ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಆಂತರ್ಯವನ್ನು ಬಿಚ್ಚಿಟ್ಟಳು, ವಾಸ್ತವವನ್ನು ಮುಚ್ಚಿಟ್ಟಳು..!

1
69

raaa
ಅವಳು ಶಕೀಲಾ, ಭಾರತದ ಬಹುಭಾಷ ತಾರೆ. ಅವಳಿಲ್ಲಿ ಮೆರೆದಿದ್ದಕ್ಕಿಂತ ತೆರೆದುಕೊಂಡಿದ್ದೇ ಹೆಚ್ಚು. ಅನಿವಾರ್ಯತೆಯೊಂದು ಅವಳನ್ನು ಈ ಪ್ರಪಂಚದಲ್ಲಿ ಬೆತ್ತಲು ನಿಲ್ಲಿಸಿತ್ತು. ಕತ್ತಲ ಬದುಕಿನಲ್ಲಿ ಮೊದಲೇ ಹೇಳಿದ್ದಂತೆ ಎಲ್ಲವೂ ಅನಿವಾರ್ಯವಾಗಿತ್ತು. ಆ ಪುಸ್ತಕ, ನಿಜವಾದ ಶಕೀಲಾಳನ್ನು ತೆರೆದಿಟ್ಟಿದೆ. ಭಾರತೀಯ ಚಿತ್ರರಂಗದ ದಂತಕತೆ ಆಗುವ ಎಲ್ಲಾ ಲಕ್ಷಣಗಳಿರುವ ಅಭಿನೇತ್ರಿ ಶಕೀಲಾಗೆ ಈಗ ಬರೋಬ್ಬರಿ ನಲವತ್ಮೂರು ವರ್ಷ. ದೊಡ್ಡ ದೇಹ, ಮಾದಕ ನೋಟ, ಕೆಣಕುವ ಮೈಮಾಟ. ಅವರಲ್ಲಿ ಅದೆಷ್ಟರ ಮಟ್ಟಿಗೆ ಪ್ರತಿಭೆ ಇತ್ತೋ ಗೊತ್ತಿಲ್ಲ. `ಡಿ’ ದರ್ಜೆಯ ಸಿನಿಮಾಗಳಿಗೆ ಮಾತ್ರ ಸೀಮಿತವಾದಳು.

ಶಕೀಲಾ ಇಂಥದ್ದೇ ಸಿನಿಮಾಗಳಲ್ಲಿ ನಟಿಸಬೇಕೆಂದು ಬಯಸಲಿಲ್ಲ. ಕಿತ್ತು ತಿನ್ನುವ ಬಡತನವನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಹೊಂದಾಣಿಕೆ ಮಾಡಿಕೊಂಡಳು. ಚಿತ್ರರಂಗದಲ್ಲಿ ನಟಿಸುವ ಮರ್ಜಿ ಇತ್ತು. ಅದನ್ನು ಪೂರೈಸಿಕೊಳ್ಳಲು ಅವಕಾಶಕ್ಕಾಗಿ ಅಲೆದು ನಿರಾಸೆ ಅನುಭವಿಸಿದಳು. ಅದೊಮ್ಮೆ ತಮಿಳು ಚಿತ್ರರಂಗದ `ಡಿ’ ದರ್ಜೆಯ ನಿರ್ಮಾಪಕನೊಬ್ಬ, `ಅವಕಾಶ ಕೊಡ್ತೀನಿ, ಕಾಂಪ್ರಮೈಸ್ ಆಗ್ತೀಯಾ’ ಅಂತ ನೇರವಾಗಿ ಕೇಳಿದ್ದ. ನಿರಾಕರಿಸಿ ಬಂದವಳು ಯೋಚಿಸಿದ್ದು ಮೂರೇ ದಿನ..! ನಾಲ್ಕನೇ ದಿನ ಆ ಪ್ರೊಡ್ಯೂಸರ್ ಮುಂದೆ ನಿಂತಿದ್ದಳು. ಹಾಗೇ ನಿಂತವಳಲ್ಲಿ ಆ ನಿರ್ಮಾಪಕ ಬೆತ್ತಲು ಗೊಂಬೆಯನ್ನು ಕಂಡಿದ್ದ.

