ಭ್ರಷ್ಟರಿಗೆ ಸರ್ಕಾರದ ಬಂಪರ್ ಗಿಫ್ಟ್..!?

1
50

 

ಮೊನ್ನೆಯಷ್ಟೇ ಭ್ರಷ್ಟಾಚಾರ ನಿಗ್ರಹದಳವನ್ನು ಅಸ್ತಿತ್ವಕ್ಕೆ ತಂದ ಸರ್ಕಾರದ ಕ್ರಮ ಹಲವು ಸಂಶಯಗಳನ್ನು ಹುಟ್ಟುಹಾಕಿತ್ತು. ವಿರೋಧ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಲೋಕಾಯುಕ್ತವನ್ನು ಬಲಹೀನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ ಎನ್ನಲಾಯಿತು. ಇದೀಗ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸರ್ಕಾರದ ಕ್ರಮವನ್ನು ಬಲವಾಗಿ ಟೀಕಿಸಿದ್ದಾರೆ. `ಸರ್ಕಾರ ಎಸಿಬಿಯನ್ನು ಅಸ್ತಿತ್ವಕ್ಕೆ ತಂದಿದ್ದು ಸರಿಯಲ್ಲ. ಇದು ಲೋಕಾಯುಕ್ತವನ್ನು ವಿಕೃತಗೊಳಿಸುವ ಪ್ರಯತ್ನ, ರಾಮಕೃಷ್ಣ ಹೆಗಡೆಯವರು ಲೋಕಾಯುಕ್ತ ಸ್ಥಾಪಿಸಿದ್ದರು. ನನ್ನ ಅವಧಿಯಲ್ಲಿ ನಿಷ್ಠಾವಂತ ಲೋಕಾಯುಕ್ತರನ್ನು ನೇಮಿಸಿದ್ದೆವು. ಇದೀಗ ಸರ್ಕಾರ ಭ್ರಷ್ಟರಿಗೆ ನೆರವಾಗುತ್ತಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಸರ್ಕಾರ ಮಾತ್ರ ಲೋಕಾಯುಕ್ತವನ್ನು ಬಲಹೀನಗೊಳಿಸುವ ಉದ್ದೇಶವಿಲ್ಲ. ಕೋರ್ಟ್ ಆದೇಶವನ್ನು ಪಾಲಿಸಿದ್ದೇವೆ ಎನ್ನುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಸೆಣಸಬೇಕಾದ ಲೋಕಾಯುಕ್ತದಲ್ಲಿಯೇ ಭ್ರಷ್ಟಾಚಾರ ನಡೆದಿದ್ದು ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇತ್ತೀಚೆಗೆ ಎಸೈಟಿ ಮೂರ್ನಾಲ್ಕು ಜನರ ಮೇಲೆ ಕೇಸು ದಾಖಲಿಸಿದ ಪ್ರಕ್ರಿಯೆಯ ನಂತರ, ಲೋಕಾಯುಕ್ತವನ್ನು ಪಾರದರ್ಶಕವಾಗಿಟ್ಟುಕೊಳ್ಳದ ಲೋಕಾ ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜಿನಾಮೆ ನೀಡಿದ್ದರು. ಬಹುಶಃ ಇಲ್ಲಿಂದ ಲೋಕಾಯುಕ್ತದ ಮೇಲೆ ವಿಶ್ವಾಸ ಕಡಿಮೆಯಾಗಿತ್ತು. ಜೊತೆಗೆ ಸರ್ಕಾರ ಹೊಸ ಲೋಕಾಯುಕ್ತರ ನೇಮಕಕ್ಕೆ ಈಗಲೂ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ನಡುವೆ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತಂದು ಆದೇಶ ಹೊರಡಿಸಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೊದಲಿನಿಂದಲೂ ಲೋಕಾಯುಕ್ತವನ್ನು ಕಟ್ಟಿ ಹಾಕುವುದಕ್ಕೆ ಪ್ರಯತ್ನ ನಡೆದೇ ಇತ್ತು. ಅದಕ್ಕೆ ತಕ್ಕುದಾಗಿ ಭಾಸ್ಕರ್ ರಾವ್ ಅವರಂತ ಲೋಕಾಯುಕ್ತರು ಹೊಲ ಮೇಯ್ಯುವ ಕೆಲಸ ಮಾಡಿದ್ದು ರಾಜಕಾರಣಿಗಳ ಬಾಯಿಗೆ ಲಾಡು ಬಂದು ಬಿದ್ದ ಹಾಗಾಗಿತ್ತು. ಅತ್ತ ಭಾಸ್ಕರ್ ರಾವ್ ಅಂತೂ ಇಂತೂ ರಾಜಿನಾಮೆ ಕೊಟ್ಟ ನಂತರ ಹೊಸ ಲೋಕಾಯುಕ್ತರ ನೇಮಕಕ್ಕೆ ಮೀನಮೇಷ ಶುರುವಾಗಿತ್ತು. ಆ ಸ್ಥಾನಕ್ಕೆ ಎಸ್ ಆರ್ ನಾಯಕ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದಾಗ ವಿರೋಧ ಪಕ್ಷಗಳು ಸುತಾರಂ ಒಪ್ಪಲಿಲ್ಲ. ಈ ಪ್ರಕ್ರಿಯೆ ನೆನೆಗುದಿಯಲ್ಲಿರುವಾಗಲೇ ಸರ್ಕಾರ ಇದೀಗ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತಂದು ಆದೇಶ ಹೊರಡಿಸಿದೆ. ಇದು ಲೋಕಾಯುಕ್ತವನ್ನು ಡಮ್ಮಿ ಮಾಡುವ ಪ್ರಯತ್ನವಲ್ಲ ಎಂದು ಸರ್ಕಾರ ಹೇಳಿದರೂ, ಲಾಕರ್ ತನ್ನ ಬಳಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ ಎನ್ನುವುದು ಸ್ಪಷ್ಟವಾಗಿದೆ.

