ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-15
ನಾಗರಹಾವು
ಒಂದು ಸಿನ್ಮಾದಲ್ಲಿ ಏನಿಲ್ಲಾ ಅಂದ್ರು ನಾಲ್ಕರಿಂದ ಐದು ಹಾಡುಗಳು ಸಾಮಾನ್ಯ. ಆದ್ರೆ ಕೆಲವೊಮ್ಮೆ ಪ್ಯಾಚ್‍ಅಪ್ ಹಾಡುಗಳು ಸೇರಿ ಚಿತ್ರಕ್ಕೆ ಇನ್ನಷ್ಟು ಕಲರ್‍ಫುಲ್ ಬಣ್ಣ ತಂದುಕೊಡುತ್ತೆ. ಇಂಥ ಪ್ಯಾಚ್‍ಅಪ್ ಸಾಂಗ್‍ನಲ್ಲಿ ನಾಗರಹಾವು ಚಿತ್ರದ ಕರ್ಪೂರದ ಗೊಂಬೆ ನಾನು ಮಿಂಚಂತೆ ಬಳಿಬಂದೆ ನೀನು ಹಾಡು. ಮೆಲೋಡಿಯಾಗಿ, ಕೇಳಿದರೆ ಮತ್ತೊಮ್ಮೆ ಕೇಳಬೇಕು ಅನ್ನಿಸುವಂತ ಮಧುರ ಗೀತೆ. ನಾಗರಹಾವು ಸಿನ್ಮಾ ನೋಡಿದೋರಿಗೆಲ್ಲಾ ಈ ಹಾಡು ದಿಡೀರನೆ ಬಂದು ಹೋಗೊದು ಕಂಡಿರತ್ತೆ. ನಾಯಕನ ಪ್ರೀತಿಯಲ್ಲಿ ಮುಳುಗಿ ಹೋದ ನಾಯಕಿ ಕರಗಿ ನೀರಾಗಿ ಜಿಂಕೆಯಂತೆ ಹಾಡಿ ಕುಣಿಯುವ ಸಂದರ್ಭದಲ್ಲಿ ಬರೋ ಹಾಡಿದು. ಮುಂದಿನ ಹಲವು ದಶಕಗಳವರೆಗೂ ಸೂಪರ್ ಹಿಟ್ ಆಗಿ ಉಳಿಯೋ ತಾಕತ್ತು ಈ ಹಾಡಿಗಿದೆ ಅಂದ್ರೆ ತಪ್ಪಾಗಲಾರದು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಾಕಷ್ಟು ಸಿನ್ಮಾಗಳಿಗೆ ಸಾಹಿತ್ಯ ಬರೆದ ಆರ್. ಎನ್ ಜಯಗೋಪಾಲ್ ನಾಗರಹಾವು ಚಿತ್ರದ ಮುಹೂರ್ತಕ್ಕೆ ವಿಶ್ ಮಾಡೋಕೆ ಬಂದಾಗ ಸಿಚುವೇಶನ್ ವಿವರಿಸಿ ಹಾಡು ಬರೆದುಕೊಡು ಅಂದ್ರಂತೆ ಪುಟ್ಟಣ್ಣ. ಈಗಿನ ಕಾಲದವರಾದರೆ ನಾಳೆ ಬರೆದು ಕೊಡ್ತೀನಿ ಅಂತಿದ್ರೇನೋ ಆದ್ರೆ ಜಯಗೋಪಾಲ್ ಸುತ್ತ-ಮುತ್ತಲೂ ನೊಡಿದ್ರು. ಮುಹೂರ್ತದಲ್ಲಿ ಪೂಜೆಗೆಂದು ಹಚ್ಚಿಟ್ಟಿದ್ದ ದೀಪ ಗಾಳಿಗೆ ಮಾಡುತ್ತಿರೋ ನರ್ತನವನ್ನ ನೋಡಿದ್ರು. ಇದ್ರ ಜೊತೆ ಗಂದದ ಕಡ್ಡಿಯ ಘಮ ಕೂಡ ಹಾಡಿಗೆ ನೆರವಾಗಿತ್ತು. ಎಲ್ಲವೂ ಒಮ್ಮೆ ಕಣ್ಣು ಮುಚ್ಚಿ ನೆನಪು ಮಾಡಿಕೊಂಡ್ರು. ಚಿತ್ರದ ಕಥೆಯೂ ನೆನಪಿಗೆ ಬಂತು. ನಾಯಕಿಯ ಜೀವನವೂ ಕರ್ಪೂರದಂತೆ ಬೆಳಗಿ ಕರಗಿ ಹೋಗುತ್ತದೆ. ಹೀಗಾಗಿ ಕರ್ಪೂರದ ಗೊಂಬೆ ನಾನು ಎನ್ನುವ ಅರ್ಥಪೂರ್ಣ ಹಾಡು ಬರೆದು ಕೊಟ್ರು ಆರ್ ಎನ್ ಜಯಗೋಪಾಲ್. ನಂತರ ನಾಯಕಿಯ ಮನದ ಆಸೆ, ತಲ್ಲಣ, ಭಾವನೆ, ಮೊದಲ ಬೇಟಿ, ಕೋಪ, ರೋಮಾಂಚನ ಎಲ್ಲವನ್ನು ಸೇರಿಸಿ ಅಂದಾಜು ಮಾಡಿ ಪದಗಳ ಹಾರವನ್ನು ಚಿತ್ರಕ್ಕೆ ಹಾಕಿದರು.