ಪ್ರಾಯಶಃ ಶಕೀಲಾಳ ಬಡತನ ಇಂಥದ್ದೊಂದು ಕಾಂಪ್ರಮೈಸ್ ಗೆ ಸಿದ್ಧವಾಗಿತ್ತು. ತಾನು ಮಾಡುತ್ತಿರುವುದು ತಪ್ಪು. ಈ ನಿರ್ಧಾರದಿಂದ ಕುಟುಂಬದ ಮರ್ಯಾದೆ ಹೋಗುತ್ತದೆ. ಸಮಾಜದಲ್ಲೂ ತನಗೆ ಗೌರವ ಸಿಗುವುದಿಲ್ಲ. ಇವೆಲ್ಲವೂ ಅವಳಿಗೆ ಗೊತ್ತಿತ್ತು. ಹಾಗಿದ್ದೂ ಅವಳ ಕಣ್ಣ ಮುಂದೇ ಇದ್ದದ್ದು ಆ ಮೂರು ಮುಖಗಳು ಮಾತ್ರ. ಒಬ್ಬರು ಕೃಶವಾದ ತಂದೆ, ಇನ್ನೊಬ್ಬರು ಜೀವಿತಾವಧಿಯನ್ನು ಕಷ್ಟದಲ್ಲಿ ಕಳೆದ ತಾಯಿ, ಮೂರನೆಯವಳು ನೂರಾರು ಕನಸುಗಳನ್ನು ಅರಳಿಸಿಕೊಂಡ ತಂಗಿ. ಇವರೆಲ್ಲರಿಗಾಗಿ ಶಕೀಲಾ ಕಾಂಪ್ರಮೈಸ್ ಆದಳು. ಅವೆಲ್ಲಾ ತಪ್ಪು ಎನ್ನುವುದಕ್ಕಿಂಥ ಅನಿವಾರ್ಯತೆ ಎನ್ನುವುದೇ ಅತ್ಯಂತ ಸ್ಪಷ್ಟವಾಗಿತ್ತು. ಅಂದಹಾಗೆ ಶಕೀಲಾ ಅವಳು ತಮಿಳಿನಲ್ಲಿ ಮೊಟ್ಟ ಮೊದಲಿಗೆ ಬಣ್ಣ ಹಚ್ಚಿದ ಅಶ್ಲೀಲ ಚಿತ್ರದ ಹೆಸರು `ಪ್ಲೇ ಗರ್ಲ್’.

ಅಲ್ಲಿಂದ ಶುರುವಾದ ಶಕೀಲಾ ಬೆತ್ತಲುಗಾಥೆಯಲ್ಲಿ ಅವಳ ಹಸಿ-ಹಸಿ ಮೈ ನರಳಿದ್ದೇ ಹೆಚ್ಚು, ಅದೆಷ್ಟು ಕೋಣೆಯೋ, ಅದೆಷ್ಟು ಸ್ನಾನದ ಮನೆಯೋ, ಚಿತ್ರರಂಗ ಅವಳನ್ನು ಅಕ್ಷರಶಃ ಹಿಂಡಿ ಹಾಕಿತ್ತು. ಅವಳ ಅಗಾಧ ದೇಹಸಿರಿ ಚಿತ್ರರಂಗಕ್ಕೆ ವರವಾದರೇ, ಇವಳಿಗೆ ಅದೇ ಶಾಪವಾಗಿತ್ತು. ಹಾಗಂತ ಅದು ಶೋಕಿಯ ಸಂಗತಿಯಲ್ಲ, ಅನಿವಾರ್ಯತೆಯ ವಿಚಾರ. ಇವೆಲ್ಲವನ್ನು ತನ್ನ ಆತ್ಮಕಥೆಯನ್ನು ಅಚ್ಚುಕಟ್ಟಾಗಿ ಬರೆದಿದ್ದಾಳೆ. ಚಿತ್ರರಂಗದಲ್ಲಿ ತಾನು ಅನುಭವಿಸಿದ ಸಂಕಟ, ಅವಶ್ಯಕತೆ, ಒತ್ತಡ, ಎಲ್ಲವನ್ನೂ ಅಸ್ಪಷ್ಟವಾಗಿ ವಿವರಿಸಿದ್ದಾಳೆ. ಆ ಆತ್ಮಕಥೆಯನ್ನು ಓದುತ್ತಾ ಹೋದರೇ ಎಲ್ಲೋ ಕಳೆದುಕೊಂಡ ಅಸ್ಥಿತ್ವವನ್ನು, ಮರ್ಯಾದೆಯನ್ನು ಮರಳಿ ಪಡೆಯುವ ಪ್ರಯತ್ನವಿರಬಹುದು ಅನಿಸಿದರೂ, ಚಿತ್ರರಂಗದ ಅಸಲಿ ಮುಖವಾಡವನ್ನು ಅನಾವರಣ ಮಾಡುವುದರಲ್ಲಿ ಸೋತಿರಬಹುದು ಎನಿಸುತ್ತದೆ. ಏಕೆಂದರೇ ಅವಳ ಹೃದಯದ ಮಾತುಗಳಲ್ಲಿ ಯಾವುದೂ ಖುಲ್ಲಾ ಅನಿಸುತ್ತಿಲ್ಲ. ಎಲ್ಲೋ ಅಂಜಿದ್ದಾಳೆ, ತನ್ನ ವೃತ್ತಿ ಜೀವನದಂತೆ ಅಲ್ಲೆಲ್ಲೋ ಎಡವಿದ್ದಾಳೆ ಎಂಬುದು ನಿಚ್ಚಳವಾಗುತ್ತದೆ.