ನೇರವಾಗಿ ಹೇಳಬೇಕಂದ್ರೆ ಆಡಳಿತಪಕ್ಷ ಮತ್ತು ವಿರೋಧಪಕ್ಷಗಳ ನಡುವೆ ಲೋಕಾಯುಕ್ತ ಬಡವಾಗಿದೆ. ಲೋಕಾಯುಕ್ತವು ರಾಜಕಾರಣಿಗಳ ಬುಡಕ್ಕೇ ಕಾವಾಗತೊಡಗಿದ ಬಳಿಕ ಲೋಕಾಯುಕ್ತ ಮತ್ತು ರಾಜಕಾರಣಿಗಳ ನಡುವೆ ತಿಕ್ಕಾಟ ತೀವ್ರವಾಗುತ್ತ ಬಂದಿತ್ತು. ಆರಂಭದಿಂದಲೂ ಲೋಕಾಯುಕ್ತವನ್ನು ಯಾವ ರೀತಿಯಲ್ಲೆಲ್ಲಾ ಮಟ್ಟ ಹಾಕಬಹುದು ಎನ್ನುವುದಕ್ಕೆ ರಾಜಕಾರಣಿಗಳು ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಅಂತಿಮವಾಗಿ ಲೋಕಾಯುಕ್ತರ ಚಾರಿತ್ರ್ಯವನ್ನು ರಾಜಕಾರಣಿಗಳೇ ಪ್ರಶ್ನಿಸತೊಡಗಿದರು. ಅಧಿಕಾರಕ್ಕೇರಿದ ಬೆನ್ನಿಗೆ ಲೋಕಾಯುಕ್ತರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗುವಂತೆ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಹುದ್ದೆಯನ್ನು ನಿರ್ವಹಿಸಲು ನಿವೃತ್ತ ನ್ಯಾಯಾಧೀಶರು ಹಿಂದೆ ಮುಂದೆ ನೋಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಹಾಗೆ ನೋಡಿದ್ರೇ 1986ರಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಲೋಕಾಯುಕ್ತದ ಹಿರಿಮೆಯನ್ನು ರಬೀಂದ್ರನಾಥ್ ಪೈನೆ, ಹಕೀಂ, ವೆಂಕಟಾಚಲ, ಸಂತೋಷ್ ಹೆಗ್ಡೆ ಅವರಂತ ನಿಷ್ಠುರ, ಕ್ಲೀನ್ ಹ್ಯಾಂಡ್ಗಳು ಹೆಚ್ಚಿಸಿದ್ದರು. ವೆಂಕಟಾಚಲ, ಸಂತೋಷ್ ಹೆಗ್ಡೆ ಕಾಲದಲ್ಲಿ ಭ್ರಷ್ಟರ ನಡುಮುರಿಯುವ ಕೆಲಸ ಸೊಗಸಾಗಿ ನಡೆದಿತ್ತು. ಅಷ್ಟರ ಮಟ್ಟಿಗೆ ಭ್ರಷ್ಟರ ನಿದ್ದೆಯನ್ನು ಇವರು ಕೆಡಿಸಿದ್ದರು. ಸಂತೋಷ್ ಹೆಗ್ಡೆಯ ನಂತರ 2011ರ ಆಗಸ್ಟ್ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ಶಿವರಾಜ್ ಪಾಟೀಲ್ ಅವರ ಮೇಲೆ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆಂಬ ಆರೋಪ ಕೇಳಿಬಂತು. ಅವರು 2011ರ ಸೆಪ್ಟೆಂಬರ್ 19ನೇ ತಾರೀಖು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು.

