ಕನ್ನಡ ದೃಶ್ಯ ಮಾಧ್ಯಮ ಲೋಕ ಕಂಡ ಅತ್ಯಂತ ಜನಪ್ರಿಯ ನಿರೂಪಕ. ರಹಮಾನ್ ಹಾಸನ್….ಯಸ್ ಅವರೇ ಟಿವಿ9 ರಹಮಾನ್…!
ಟಿವಿ9 ಬಿಟ್ಟು, ಸುದ್ದಿವಾಚನಕ್ಕೆ ತಾತ್ಕಾಲಿಕ ಮಟ್ಟಿಗೆ ಗುಡ್ ಬೈ ಹೇಳಿ ಹೆಚ್ಚು ಕಡಿಮೆ ಮೂರು ವರ್ಷವಾಗಿದೆ…! ಆದರೂ ಆ್ಯಂಕರ್ ರಹಮಾನ್, ಟಿವಿ9 ರಹಮಾನ್ ಎಂದೇ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ ಈ ಸ್ಪರದ್ರುಪಿ ನಿರೂಪಕ, ನಟ…!
ಬಿಗ್ ಬಾಸ್ ಗೆ ಹೋದ ರಹಮಾನ್ ನ್ಯೂಸ್ ಚಾನಲ್ , ಸುದ್ದಿವಾಚನ, ಡಿಸ್ಕಶನ್ಸ್ ಗಳಿಂದ ದೂರವಾಗಿ ಬಿಟ್ರು. ಸಿನಿಮಾದಲ್ಲಿ ಬ್ಯುಸಿ ಆದ್ರು. ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಾನು ನಿರೂಪಣೆಗೆ ಮಾತ್ರವಲ್ಲ ನಟನೆಗೂ ಸೈ ಅನಿಸಿಕೊಂಡ್ರು...!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ರಣವಿಕ್ರಮ, ನಿಖಿಲ್ ಕುಮಾರ್ ಅವರ ಮೊದಲ ಸಿನಿಮಾ ‘ಜಾಗ್ವಾರ್’ ನಲ್ಲಿ ನಟಿಸಿದ್ದ ರಹಮಾನ್, ಇತ್ತೀಚೆಗೆ ತೆರಕಂಡ ‘ವೆನಿಲ್ಲಾ’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ರು. ಇವರ ಅಭಿನಯದ ‘ಗರ’ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಇನ್ನು ಕೆಲವೊಂದು ಸಿನಿಮಾಗಳಲ್ಲಿ ಇವರು ಬ್ಯುಸಿ ಇದ್ದಾರೆ.
ಇವುಗಳ ಜೊತೆಗೆ ಈಗ ಧಾರವಾಹಿ ಜಗತ್ತಿಗೂ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಮಿಂಚಲು ಈ ಚಂದದ ನಿರೂಪಕ ರೆಡಿಯಾಗಿದ್ದಾರೆ.
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಕೃಷ್ಣ ತುಳಸಿ’ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಮ್ಮ ಈ ರಹಮಾನ್.
ಈ ಧಾರವಾಹಿಯಲ್ಲಿ ರಹಮಾನ್ ತುಳಸಿಯ ಮುದ್ದಿನ ಅಣ್ಣ ‘ತೇಜಸ್ವಿ’. ತುಳಸಿಗೆ ಕೇವಲ ಅಣ್ಣ ಮಾತ್ರವಲ್ಲ ಸ್ನೇಹಿತನಂತಿರೋ ಅಣ್ಣ ಈ ರಹಮಾನ್ (ತೇಜಸ್ವಿ).
ತೆಲುಗಿನ ಶ್ರೀಧನ ಮೀಡಿಯಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ಕೃಷ್ಣ ತುಳಸಿ’ ಗೆ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನ ಪ್ರಸಿದ್ಧ ನಿರ್ಮಾಪಕರಲ್ಲಿ ಒಬ್ಬರಾದ ಅಶೋಕ್ ನಾಲಾಜಾಲ ಅವರು ಕೃಷ್ಣ ತುಳಸಿಯ ನಿರ್ಮಾಪಕರು.
