ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ ಟಿಡಿಸಿ) ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸೇವೆಗೆ ಕೆಲವು ಬದಲಾವಣೆ ತಂದು ಮರು ಚಾಲನೆ ನೀಡಲು ಮುಂದಾಗಿದೆ. ರಾಜ್ಯದ ಪ್ರವಾಸಿತಾಣಗಳ ಭೇಟಿಗೆ ಅವಕಾಶ ನೀಡುವ ಉದ್ದೇಶದಿಂದ 10 ವರ್ಷಗಳ ಹಿಂದೆಯೇ ಗೋಲ್ಡನ್ ಚಾರಿಯಟ್ ಸೇವೆ ಆರಂಭಿಸಲಾಗಿತ್ತು.
ಮಲ್ಪೆ ಗ್ರೂಪ್ ಆಫ್ ಹೋಟೆಲ್ ಗೆ ನೀಡಿದ್ದ ಟೆಂಡರ್ ವರ್ಷದ ಆರಂಭದಲ್ಲಿ ಕೊನೆಗೊಂಡಿತ್ತು. ಇದೀಗ ಕೆಎಸ್ ಟಿಡಿಸಿ ಈ ರೈಲು ಸೇವೆಯ ಮೂಲ ಸೌಕರ್ಯ ಮತ್ತು ವಾಣಿಜ್ಯ ವಹಿವಾಟು ನೋಡಿಕೊಳ್ಳಲು ಮತ್ತೆ ಟೆಂಡರ್ ಆಹ್ವಾನಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಟೆಂಡರ್ ಹಾಕಲು ಅವಕಾಶವಿದ್ದು, ಅಕ್ಟೋಬರ್ 20ರವೇಳೆಗೆ ಎಲ್ಲಾ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ.
ರೈಲಿನ ಒಳಾಂಗಣ ವಿನ್ಯಾಸದಲ್ಲಿಯೂ ಅನೇಕ ಬದಲಾವಣೆ ಮಾಡಿ ಮರುಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ರೈಲಿನಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಆರೋಪವಿದೆ. ಹತ್ತು ವರ್ಷಗಳಲ್ಲಿ 40ಕೋಟಿ ರೂ ನಷ್ಟವಾಗಿದೆ ಎಂದು ಹೇಳಲಾಗಿದ್ದು, ಇದನ್ನು ‘ಹಳಿ’ಗೆ ತರಲಾಗಲು ಕೆಎಸ್ ಟಿಡಿಸಿ ಮುಂದಾಗಿದೆ.
ವಿನ್ಯಾಸ ಬದಲಾವಣೆಗೆ ಅವಕಾಶ ಬೇಕಿರೋದ್ರಿಂದ ಈ ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಇದರ ಸಂಚಾರ ಇರಲ್ಲ. ನೂತನ ಮಾದರಿಯಲ್ಲಿ ಸಿದ್ಧವಾದ ಮೇಲೆ ಸಂಚಾರ ಆರಂಭವಾಗಲಿದೆ.