60 ವರ್ಷದ ವ್ಯಕ್ತಿಯೊಬ್ಬರ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಬಲಗಣ್ಣಿನ ನೋವಿನಿಂದ ಅನೇಕ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಂದಾಪುರದ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞ ಡಾ. ಶ್ರೀಕಾಂತ್ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಕಣ್ಣಲ್ಲಿ ಜೀವಂತವಾಗಿ ಹುಳ ಹರಿದಾಡುತ್ತಿರುವುದು ಪತ್ತೆಯಾಗಿದೆ.
ಕಣ್ಣೊಳಗಿನ ಹುಳವನ್ನು ಔಷಧಿಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇದ್ದರಿಂದ ಆ ಹುಳವನ್ನು ಒಂದು ಬದಿಗೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತವಾಗಿ ತೆಗೆದಿದ್ದಾರೆ.
ಈ ಹುಳು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದ್ದು. ಇದು ಸೊಳ್ಳೆಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾರ್ವಾಗಳು ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.