ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-12
ನಾಗರಹಾವು
ಕೆಲವೊಮ್ಮೆ ಆಫ್ ಸ್ಕ್ರೀನ್‍ನಲ್ಲಿ ನಡೆದ ಸಾಕಷ್ಟು ಘಟನೆಗಳೇ ಒಂದು ಹಾಡು ಹುಟ್ಟಲು ಕಾರಣ. ಇಂಥಾ ಹಾಡುಗಳ ಸಾಲಿನಲ್ಲಿ ನಿಲ್ಲೊ ಮತ್ತೊಂದು ಹಾಡು ಅಂದ್ರೆ ನಾಗರಹಾವು ಸಿನ್ಮಾದ ‘ಬಾರೆ ಬಾರೆ ಚೆಂದದ ಚೆಲುವಿನ ತಾರೆ’ ಅನ್ನೋ ಮೆಲೋಡಿ ಸಾಂಗ್.
ಆಗಿನ ಕಾಲಕ್ಕೆ ಸ್ಲೋ ಮೋಶನ್ ಹಾಗೂ ಮಾಮೂಲಿ ಸ್ಪೀಡಿನ ಹಾಡನ್ನ ಮಾಡಿದ್ರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇದು ನಿಜಕ್ಕೂ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿತ್ತು. ಇನ್ನು ಗೆಜ್ಜೆಪೂಜೆ ಸಿನ್ಮಾದಲ್ಲಿ ನಾಯಕಿಯ ತಂಗಿಯ ರೋಲ್‍ಗೆ ಬಂದ ಆರತಿ ದಿನಕಳೆದಂತೆ ಪುಟ್ಟಣ್ಣ ಮನಸ್ಸಿಗೂ ಇಳಿದ್ರು. ಆರತಿಯನ್ನ ಪುಟ್ಟಣ್ಣ ನಿಷ್ಕಲ್ಮಶವಾಗಿ ಮಾಡ್ತಾ ಇದ್ರು. ಮನಸ್ಸು ಕದ್ದವಳ ಮನಸೂರೆ ಮಾಡೋಕೆ ಇಂಥ ಅದ್ಭುತ ಶೃಂಗಾರಮಯ ಸಾಲುಗಳನ್ನ ಖುದ್ದಾಗಿ ಬರೆಸ್ತಾ ಪ್ರೀತಿ ಮಾಡ್ತ ಇದ್ರು. ಶೂಟಿಂಗ್ ಟೈಮಲ್ಲಿ ಆರತಿಯನ್ನು ಹೊಗಳುತ್ತಾ, ಪ್ರೋತ್ಸಾಹಿಸುತ್ತಾ, ಜೊತೆಗೆ ತಾವೂ ಕರಗುತ್ತಾ ಕಳೆದು ಹೋಗ್ತಿದ್ರು. ಆರತಿ ನನ್ನನ್ನು ಬಿಟ್ಟು ಹೋಗ್ಬಾರ್ದು, ಅಂತ ತಮ್ಮ ಆತ್ಮೀಯ ಗೀತರಚನೆಕಾರ ವಿಜಯನರಸಿಂಹ ಅವ್ರ ಬಳಿ ಹೇಳಿಕೊಂಡಿದ್ರಂತೆ.
ನಾಗರಹಾವು ಹಾಡುಗಳನ್ನ ಶಿವನಸಮುದ್ರದಲ್ಲಿರೋ ಒಂದು ಬಂಗಲೆ ಮುಂದೆ ಜಮಖಾನ ಹಾಸ್ಕೊಂಡು ಬರೆಯಲು ಕುಳಿತ್ರು ವಿಜಯನಾರಸಿಂಹ ಜೊತೆಗೆ ಪುಟ್ಟಣ್ಣ , ಮ್ಯೂಸಿಕ್ ಡೈರೆಕ್ಟರ್ ವಿಜಯ್ ಭಾಸ್ಕರ್ ಕೂಡ ಇದ್ರು. ಪುಟ್ಟಣ್ಣ ಅವ್ರ ಮನದಲ್ಲಿದ್ದ ಎಲ್ಲ ಭಾವನೆಗಳನ್ನೇ ಕೇಳಿ ಕೇಳಿ ಪದಗಳಾಗಿ ಜೊಡಿಸಿ ಸುಂದರವಾದ ಹಾಡನ್ನು ಬರೆದ್ರು ವಿಜಯನರಸಿಂಹ. ಪುಟ್ಟಣ್ಣನ ಪ್ರೀತಿಗೆ ಸಾಕ್ಷಿಯಂತೆ ಹಾಡುಗಳು ಬರ್ತಾನೆ ಇದ್ವು. ಈಗ ಈ ಹಾಡು ಪ್ರೇಮಿಗಳಿಗೆ ಗಿಫ್ಟ್ ಆದಂತಾಗಿದ್ದು, ಈ ಹಾಡನ್ನ ಇಷ್ಟಪಡದವರೇ ಇಲ್ಲ.