`ಇಲ್ಲಿಗೆ ಯಾಕಾದ್ರೂ ಬಂದೆ, ಇಲ್ಲೇನು ಅನುಭವಿಸಿದೆ ಎಂಬುದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಲ್ಲಿ ನಾನು ಪಡೆದದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದೇನೆ. ಕೇವಲ ಬಣ್ಣದ ಜಗತ್ತು ಮಾತ್ರವಲ್ಲ, ತನ್ನ ಕುಟುಂಬದವರೇ ನನ್ನ ಬದುಕನ್ನು ಬೆತ್ತಲಾಗಿಸಿದರು. ನನ್ನ ಮನಸ್ಸು, ನನ್ನ ಕನಸು, ನನ್ನ ಆಸೆ, ನನ್ನ ಆಕಾಂಕ್ಷೆ ಯಾವುದನ್ನೂ ಅವರು ಕೇಳಲಿಲ್ಲ. ಕೆಲವರಿಗೆ ನಾನು ಬೇಕಾಗಿತ್ತು, ಇನ್ನು ಕೆಲವರಿಗೆ ನನ್ನ ಸಂಪಾದನೆ ಬೇಕಿತ್ತು’ ಎಂದಿದ್ದಾಳೆ. ಶಕೀಲಾ ಸಹಜತೆ ತುಂಬಿಕೊಂಡಿರುವ ಮಾದಕ ಸುಂದರಿ. ದಷ್ಟ-ಪುಷ್ಟ ಮೈಮಾಟ. ಬಯಸೀ ಬಯಸೀ ಚಿತ್ರರಂಗಕ್ಕೆ ಹೋಗಿ ಹಾಡಹಗಲೇ ಬೆತ್ತಲಾದಳು. ಒಂದು ಹಂತದಲ್ಲಿ ಸ್ಟಾರ್ಗಳ ಸಿನಿಮಾಗಳನ್ನೂ ನಿವಾಳಿಸಿ ಬಿಸಾಕಿದ್ದು ಶಕೀಲಾಳ ಚಿತ್ರಗಳು. ಶಕೀಲಾಳನ್ನು ಒಂದು ಹಂತದಲ್ಲಿ ಚಿತ್ರರಂಗ ಒಪ್ಪಿಕೊಂಡಿತ್ತು, ಅಪ್ಪಿಕೊಂಡಿತ್ತು. ಆದರೆ ಅವಳ ಇಸ್ಲಾಂ ಧರ್ಮ ಅಂಗೀಕರಿಸಲಿಲ್ಲ. ಕೆಲವರಿಗೆ ಶಕೀಲಾಗೂ ಇಸ್ಲಾಂ ಧರ್ಮಕ್ಕೂ ಎಲ್ಲಿಯ ಸಂಬಂಧ ಎಂಬ ಗೊಂದಲ ಕಾಡುವುದು ಸಹಜ. ಅಸಲಿಯತ್ತೆಂದರೇ ಶಕೀಲಾ ಅಪ್ಪಟ ಮುಸ್ಲೀಂ ಧರ್ಮದವಳು. ಅವಳ ಪೂರ್ತಿ ಹೆಸರು ಶಕೀಲಾ ಬೇಗಂ.

