ದಾಳೆ. ಆನಂತರ ಅಪ್ಪನ ಜೊತೆ ಬಾಂದ್ರಾದಲ್ಲಿರೋ ಹಳೇ ಫ್ಲಾಟ್ ಗೆ ಹೋಗಿದ್ದಾಳೆ. ಅಲ್ಲಿದ್ದಾಗಲೇ ಮಾರನೇ ದಿನದ ಮಾರಿಷಸ್ ಶೂಟಿಂಗ್ ಬಗ್ಗೆ ಫೋನ್ ಬಂದಿದೆ. ಆಗ ಸಮಯ ರಾತ್ರಿ ಹತ್ತರ ಆಸುಪಾಸು. ಸ್ವಲ್ಪ ಹೊತ್ತು ಅಪ್ಪನ ಜೊತೆ, ಬಾಲ್ಯದ ಗೆಳೆಯರ ಜೊತೆ ಆಡುತ್ತ, ಹಾಡುತ್ತ, ತಮಾಷೆ ಮಾಡುತ್ತ ಕಾಲ ಕಳೆದ ದಿವ್ಯಾಳನ್ನ ತಮ್ಮ ಕುನಾಲ್ ತನ್ನ ಜೀಪಿನಲ್ಲಿ ವರ್ಸೋವಾದಲ್ಲಿರುವ ತುಳಸಿ ಅಪಾರ್ಟ್ ಮೆಂಟಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದ. ದಿವ್ಯಾಳನ್ನು ತುಲಸಿ ಅಪಾರ್ಟ್ ಮೆಂಟಿಗೆ ಬಿಟ್ಟು ಕುನಾಲ್ ಮನೆಗೆ ವಾಪಾಸಾದ ನಂತರ ದಿವ್ಯಾ ಅಪಾರ್ಟ್ ಮೆಂಟಿನ ಐದನೇ ಮಹಡಿಯಲ್ಲಿದ್ದ ಫ್ಲಾಟಿನ ಬಾಲ್ಕನಿಯ ಬಳಿ ಬಂದು ನಿಂತಿದ್ದಾಳೆ. ಅವತ್ತು ಆ ಫ್ಲಾಟ್ ನಲ್ಲಿ ದಿವ್ಯಾಳನ್ನು ಇನ್ನಿಲ್ಲದಂತೆ ಇಷ್ಟಪಡುತ್ತಿದ್ದ ಮೇಡ್ ಅಮೃತ, ಡ್ರೆಸ್ ಡಿಸೈನರ್ ನೀತಾ ಲುಲ್ಲಾ, ನೀತಾಳ ಗಂಡ ಡಾಕ್ಟರ್ ಶ್ಯಾಮ್ ಮಾತ್ರ ಇದ್ದರು. ಅದೇನಾಯ್ತೋ ಗೊತ್ತಿಲ್ಲ. ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಐದನೇ ಮಹಡಿಯಿಂದ ಗೊಂಬೆಯಂತೆ ನೆಲಕ್ಕೆ ಬಿದ್ದಿದ್ದಳು ದಿವ್ಯಾಭಾರ್ತಿ. ತಲೆ ಒಡೆದಿತ್ತು, ಕಿವಿ, ಮೂಗಿನಲ್ಲಿ ರಕ್ತ ಒಸರಿತ್ತು. ಕೇವಲ ಹತ್ತೊಂಬತ್ತರ ಪ್ರಾಯದಲ್ಲೇ ಮಹಾನ್ ಸಾಧನೆಗೈದ ಹಕ್ಕಿಯೊಂದು ಆ ಮೂಲಕ ತನ್ನ ಹಾರಾಟವನ್ನು ನಿಲ್ಲಿಸಿತ್ತು.

ಯಾವ ಮುಖವನ್ನು ಪದೇ ಪದೇ ನೋಡಬೇಕು ಅಂತ ಮನಸ್ಸು ಹಪಾಹಪಿಸುತ್ತಿತ್ತೋ, ಅದೇ ಮನಸ್ಸು ದಿವ್ಯಾಳ ಒಡೆದ ಮುಖ, ನಿರ್ಜೀವ ದೇಹವನ್ನು ನೋಡಿ ಗರಬಡಿದು ಹೋಗಿತ್ತು. ದಿವ್ಯಾ ಇನ್ನಿಲ್ಲ ಎಂಬ ಕಲ್ಪನೆಯೇ ಇವತ್ತಿಗೂ ಯಮಯಾತನೆಯನ್ನು ಕೊಡುತ್ತದೆ. ಆದರೆ ದಿವ್ಯಾ ಇವತ್ತಿಗೂ ಅವಳ ಸಾಧನೆಗಳಿಂದ ಜೀವಂತವಾಗಿದ್ದಾಳೆ. `ಶಿ ಈಸ್ ಎಟರ್ನಲ್, ಶಿ ಈಸ್ ವಂಡರ್ ಫಾರ್ ಎವರ್’, ಲವ್ ಯೂ ದಿವ್ಯಾ….!

If you Like this Story , Like us on Facebook  The New India Times

POPULAR  STORIES :

ಯೂಟ್ಯೂಬ್ ನಲ್ಲಿ ಕಾಣಿಸಿದವಳೇ ಸೋದರಿಯಾಗಿದ್ದಳು..! ಇದು ಅವಳಿ-ಜವಳಿ ಸೋದರಿಯರ ಬ್ಯೂಟಿಫುಲ್ ಸ್ಟೋರಿ…!

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

1 COMMENT

LEAVE A REPLY

Please enter your comment!
Please enter your name here