20ವರ್ಷಗಳ ಹಿಂದೆ ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲು ಸೇರಿದ್ದಾರೆ. ಇವರಿಗೆ ಜೈಲಿನ ದಾರಿತೋರಿಸಿದ ಬಿಷ್ಣೋಯಿ ಸಮುದಾಯದ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ?
ಹೌದು , ಸಲ್ಮಾನ್ ಅವರು ಜೈಲು ಪಾಲಾಗಲು ಕಾರಣ ಬಿಷ್ಣೋಯಿ ಸಮುದಾಯದವರು.

ಸಲ್ಮಾನ್ 1998 ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಶೂಟಿಂಗ್ ವೇಳೆ ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣಮೃಗಳನ್ನು ಸಲ್ಮಾನ್ ಬೇಟೆಯಾಡಿದ್ದರು.
ಕೃಷ್ಣಮೃಗಗಳನ್ನು ಪೂಜ್ಯನೀಯ ಎಂದು ಕಾಣುವ ಬಿಷ್ಣೋಯಿ ಸಮುದಾಯ ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ಸಲ್ಮಾನ್ ಗೆ ಶಿಕ್ಷೆ ಆಗಲೇ ಬೇಕು ಎಂದು ಕಾನೂನು ಹೋರಾಟ ಮಾಡಿದ್ದರು.

ರಾಜಸ್ಥಾನದಲ್ಲಿ ನೆಲೆಸಿರುವ ಈ ಸಮುದಾಯದವರು ವಿಷ್ಣುವಿನ ಆರಾಧಕರು. ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಈ ಸಮುದಾಯಕ್ಕೆ 6ಶತಮಾನಗಳ ಇತಿಹಾಸವಿದೆ. 15ನೇ ಶತಮಾನದಲ್ಲಿದ್ದ ಗುರು ಜಂಬೇಶ್ವರ ಈ ಸಮುದಾಯವನ್ನು ಸ್ಥಾಪಿಸಿದ್ರು. ಬಿಷ್ಣೋಯಿ ಎಂದರೆ ರಾಜಸ್ಥಾನಿಯಲ್ಲಿ 29 ಎಂದರ್ಥ. ಗುರು ಜಂಬೇಶ್ವರನ 29 ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುವವರು ಬಿಷ್ಣೋಯಿಗಳು.
ಕೃಷ್ಣಮೃಗಗಳು ಗುರು ಜಂಬೇಶ್ವರನ ಪುನರ್ಜನ್ಮದ ರೂಪ ಎಂದು ಈ ಸಮಯದಾಯವರು ನಂಬಿದ್ದಾರೆ. ಗುರುಗಳ ಹೆಸರಲ್ಲಿ ಕೃಷ್ಣಮೃಗಗಳನ್ನು ಮತ್ತು ಚಿಂಕಾರಗಳನ್ನು ರಕ್ಷಿಸುತ್ತಾ ಬಂದಿದ್ದಾರೆ.

ಹೀಗಿರುವಾಗ ಸಲ್ಮಾನ್ ಖಾನ್ ಕೃಷ್ಣಮೃಗಗಳನ್ನು ಬೇಟಿಯಾಡಿದ್ದು ಇವರಿಗೆ ಅತೀವ ಬೇಸರ ತರಿಸಿತ್ತು. ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಅಪರಾಧಿಗೆ ಶಿಕ್ಷೆ ಆಗಿರುವುದರಿಂದ ಸಮುದಾಯಕ್ಕೆ ಖುಷಿಯಾಗಿದೆ.