1973ರಲ್ಲಿ ಆಂಧ್ರಪ್ರದೇಶದ ನಲ್ಲೂರಿನಲ್ಲಿ ಜನಿಸಿದ ಶಕೀಲಾ, ಚಾಂದ್ ಪಾಷಾ ಹಾಗೂ ಚಾಂದ್ ಬೇಗಂ ಅವರ ಹಿರಿಯ ಪುತ್ರಿ. ಇವಳಿಗೆ ಒಬ್ಬಳು ತಂಗಿಯಿದ್ದಾಳೆ. ಅಪ್ಪ ಕೂಲಿ ಮಾಡುತ್ತಿದ್ದ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮೂರು ಹೊತ್ತು ಊಟ ಮಾಡದಿರುವ ದಿನಗಳೇ ಹೆಚ್ಚು. ಗಂಡು ದಿಕ್ಕಿಲ್ಲದ ಮನೆಯ ಹೊಣೆ ಅವಳದ್ದಾಗಿತ್ತು. ನಲ್ಲೂರಿನ ಸರಸ್ವತಿ ವಿದ್ಯಾಲಯದಲ್ಲಿ ಓದಿದ್ದ ಅವಳು ಎಸ್ಸೆಸ್ಸೆಲ್ಸಿ ಫೇಲಾಗಿದ್ದೇ ಶಾಲೆ ಬಿಟ್ಟಳು. ಅವತ್ತು ಅವಳಪ್ಪ ಜೀವನ ಪೂರ ನೆನಪಿಟ್ಟುಕೊಳ್ಳುವಂತಹ ಧರ್ಮದೇಟು ಕೊಟ್ಟಿದ್ದ. ಅವತ್ತು ಶಕೀಲಾಳನ್ನು ಸಮಾ ರುಬ್ಬುತ್ತಿದ್ದ ಅವರಪ್ಪನ ಆಕ್ರೋಶವನ್ನು ನೋಡಿದ ಉಮಾಶಂಕರ್ ಎಂಬಾತ ಅವರನ್ನು ತಡೆದ. `ಇನ್ನೊಂದೆರಡು ಏಟು ಬಿದ್ರೇ ನಿನ್ ಮಗಳು ಸತ್ತೇ ಹೋಗ್ತಾಳೆ’ ಅಂತ ಶಕೀಲಾಳ ಕಣ್ಣೀರು ಒರೆಸಿದ್ದ. ಈ ಉಮಾಶಂಕರ್ ಶಕೀಲಾ ಮನೆಯ ಎದುರಿಗಿದ್ದ ಫಿಲ್ಮ್ ಪ್ರೊಡಕ್ಷನ್ ಹೌಸ್ ನಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಬಹುಶಃ ಮನೆಯ ಎದುರಿಗೇ ಪ್ರೊಡಕ್ಷನ್ ಹೌಸ್ ಇದ್ದುದರಿಂದ ಶಕೀಲಾಳಿಗೂ ಬಾಲ್ಯದಲ್ಲೇ ಸಿನಿಮಾ ಹುಚ್ಚು ಅಂಟಿಕೊಂಡಿತ್ತು. ಶೂಟಿಂಗ್ಗಳನ್ನು ಇನ್ನಿಲ್ಲದ ಆಸಕ್ತಿಯಿಂದ ನೋಡುತ್ತಿದ್ದಳು. ಬಾಲ್ಯದ ಬೆರಗುಗಳೇ ಹಾಗೇ. ಮುಂದೊಂದು ದಿನ ಅವು ಆಕಾಶದೆತ್ತರಕ್ಕೆ ಬೆಳೆದುಬಿಡುತ್ತದೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಶಕೀಲಾಳ ಅಂತರಂಗದಲ್ಲಿ ನಟಿಯೊಬ್ಬಳು ಜೀವಂತವಾಗತೊಡಗಿದ್ದಳು.

