ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಗಲಿರುಳು ತುಂತುರು ಮಳೆ ಸುರಿಯುತ್ತಿದ್ದು ಉಷ್ಣಾಂಶ ಕುಸಿದಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸುರಿಯುತ್ತಿರುವಷ್ಟು ಭರ್ಜರಿ ಮಳೆ ಉದ್ಯಾನನಗರಿಯಲ್ಲಿ ಬೀಳುತ್ತಿಲ್ಲ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೂರ್ಯನೇ ಕಾಣಿಸುತ್ತಿಲ್ಲ. ಸತತ ಮೋಡಕವಿದ ವಾತಾವರಣ ಜೊತೆಗೆ ತುಂತುರು ಮಳೆಯಿಂದ ಉಷ್ಣಾಂಶ ಕಡಿಮೆಯಾಗಿದ್ದು, ಚಳಿಗಾಲದ ಅನುಭವ ತಂದುಕೊಡುತ್ತಿದೆ. ಜೂನ್ ಅಂತ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ನಗರದ ಗರಿಷ್ಠ ಉಷ್ಣಾಂಶ ಈಗ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಬಂದಿದೆ.
ಕನಿಷ್ಠ ಉಷ್ಣಾಂಶ ಪ್ರಮಾಣವು 18 ಡಿಗ್ರಿಗೆ ಇಳಿದಿದೆ. ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ತಂಪಾದ ವಾತಾವರಣ ಇರಲಿದ್ದು, ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನವು 24 ಡಿಗ್ರಿಗೆ ಸೆಲ್ಸಿಯಸ್ಗೆ ಬರಬಹುದು ಎಂದು ಅಂದಾಜಿಸಲಾಗಿದೆ.