ಇದೊಂದು ಕೌಟುಂಬಿಕ ಧಾರವಾಹಿ. ತಂಗಿ ತುಳಸಿ ಅಂದ್ರೆ ದೊಡ್ಡ ಉದ್ಯಮಿ, ಮಿತಭಾಷಿ ಅಣ್ಣ ತೇಜಸ್ವಿಗೆ ಜೀವ. ಅಣ್ಣನ ಮಾತನ್ನು ಮೀರದ ತಂಗಿ ತುಳಸಿ. ತಂಗಿಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂಬುದು ಅಣ್ಣನ ಆಸೆ. ಹೀಗಿರುವಾಗ ಹುಡುಗನೊಬ್ಬನ ಎಂಟ್ರಿ, ತುಳಸಿಗೆ ಅವನೊಡನೆ ಪ್ರೇಮಾಂಕುರವಾಗುತ್ತದೆ. ತುಳಸಿ ಪ್ರೀತಿಸಿದ ಹುಡುಗನನ್ನು ಮದುವೆ ಆಗುತ್ತಾಳೋ, ಅಣ್ಣ ನೋಡಿದ ಹುಡುಗನನ್ನು ಮದುವೆ ಆಗುತ್ತಾಳೋ ಎಂಬುದನ್ನು ತಿಳಿಯಲು ಧಾರವಾಹಿ ನೋಡಿ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ರೂಪದಿಂದ ಹಿಡಿದು ಪ್ರತಿ ವಿಷಯದಲ್ಲೂ ತುಳಸಿ ಮತ್ತು ಆಕೆಯನ್ನು ಪ್ರೀತಿಸುವ ಹುಡುಗನ ನಡುವೆ ಹೋಲಿಕೆ ಇಲ್ಲ..! ಎಲ್ಲವೂ ತದ್ವಿರುದ್ಧ ಹೀಗಿದ್ದರೂ ಲವ್ ಹೇಗೆ ಆಗುತ್ತೆ ಅನ್ನೋದು ಸಹ ಕುತೂಹಲಕಾರಿ ವಿಷಯ. ಅಂದಹಾಗೆ ತುಳಸಿ ಪಾತ್ರದಲ್ಲಿ ಪ್ರಿಯಾಂಕ ಮತ್ತು ಕೃಷ್ಣನಾಗಿ ಮಂಗಳೂರಿನ ಸ್ವರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.
ಇವೆಲ್ಲಾ ಹೀಗಿರಲಿ….ಈಗ ನೇರವಾಗಿ ರಹಮಾನ್ ಅವರ ಬಳಿ ಬರೋಣ.…ರಹಮಾನ್ ಅವರೇ…? ಆ್ಯಂಕರ್ ಆದ್ರಿ, ಬಿಗ್ ಬಾಸ್ ಮನೆಗೂ ಎಂಟ್ರಿಕೊಟ್ರಿ, ಸಿನಿಮಾದಲ್ಲೂ ಬ್ಯುಸಿ ಇದ್ದೀರಿ, ಈ ನಡುವೆ ಕಿರುಚಿತ್ರ ಕೂಡ ಮಾಡಿದ್ದೀರಿ, ಸಾಮಾಜಿಕ ಕಳಕಳಿಯ ಇನ್ನೂ ಸಾಕಷ್ಟು ಕಿರುಚಿತ್ರ ಮಾಡಲಿದ್ದೀರಿ, ಅಷ್ಟೇ ಏಕೆ ಪಾಕ ಪ್ರವೀಣರಾದ ನೀವು , ಅಡುಗೆ ಬಗ್ಗೆ ಯೂಟ್ಯೂಬ್ ವೀಡಿಯೋ ಸಹ ಮಾಡಿದ್ದೀರಿ, ಪುನಃ ಮತ್ತೆ ಸುದ್ದಿ ನಿರೂಪಣೆ ಮಾಡಲು ಬರ್ತೀರಿ…! ಈಗ ಧಾರವಾಹಿ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದೀರಿ…! ಏನ್ರೀ ರೀ…ಇನ್ನೂ ಏನೇನು ಮಾಡ್ಬೇಕು ಅಂತಿದ್ದೀರಿ….? ಎಂದು ಪ್ರೀತಿಯಿಂದ ಕೇಳ್ತಿದ್ದೀವಿ…! ಇನ್ನೂ ಸಿಕ್ಕಾಪಟ್ಟೆ ಬ್ಯುಸಿ ಆಗಿ ಎಂದು ಪ್ರೀತಿಯಿಂದ ಹಾರೈಸ್ತೀವಿ….ಆಲ್ ದಿ ಬೆಸ್ಟ್ ರಹಮಾನ್ ಅವರೇ…ದೊಡ್ಡ ಮಟ್ಟಿನ ಯಶಸ್ಸು ನಿಮಗೆ ಸಿಗಲಿ.