ಬದುಕಿನ ಪ್ರತಿ ತಿರುವಿಗೂ ಸಾಂಧರ್ಭಿಕ ಸಾಕ್ಷಿಗಳಿರುತ್ತವೆ. ಹಾಗೇ ಶಕೀಲಾ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಅವಳು ಎಸ್ಸೆಸ್ಸೆಲ್ಸಿ ಫೇಲಾಗಿದ್ದೇ ಕಾರಣವಾಗಿತ್ತು. ಅವತ್ತು ಅವರಪ್ಪ ಶಕೀಲಾಳಿಗೆ ಸಮಾ ಬಾರಿಸಿದಾಗ ತಡೆದ ಮೇಕಪ್ ಮ್ಯಾನ್ ಉಮಾಶಂಕರ್, `ಚಿತ್ರರಂಗಕ್ಕೆ ಬರ್ತಿಯಾ..’ ಅಂತ ಕೇಳಿದ್ದ. ಅದು ಅವರ ಹೆತ್ತವರಿಗೂ ಅನಿವಾರ್ಯವಾಗಿತ್ತು. ಶಕೀಲಾಳ `ದೈತ್ಯ’ ಪ್ರತಿಭೆ ಚಿತ್ರರಂಗಕ್ಕೆ ಪ್ರವೇಶವಾಗಿತ್ತು. ಆಗ ಅವಳ ವಯಸ್ಸು ಕೇವಲ, ಹದಿನೈದು. ಶಕೀಲಾಳಿಗೆ ಪ್ಲೇ ಗರ್ಲ್ ಹೆಸರಿನ ನೀಲಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಚಿತ್ರದಲ್ಲಿ ಹಾಟ್ ಬಾಂಬ್ ಸಿಲ್ಕ್ ಸ್ಮಿತಾ ತಂಗಿಯಾಗಿ ನಟಿಸಿದಳು. ದುರಂತವೆಂದ್ರೇ ಅವಳ ಮೈಮಾಟವನ್ನು ಚಿತ್ರರಂಗ ಮೊದಲ ಚಿತ್ರದಲ್ಲೇ ದುರುಪಯೋಗಪಡಿಸಿಕೊಂಡಿತ್ತು. ಅಶ್ಲೀಲತೆಯ ಬಗ್ಗೆ ಅರಿವಿಲ್ಲದ ವಯಸ್ಸಿನಲ್ಲಿ ಅವಳಿಗೆ ಅಶ್ಲೀಲವಾಗಿ ನಟಿಸುವಂತೆ ಪ್ರೇರೇಪಿಸಲಾಯಿತು. ಮುಂದೆ ಅವಳು ನಟಿಸದ್ದೆಲ್ಲಾ ಅಶ್ಲೀಲ ಚಿತ್ರಗಳೇ..!!

