ಒಮ್ಮೆಯಾದ್ರು ಕಣ್ತುಂಬಿಕೊಳ್ಳಿ ದೀಪೋತ್ಸವದ ಸಂಭ್ರಮವ…

1
69

ಕಾರ್ತಿಕ ಮಾಸ ಎಂದೊಡನೆ ನೆನಪಿಗೆ ಬರೋದು ದೀಪಗಳ ಸಾಲು. ಸಂಭ್ರಮದ ದೀಪೋತ್ಸವ…! ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿಯ ಭಾಗಗಳಲ್ಲಿ ದೀಪೋತ್ಸವದ ಸಡಗರ ಮನೆ ಮಾಡಿದೆ.
ದೀಪ ಬೆಳಕಿನ, ಬೆಳಕು ಜ್ಞಾನದ ಸಂಕೇತ. ಮೂರು ಲೋಕಗಳ ಅಂಧಕಾರ ತೊಡೆದು ಇಡೀ ಜಗತ್ತು ಜೋತ್ಯಿರ್ಮಯವಾಗಲಿ ಎಂಬ ಸಂಕಲ್ಪದಲ್ಲಿ ದೀಪೋತ್ಸವ ಆಚರಿಸ್ತೀವಿ.


ಅಂತೆಯೇ ಮಂಗಳೂರಿನ ಸುಪ್ರಸಿದ್ಧ ಶ್ರೀ ಮಂಗಳಾದೇವಿ ದೇವಾಲಯದಲ್ಲಿಯೂ ಕಾರ್ತಿಕ ಮಾಸದ ಐತಿಹಾಸಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿ ಕಾರ್ತಿಕ ಮಾಸದ ಕೃಷ್ಣಪಕ್ಷದ ಬಹುಳ ನವಮಿಯಂದು ಲಕ್ಷದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ನಾಳೆ ವಿಜೃಂಬಣೆಯ ದೀಪೋತ್ಸವ ಜರಗಲಿದೆ. ಸಾಂಪ್ರದಾಯಿಕ ಗುರ್ಜಿ ದೀಪಾಲಂಕರ ಇಲ್ಲಿ ವೈಶಿಷ್ಟ್ಯಗಳಲ್ಲೊಂದು.
ಸಂಜೆ 6 ಗಂಟೆಗೆ ಮಹಾಪೂಜೆ, ಬಳಿಕ ಪಲ್ಲಕ್ಕಿ ಉತ್ಸವ, ಭಂಡಿ ಉತ್ಸವ ನಡೆಯುತ್ತೆ. ಜೊತೆಗೆ ಶಮಿಕಟ್ಟೆ ಪೂಜೆ ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.


ಮಂಗಳಾಂಭೆ ದೇವಿಯ ದೀಪೋತ್ಸವದ ಮತ್ತೊಂದು ಪ್ರಮುಖ ವಿಶಿಷ್ಟತೆ ಎಂದರೆ ನಿಶ್ಚಲ ರಥ. ಮಂಗಳೂರು ಆಡು ಭಾಷೆಯಲ್ಲಿ ದಿಂಢು ಅಥವಾ ಗುರ್ಜಿ ಅಂತಾರೆ. ಗುರ್ಜಿ ಅಂದ್ರೆ ಗೂಟ ಎಂದರ್ಥ. ಮರದ ನಾಲ್ಕು ಕಂಬಗಳನ್ನು ನೆಟ್ಟು, ರಥ ನಿರ್ಮಿಸಿ ಆಚರಿಸೋ ಸಾಂಪ್ರದಾಯಿಕ ಆಚರಣೆ ಇದು. ಬೇರೆ ಕಡೆಯ ಗುರ್ಜಿಗೂ ಈ ಗುರ್ಜಿಗೂ ವ್ಯತ್ಯಾಸವಿದೆ. ಇಲ್ಲಿನ ಗುರ್ಜಿವಿಶೇಷ ವಿನ್ಯಾಸ ತಿರುಗುವ ಗುರ್ಜಿಯಾಗಿದೆ.
ಹೀಗೆ ಹತ್ತು ಹಲವು ವಿಶಿಷ್ಟ ಆಚರಣೆಗಳ ಮೂಲಕ ಮಂಗಳದೇವಿ ದೀಪೋತ್ಸವ ಗಮನ ಸೆಳೆಯುತ್ತದೆ. ಒಮ್ಮೆ ಈ ದೀಪೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರೆ ಮತ್ತೆ ಮತ್ತೆ ದೀಪೋತ್ಸವದಲ್ಲಿ ಭಾಗಿಯಾಗಬೇಕೆಂದೆನಿಸುತ್ತೆ.

ಯಾಂತ್ರಿಕ ಜೀವನದ ಜಂಜಾಟದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಇಂತಹ ಸಾಂಪ್ರಾದಯಿಕ ಆಚರಣೆಗಳಲ್ಲಿ ಭಾಗಿಯಾದಲ್ಲಿ ಮನಸ್ಸು ಹಗುರಾಗುತ್ತೆ, ಹೊಸ ಉತ್ಸಾಹ, ಹುರುಪು ಮೂಡುತ್ತೆ. ದೇವಿಯ ಅನುಗ್ರಹ ಜೊತೆಗಿರುತ್ತೆ. ಒಮ್ಮೆಯಾದ್ರೂ ದೀಪೋತ್ಸವದ ಸಂಭ್ರಮ ಕಣ್ತುಂಬಿಕೊಳ್ಳಿ.

1 COMMENT

LEAVE A REPLY

Please enter your comment!
Please enter your name here