ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-14
ಮಹಾಕ್ಷತ್ರಿಯ
ಮಹಾಕ್ಷತ್ರಿಯ ಸಿನ್ಮಾದ ಅದ್ಭುತ ಹಾಡು ಈ ಭೂಮಿ ಬಣ್ಣದ ಬುಗುರಿ….ಆ ಶಿವನೇ ಚಾಟಿ ಕಾಣೋ… ಸಿನ್ಮಾ ಅಷ್ಟೇನು ಹಿಟ್ ಆಗ್ಲಿಲ್ಲ. ಆದ್ರೆ ಹಾಡು ಮಾತ್ರ ಸೂಪರ್ ಡೂಪರ್ ಹಿಟ್ ಆಗಿ ಈಗಲೂ ಎಷ್ಟು ಬಾರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ನಿಸುವಂತ ಸಾಹಿತ್ಯ, ಸಂಗೀತ. ನಾದ ಬ್ರಹ್ಮ ಹಂಸಲೇಖ ಬರೆದ ಬ್ಯುಟಿಫುಲ್ ಸಾಂಗ್… ಹಾಡಿನಲ್ಲಿ ಬುದ್ದಿಮಾತಿದೆ, ವೇದಾಂತವಿದೆ. ತಿಳುವಳಿಕೆ ಇದೆ. ಬದುಕನ್ನು ಹೇಗೆ ಜೀವಿಸಬೇಕೆಂಬ ಎಚ್ಚರಿಕೆ ಮಾತಿದೆ.
ಲಹರಿ ಆಡಿಯೋ ಕಂಪನಿಯ ಮಾಲಿಕರಾದ ಮನೋಹರ್ ನಾಯ್ಡು ಹಂಸಲೇಖ ಜೊತೆ ಚಿತ್ರದ ಹಾಡುಗಳ ಬಗ್ಗೆ ಮಾತಿಗಿಳಿದಾಗ, ಲಹರಿ ಹಾಡುಗಳು ಅಂದ್ರೆ ಮಧುರ ಹಾಡುಗಳು ಅನ್ನೋ ಮಾತಿದೆ. ಕಸ್ತೂರಿ ನಿವಾಸದ ಹಾಡುಗಳಂತೆ ಈ ಚಿತ್ರದ ಸಾಂಗ್ಸ್‍ನ್ನು ಮಾಡಿ ಅಂತ ಹೇಳಿದ್ರು. ಆಗ ಮೆಲ್ಲನೆ ನಕ್ಕು ಸುಮ್ಮನಾದ ಹಂಸಲೇಖ ಕುಳಿತಲ್ಲಿಂದ ಮೇಲೆದ್ದರು. ಬೆಂಗಳೂರು ಅನ್ನೋದು ಮಾಯಾನಗರಿ, ಶಬ್ದನಗರಿ, ಸುಂದರ ನಗರಿ ಅಂತ ತಮಾಷೆಯಾಗಿ ಹೇಳುತ್ತಾ ಹೋಟೆಲ್ ರೂಮಿನ ಕರ್ಟನ್ ಸರಿಸಿದ್ರು. ಎದುರಿಗೆ ಹಸಿರಿನ ರೇಸ್‍ಕೋರ್ಸ್ ಕಣ್ಣಿಗೆ ಬಿತ್ತು. ಇನ್ನು ತಮ್ಮಷ್ಟಕ್ಕೆ ತಾವೇ ಏನೋ ಗುನುಗಿಕೊಂಡ ಹಂಸಲೇಖ, ಒಂದೆರಡು ನಿಮಿಷಗಳ ನಂತ್ರ ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ, ಈ ಬಾಳು ಸುಂದರ ನಗರಿ, ನೀ ಇದರ ಮೇಟಿ ಕಣೋ ಅನ್ನೋ ಸಾಲುಗಳನ್ನ ಹಾಗೇ ಹರಿಬಿಟ್ರು. ನಂತ್ರ ಮುಂದಿನ ಸಾಲುಗಳನ್ನು ಒಂದೊಂದಾಗಿ ಹೇಳಿಬಿಟ್ರು.
ಎದುರಿಗೆ ಕೂತವರು ಬೆಕ್ಕಸ ಬೆರಗಾಗಿ ನೋಡ್ತಾ ಇದ್ರು. ಈ ಹಾಡು ಸೂಪರ್ ಹಿಟ್ ಆಗುತ್ತೆ ಬಿಡಿ ಅಂತಂದ್ರು ನಾಯ್ಡು ಜಿ. ಇನ್ನು ಹಾಡು ಹಾಡಿದ ಎಸ್.ಪಿ ಬಾಲಸುಬ್ರಹ್ಮಣ್ಯ ಕೂಡ ನೀವು ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಾ ಅನ್ನೋ ಕಾಂಪ್ಲಿಮೆಂಟ್ಸ್ ಕೊಟ್ಟಿದ್ರು. ಮಡಿಕೇರಿಯಲ್ಲಿ ಹಾಡಿನ ಶೂಟಿಂಗ್ ನಡೆದದ್ದು. ಅಲ್ಲಿದ್ದ ಎಲ್ರೂ ಇದೇ ಹಾಡನ್ನ ಗುನುಗುನಿಸ್ತಿದ್ರು. ಆಗ ಡಾ| ವಿಷ್ಣುವರ್ಧನ್ ಹೇಳಿದ್ದು, ಡೆಫಿನಿಟ್ಲೀ ದಿಸ್ ಸಾಂಗ್ ವಿಲ್ ಬಿ ಸೂಪರ್ ಹಿಟ್ ಐ ಸೇ ಅಂತ ಭವಿಷ್ಯ ನುಡಿದುಬಿಟ್ರು. ವಿಷ್ಣು ಜಿ ಹೇಳಿದಂತೆಯೇ ಹಾಡು ಇಂದಿಗೂ ಅಜರಾಮರವಾಗಿ ಉಳಿದಿದೆ.