ಶಕೀಲಾ ಬ್ಲೂಫಿಲ್ಮ್ ಸ್ಟಾರ್ ಎಂದೇ ಖ್ಯಾತಳಾದಳು. ಡಿಸ್ಕೋ ಶಾಂತಿ, ಸಿಲ್ಕ್ ಸ್ಮಿತಾಳನ್ನು ಮೀರಿಸಿ ಗೆದ್ದಳು. ಬಡತನ ಹೋಗಿ ಶ್ರೀಮಂತಿಕೆ ಬಂದಿತ್ತು. ಹಾರುತ್ತಿದ್ದ ವಿಮಾನವನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದ ಶಕೀಲಾ ಅದೊಂದು ದಿನ ಮದ್ರಾಸ್ ನಿಂದ ವೈಜಾಕ್ಗೆ ವಿಮಾನದಲ್ಲಿ ಹೊರಟಿದ್ದಳು. ವಿಮಾನ ಟೇಕ್ ತೆಗೆದುಕೊಳ್ಳುತ್ತಿದ್ದಂತೆ ಜೋರಾಗಿ ಕಿರುಚಿದ ಶಕೀಲಾ, `ನನ್ನ ಇಳಿಸಿಬಿಡಿ..’ ಎಂದಳಂತೆ. ಈ ಘಟನೆ ಶಕೀಲಾಳ ಮುಗ್ಧತೆ ಹಾಗೂ ಬಡತನದಿಂದ ಶ್ರೀಮಂತಿಕೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಳು ಹೆಣಗಿದ ಪರಿಯನ್ನು ತೋರಿಸುತ್ತದೆ. ಆಗಿನ್ನು ಚಿತ್ರರಂಗಕ್ಕೆ ಹೆಜ್ಜೆಯಿಟ್ಟ ಹೊಸತರಲ್ಲೇ ಅಶ್ಲೀಲ, ಪೋಸ್ಟರ್ಸ್, ಕಟೌಟ್ಗಳು ಬೀದಿಯಲ್ಲಿ ಇಟ್ಟಾಡಿದಾಗ ಅಸಹ್ಯವೆನಿಸಿದರೂ, ಅದು ಅನಿವಾರ್ಯವೆಂದು ಚಿತ್ರರಂಗ ಸಮಜಾಯಿಷಿ ಹೇಳಿತ್ತು. ಇದೇ ಸಮಜಾಯಿಷಿಗಳು ಮುಂದೊಂದು ದಿನ ಅವಳನ್ನು ಸಂಪೂರ್ಣ ಬೆತ್ತಲಾಗಿಸಿತ್ತು.

ಶಕೀಲಾ ಬೆತ್ತಲು ಜಗತ್ತಿಗೆ ತೆರೆದುಕೊಂಡ ಘಳಿಗೆಯಲ್ಲೇ ಸೂಪರ್ ಸ್ಟಾರ್ ಒಬ್ಬ ಅವಳ ಬದುಕಿನಲ್ಲಿ ಪ್ರವೇಶ ಮಾಡಿದ್ದ. `ನಿನ್ನ ಮದುವೆಯಾಗ್ತೀನಿ’ ಅಂತ ಓಡಾಟ, ಒಡನಾಟ, ತಬ್ಬಾಟಗಳನ್ನು ಶುರುಮಾಡಿದ್ದ. ಕಡೆಗೆ ಜೂಟಾಟ ಆಡಿ ಬೇಸತ್ತು ಟಾಟಾ ಮಾಡಿ ಹೋದ. ಅವಳ ಅಂತರಂಗದಲ್ಲಿ ಮೊಟ್ಟ ಮೊದಲಿಗೆ ಮೂಡಿದ್ದ ಮದುವೆಯ ಕನಸು ಸಹ ಕಮರಿತ್ತು. ಆ ದೊಡ್ಡ ಮನುಷ್ಯ ಹಾಗೆಲ್ಲಾ ಮಾಡಬಾರದಿತ್ತು ಅಂತ ನಾವು ವಾದಿಸಬಹುದೇ ವಿನಃ, ಅವಳಿಗೆ ನ್ಯಾಯ ಕೊಡಿಸುವುದಿಕ್ಕಾಗುವುದಿಲ್ಲ. ಕಾಲ ಮಿಂಚಿದೆ. ಶಕೀಲಾ ಬದುಕಿನಲ್ಲಿ ನಾನಾ ತಿರುವುಗಳು. ಪ್ರತಿಯೊಂದು ತಿರುವಿನಲ್ಲೂ ಹಲವಾರು ಹಂಪ್ಸ್ ಗಳು. ಅವೆಲ್ಲವನ್ನೂ ಮೀರಿ ನಿಂತಾಗ ತೆರೆದುಕೊಂಡಿದ್ದು ಬೆತ್ತಲೆ ಜಗತ್ತು ಮಾತ್ರ. ಅಷ್ಟಕ್ಕೂ ಅದು ಅವಳ ಪಾಲಿಗೆ ಅನಿವಾರ್ಯವಾಗಿದ್ದ ಜಗತ್ತು. ಅದಕ್ಕವಳು ಹೊಂದಿಕೊಂಡಳು. ಅವಳ ಆಟೋ ಬಯೋಗ್ರಫಿಯಲ್ಲಿ ಎಲ್ಲವೂ ಇದೆ, ಆದರೆ ಏನೂ ಇಲ್ಲ. ಅವಳು ಅದರಲ್ಲಿ ಆಂತರ್ಯವನ್ನು ಬಿಚ್ಚಿಟ್ಟಿದ್ದಾಳೆ, ಆದರೆ ವಾಸ್ತವವನ್ನು ಮುಚ್ಚಿಟ್ಟಿದ್ದಾಳೆ. ಅಲ್ಲಿ ಕೇವಲ ಸಮರ್ಥನೆಯ ವಿನಃ ಬೇರೇನೂ ಕಾಣುವುದಿಲ್ಲ.

ಶಕೀಲಾಗೆ ಹೊಸ ಹೊಸ ಭಾಷೆಗಳನ್ನು ಕಲಿಯುವುದರಲ್ಲಿ ಬಹಳ ಆಸಕ್ತಿ. ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾಳೆ. ಎಲ್ಲಾ ಭಾಷೆಯೂ ಪಥ್ಯವಾಗಿದೆ. ಇಲ್ಲೊಂದು ವಿಚಾರವನ್ನು ಹೇಳಲೇಬೇಕು. ಇಷ್ಟೆಲ್ಲಾ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಕೀಲಾ ಸಿನಿಮಾಗಳನ್ನು ನೋಡುವುದಿಲ್ಲವಂತೆ. ಹಾಗೇನಾದ್ರೂ ನೋಡಿದರೇ ಅದು ಹಳೇ ಸಿನಿಮಾಗಳನ್ನು ಮಾತ್ರವಂತೆ. ಜೀವನಪೂರ್ತಿ ನೀಲಿ ಚಿತ್ರಗಳಲ್ಲಿ ನಟಿಸಿ ಅದೊಮ್ಮೆ ಬೇಸತ್ತಾಗ ಚಿತ್ರರಂಗದಿಂದ ದೂರ ಸರಿದಿದ್ದಳು. ಇಲ್ಲಿವರೆಗಿನ ಸಂಪಾದನೆಯನ್ನು ತನ್ನ ತಂಗಿಯ ಬಳಿಕೊಟ್ಟಿದ್ದಳು. ಅದೇ ಮೂಲವನ್ನು ನಂಬಿ ಚಿತ್ರರಂಗದಿಂದ ದೂರ ಸರಿದಳು. ಆದರೆ ಸ್ವಂತ ತಂಗಿಯೇ ಗಂಡನ ಜೊತೆ ಸೇರಿ ಮೋಸ ಮಾಡಿದ್ದಳು. ಅನಿವಾರ್ಯವಾಗಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಳು. ಆದರೆ ಮೊದಲ ಗೆಲುವು ಸಿಗಲಿಲ್ಲ. ಯಾಕಂದ್ರೇ ಅವಳಿಗೆ ವಯಸ್ಸಾಗಿತ್ತು. ಪ್ರೇಕ್ಷಕ ಬದಲಾವಣೆ ಬಯಸಿದ್ದ.

ನಿಜ, ಅವಳ ಆಟೋ ಬಯೋಗ್ರಫಿಯ ವಿಚಾರಕ್ಕೆ ಬರುವುದಾದರೇ ಅದರಲ್ಲಿ ಎಲ್ಲವೂ ಇದೆ, ಆದರೆ ಏನೂ ಇಲ್ಲ. ಅವಳು ಅದರಲ್ಲಿ ಆಂತರ್ಯವನ್ನು ಬಿಚ್ಚಿಟ್ಟಿದ್ದಾಳೆ, ವಾಸ್ತವವನ್ನು ಮುಚ್ಚಿಟ್ಟಿದ್ದಾಳೆ. ಅಲ್ಲಿ ಕೇವಲ ಸಮರ್ಥನೆಯ ವಿನಃ ಬೇರೇನೂ ಕಾಣಿಸುತ್ತಿಲ್ಲ. ಈ ಹಿಂದೆ ಇದೇ ಬಯೋಗ್ರಫಿಯ ಬಗ್ಗೆ ಕೇಳಿದಾಗ, `ಎಲ್ಲವನ್ನು ಮುಕ್ತವಾಗಿ ಬರೆಯುತ್ತಿದ್ದೇನೆ, ಏನೂ ಮುಚ್ಚುಮರೆಯಿಲ್ಲ. ಇನ್ನು ನನ್ನ ಜೀವನದ ಬಗ್ಗೆ ನಾನು ಬರೆದರೇ ಅದು ಕಾಂಟ್ರವರ್ಸಿ ಹೇಗಾಗುತ್ತೆ..?’ ಅಂತ ಮರುಪ್ರಶ್ನೆ ಹಾಕಿದ್ದಳು. ` ನಿಮ್ಮ ಜೀವನದಲ್ಲಿ ಮಿಂದೆದ್ದ ವ್ಯಕ್ತಿಗಳ ಬಗ್ಗೆ ಉಲ್ಲೇಖವಾದರೇ ಕಾಂಟ್ರವರ್ಸಿ ಆಗೋದಿಲ್ವಾ..?’ ಅಂತ ಕೇಳಿದ್ರೇ, ಕೆಲವೊಂದು ಕಡೆ ಎಡಿಟ್ ಆಗುತ್ತೆ ಅಂದಿದ್ದಳು. ಅದು ಆಗಿದೆ ಅನ್ನೋದೇ ಖರೆ. ಆಟೋ ಬಯೋಗ್ರಫಿಯಲ್ಲಿ ಎಲ್ಲೂ ಮುಕ್ತವಾಗಿಲ್ಲ. ಹಿಂಗಿಂಗ್ ಆಯಿತು ಎನ್ನುವುದನ್ನು ಹೇಳಿದ್ದಾಳೆಯೇ ವಿನಃ, `ಹೆಂಗೆಲ್ಲಾ ಆಯ್ತು…? ಯಾರ್ಯಾರಿದ್ದರು..?’ ಎನ್ನುವುದನ್ನು ಬಿಡಿಸಿ ಹೇಳಿಲ್ಲ.

ಆತ್ಮಕಥೆ ಎಂದರೇ ಮುಕ್ತವಾಗಿರಬೇಕು. ಇರುವುದನ್ನು ಇರುವ ಹಾಗೆಯೇ ಹೇಳುವ ಸ್ವಚ್ಛಂದ ಪುಸ್ತಕವಾಗಬೇಕು. ಅದರಲ್ಲೂ ಶಕೀಲಾಳಂತ ವಿವಾದಾತ್ಮಕ ಅಭಿನೇತ್ರಿಯರ ಆತ್ಮಕಥೆಗಳು ಇನ್ನಿಲ್ಲದ ಕುತೂಹಲವನ್ನು ಹುಟ್ಟಿಸುತ್ತವೆ. ಇನ್ನಿಲ್ಲದ ಅಭದ್ರತೆಯನ್ನು ಸೃಷ್ಟಿಸುತ್ತವೆ. ಆದರೆ ಶಕೀಲಾಳ ಆತ್ಮಕಥೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ಬೆತ್ತಲೆ ಜಗತ್ತಿಗೆ ಅವಳು ಹೇಗೆ ಅನಿವಾರ್ಯತೆಯಿಂದ ತೆರೆದುಕೊಂಡಳೋ, ಅದೇ ಅನಿವಾರ್ಯತೆ ಅವಳ ಆತ್ಮಕಥೆಯಲ್ಲೂ ಗೋಚರವಾಗಿರಬಹುದು. ಎಲ್ಲವೂ ಒತ್ತಡವಿರಬಹುದು. ಇಲ್ಲವೇ ಕೇವಲ ಸಮರ್ಥನೆಗೆ ಅವಳು ಪುಸ್ತಕ ಬರೆದಿರಬಹುದು.

POPULAR  STORIES :

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಮೀನಾಕುಮಾರಿ ಅದೇಕೆ ಕುಡಿದು ಸತ್ತಳು…!? `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’

ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?

ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!

ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!

ಮುಖದ ಅಂದ ಹೆಚ್ಚಿಸಬೇಕಾ…? ಇದನ್ನು ಓದಿ…

ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?

ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!

1 COMMENT

LEAVE A REPLY

Please enter your comment!
Please enter your name here