ಧ್ರುವಾ ಸರ್ಜಾ.. ಆ್ಯಕ್ಷನ್ ಪ್ರಿನ್ಸ್ ಧ್ರುವಾ.. ಚಂದನವನದ ಬಹು ಬೇಡಿಕೆಯ ನಟರಲ್ಲೊಬ್ಬರು. ಮೂರೇ ಮೂರು ಸಿನಿಮಾಗಳಲ್ಲಿ ಸ್ಟಾರ್ ಪಕ್ಷ ಅಲಂಕರಿಸಿದ ಯಂಗ್ಸ್ಟರ್..! ಮೊದಲ ಮೂರು ಸಿನಿಮಾಗಳ ಯಶಸ್ಸಿನ ಬಳಿಕ ಇದೀಗ ಮೂರು ವರ್ಷ ಆದ್ಮೇಲೆ ಅಭಿಮಾನಿಗಳಿ ಹೊಸ ಅವತಾರದಲ್ಲಿ ದರ್ಶನ ನೀಡಲು ರೆಡಿಯಾಗಿದ್ದಾರೆ.
2012ರಲ್ಲಿ ಅದ್ದೂರಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಧ್ರುವಾ ಸರ್ಜಾ ಆ ಸಿನಿಮಾದಲ್ಲೇ ಸ್ಟಾರ್ ಆದ್ರು! ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಅವರು, ಎರಡನೇ ಸಿನಿಮಾಕ್ಕಾಗಿ 2 ವರ್ಷ ತೆಗೆದುಕೊಂಡ್ರು.. 2014ರಲ್ಲಿ ಬಹುದ್ದೂರ್ ಸಿನಿಮಾ ಮೂಲಕ ಮಿಂಚಿದ್ರು. ಆ ಸಿನಿಮಾ ಕೂಡ ಹಿಟ್.. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಅವರಿಗೆ ಮೂರನೇ ಸಿನಿಮಾದಲ್ಲೂ ಅಭಿಮಾನಿಗಳು ಬಯಸಿದ್ದನ್ನು ಕೊಡಲೇ ಬೇಕೆಂಬ ಒತ್ತಡ ಇತ್ತು.
ಹಾಗಾಗಿ ಆ ಮೂರನೇ ಸಿನಿಮಾಕ್ಕೆ 3 ವರ್ಷ ತೆಗೆದುಕೊಂಡ್ರು. 2017ರಲ್ಲಿ ಬಂದ ಭರ್ಜರಿ ಕೂಡ ಸೂಪರ್ ಡೂಪರ್ ಹಿಟ್ ಆಯಿತು.. ಅದರೊಂದಿಗೆ ಧ್ರುವಾ ಆರಂಭದಲ್ಲೇ ಹ್ಯಾಟ್ರಿಕ್ ಬಾರಿಸಿದ್ದಾರೆ.
ಮೊದಲೇ ಮೂರು ಹಿಟ್ ಸಿನಿಮಾಗಳನ್ನು ಕೊಟ್ಟ ಧ್ರುವಾ 4ನೇ ಸಿನಿಮಾವನ್ನು ಕೂಡ ನಿರೀಕ್ಷೆಗೂ ಮೀರಿ ಕೊಡಲೇಬೇಕಾಗಿದೆ. ಆದ್ದರಿಂದ ಮೂರು ವರ್ಷ ಒಂದೇ ಒಂದು ಸಿನಿಮಾಕ್ಕೆ ಮೀಸಲಿಟ್ಟಿದ್ದರು. ಆ ಸಿನಿಮಾವೇ ಪೊಗರು. ಹೆಚ್ಚು ಕಮ್ಮಿ ಎರಡು ವರ್ಷ ಪೊಗರು ಶೂಟಿಂಗ್ ನಡೆದಿದೆ. ಇದೀಗ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ.
ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಿರುವ ಪೊಗರಲ್ಲಿ ಧ್ರುವಾಗೆ ನಾಯಕಿಯಾಗಿ ಕೊಡಗಿನ ಕುವರಿ , `ಕಿರಿಕ್ ಪಾರ್ಟಿ’ ಖ್ಯಾತಿಯ ‘ಚಮಕ್’ ಚೆಲುವೆ, ‘ಅಂಜನೀಪುತ್ರ’ನ ರಾಣಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಧ್ರುವಾ ಮತ್ತು ರಶ್ಮಿಕಾ ಇಬ್ಬರೂ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟವರು. ರಶ್ಮಿಕಾ ಇಂದು ಟಾಲಿವುಡ್ ಟಾಪ್ ನಟಿ ಅನ್ನೋದು ಮತ್ತೊಂದು ವಿಶೇಷ. ಸಿನಿಮಾ ಮೇಲೆ ನಿರೀಕ್ಷೆಯ ಭಾರವಿದ್ದು, ಏಪ್ರಿಲ್ 24ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಸೆನ್ಸಾರ್ ಆದ್ಮೇಲೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದೆಯಂತೆ ಚಿತ್ರತಂಡ.
ಈಗಾಗಲೇ ಪೋಸ್ಟರ್, ಟೀಸರ್, ಟ್ರೈಲರ್ನಿಂದ ಸಿಕ್ಕಾಪಟ್ಟೆ ಸೌಂಡು ಮಾಡ್ತಿರೋ ಪೊಗರು ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸಲ್ಲಿ ಭಾರಿ ಸೌಂಡು ಮಾಡೋ ನಿರೀಕ್ಷೆ ಇದ್ದು, ಧ್ರುವಾ ಸತತ ನಾಲ್ಕನೆ ಗೆಲುವನ್ನು ಪಡೆಯುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕು.