ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಈ ಬಾರಿ ಗುರು-ಶಿಷ್ಯರ ಕಾಳಗಕ್ಕೆ ಸಾಕ್ಷಿಯಾಗಲಿರೋದು ನಿಮಗೆ ಈಗಾಗಲೇ ಗೊತ್ತಿದೆ.
ಪದ್ಮನಾಭನಗರ ಬಿಜೆಪಿಯ ಭದ್ರಕೋಟೆ . ಇದನ್ನು ಬೇಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಒಂದು ಕಾಲದಲ್ಲಿ ಅಶೋಕ್ ಅವರಿಗೆ ರಾಜಕೀಯ ಗುರುವಾಗಿದ್ದ ಎಂ ಶ್ರೀನಿವಾಸ್ ಅವರನ್ನು ಕೈ ಪಾಳಯ ಕಣಕ್ಕಿಳಿಸಿದೆ. ಇದರಿಂದ ಗುರು ಮತ್ತು ಶಿಷ್ಯನ ನಡುವೆ ಫೈಟ್ ಏರ್ಪಟ್ಟಿದೆ.
ಮಾಜಿ ಡಿಸಿಎಂ ಅಶೋಕ್ ಅವರ ಕ್ಷೇತ್ರ ಪದ್ಮನಾಭನಗರ ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಅಶೋಕ್ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
2008ಕ್ಕೆ ಮುನ್ನ ರಾಜ್ಯದಲ್ಲಿ ಅತಿದೊಡ್ಡ ಕ್ಷೇತ್ರ ಎನಿಸಿದ್ದ ಉತ್ತರಹಳ್ಳಿಯಿಂದ ಹ್ಯಾಟ್ರಿಕ್ ಗೆಲುವು ಕಂಡಿದ್ದ ಅಶೋಕ್ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಪದ್ಮನಾಭ ನಗರದಿಂದ ಸ್ಪರ್ಧಿಸಿದರು.
ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ 3 ಬಸ್ ನಿಲ್ದಾಣಗಳ ಸ್ಥಾಪನೆ, ಆಟದ ಮೈದಾನ ಅಭಿವೃದ್ಧಿ ಮಾಡಿದ್ದಾರೆ. ಬಹುತೇಕ ಎಲ್ಲಾ ಪಾರ್ಕ್ ಗಳಿಗೆ ಮರುಜೀವ ನೀಡಿದ್ದಾರೆ ಶಾಸಕ ಅಶೋಕ್. ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಗೆ ಅನೇಕ ಬಹುಮಾನ ತಂದುಕೊಟ್ಟ ಹೆಗ್ಗಳಿಕೆ ಇವರದ್ದು.
ಈ ಕ್ಷೇತ್ರಸ ವ್ಯಾಪ್ತಿಗೆ ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರ ಸ್ವಾಮಿ ಬಡಾವಣೆ, ಪದ್ಮನಾಭ ನಗರ, ಚಿಕ್ಕಲಸಂದ್ರ ವಾರ್ಡ್ ಗಳು ಬರುತ್ತವೆ.
ಇದರಿಂದಾಚೆಗೆ ಸಮಸ್ಯೆಗಳೂ ಸಹ ಇವೆ. ಏಕೈಕ ಹೆರಿಗೆ ಆಸ್ಪತ್ರೆ ಇದೆ. ಇದನ್ನು ಬಿಟ್ಟರೆ ಬೇರೆ ಸರ್ಕಾರಿ ಆಸ್ಪತ್ರೆಗಳಿಲ್ಲ. ಟ್ರಾಫಿಕ್ ಸಮಸ್ಯೆಯೂಇದೆ.
ಕಳೆದ ಚುನಾವಣೆಯಲ್ಲಿ ಅಶೋಕ್ 53,680 ಮತಗಳನ್ನು ಪಡೆದಿದ್ದರು. ಪ್ರತಿಸ್ಪರ್ಧಿ, ಕಾಂಗ್ರೆಸ್ ನ ಎಸ್ ಎಸ್ ಚೇತನ್ ಗೌಡರು 33,557 ಮತಗಳಿಸಿದ್ದರು. ಈ ಬಾರಿ ಅಶೋಕ್ ಅವರಿಗೆ ಕಾಂಗ್ರೆಸ್ ನಿಂದ ಎಂ ಶ್ರೀನಿವಾಸ್ ಅವರು ಕಣಕ್ಕಿಳಿಯುತ್ತಿದ್ದು ಗುರು-ಶಿಷ್ಯರ ನಡುವಿನ ಪೈಪೋಟಿ ಗೆ ಪದ್ಮನಾಭನಗರ ವೇದಿಕೆ ಆಗಲಿದೆ.