ಇದಾದ ನಂತರ ಭಾಸ್ಕರ್ ರಾವ್ ಅಧಿಕಾರವನ್ನೇರಿದರಾದರೂ ಅವರ ಮೇಲೂ ಭ್ರಷ್ಟಾಚಾರದ ಕಳಂಕ ಬಿದ್ದು, ಅವರೂ ರಾಜೀನಾಮೆ ನೀಡಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಅವರ ಪುತ್ರ ಸಿಲುಕಿಕೊಂಡ ಹಗರಣದ ಪಾಲನ್ನು ಭಾಸ್ಕರ್ ರಾವ್ ಸ್ವೀಕರಿಸಬೇಕಾಯಿತು. ಲೋಕಾಯುಕ್ತದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾಸ್ಕರ್ ರಾವ್ ಅವರು ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ ಭಾಸ್ಕರ್ ರಾವ್ ಕುರ್ಚಿಗೆ ಅಂಟಿಕೊಳ್ಳುವ ಮೂಲಕ ತನ್ನ ಮೇಲಿರುವ ಆರೋಪಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದರು.

ಭಾಸ್ಕರ್ ರಾವ್ ಹಟದಿಂದಾಗಿ ಲೋಕಾಯುಕ್ತ ತೀವ್ರ ಅತಂತ್ರತೆಯನ್ನು ಎದುರಿಸಬೇಕಾಯಿತು. ಇದೇ ಸಂದರ್ಭದಲ್ಲಿ ಉಪಲೋಕಾಯುಕ್ತ ಸುಭಾಷ್ ಅಡಿ ಅವರ ಸ್ಥಾನವೂ ಕೂಡ ಪ್ರಶ್ನಾರ್ಹವಾಗಿತ್ತು. ಬಿಜೆಪಿಯ ಕೆಲವು ಮುಖಂಡರ ಜೊತೆಗೆ ಸುಭಾಷ್ ಅಡಿಗಿರುವ ಸಂಬಂಧ ಹಾಗೂ ಲೋಕಾಯುಕ್ತವನ್ನು ಅಡಿ ಅವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸಿಗರ ಅನುಮಾನ ಅವರನ್ನೂ ಬಲಿತೆಗೆದುಕೊಳ್ಳುವ ಎಲ್ಲ ಸೂಚನೆಗಳೂ ಇತ್ತು. ಆಮೇಲೆ ಉಪಲೋಕಾಯುಕ್ತ ನ್ಯಾಯಾಧೀಶ ಸುಭಾಷ್ ಅಡಿ ಅವರ ಪದಚ್ಯುತಿ ಬಗ್ಗೆ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಪ್ರಸ್ತಾಪವನ್ನೂ ಸ್ಪೀಕರ್ ಸ್ವೀಕರಿಸಿದ್ದರು. ಆದರೆ ಅಡಿಯ ಪರವಾಗಿ ಬಿಜೆಪಿ ಸದಸ್ಯರು ನಿಂತರು. ಭಾಸ್ಕರ್ ರಾವ್ ಮತ್ತು ಅಡಿ ಕುರಿತಂತೆ ಅವಿಶ್ವಾಸಗಳು ಬಹಿರಂಗವಾಗಿರುವುದರಿಂದ ಮತ್ತು ಅವರಿಬ್ಬರು ವಿಶ್ವಾಸಾರ್ಹತೆಗಳನ್ನು ಕಳೆದುಕೊಂಡಿರುವುದರಿಂದ ಇಬ್ಬರ ಬದಲಾವಣೆಯೂ ಸೂಕ್ತವಾದುದೇ ಆಗಿತ್ತು. ಕಡೆಗೂ ಭಾಸ್ಕರ್ ರಾವ್ ತಾವೇ ರಾಜೀನಾಮೆ ಕೊಟ್ಟು ಹೊರನಡೆದಿದ್ದರು.

ಇದಾದ ನಂತರ ಹೊಸ ಲೋಕಾಯುಕ್ತ ನೇಮಕಕ್ಕೆ ಮೀನಮೇಷ ಶುರುವಾಗಿದೆ. ಎಸ್ ಆರ್ ನಾಯಕ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದರೂ ಅವರನ್ನು ಮೇನ್ ಸ್ಕ್ರೀನ್ಗೆ ತರಲು ವಿರೋಧಿಗಳು ತಯಾರಿಲ್ಲ. ಈ ಹಂತದಲ್ಲೇ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿರುವ ಸರ್ಕಾರ, ಭ್ರಷ್ಟಾಚಾರ ನಿಗ್ರಹದಳ ಅಥವಾ ಎಸಿಬಿಯನ್ನು ಅಸ್ತಿತ್ವಕ್ಕೆ ತಂದಿತ್ತು. ಎಸಿಬಿ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಎಸಿಬಿಗೆ ಲೋಕಾಯುಕ್ತದಂತೆ ಸ್ವಯಂಪ್ರೇರಿತರಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವಿಲ್ಲ. ಅಂತಿಮ ನಿರ್ಣಯಗಳಿಗೆ ಮುಖ್ಯಮಂತ್ರಿಯವರ ಬಳಿ ಪ್ರಸ್ತಾಪವಿಡಬೇಕು. ಹೀಗಾಗಿಯೇ ಸರ್ಕಾರ ಲೋಕಾಯುಕ್ತಕ್ಕಿದ್ದ ಪವರ್ ಅನ್ನು ಕಿತ್ತು ಅದನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ರವಾನಿಸಿದೆ. ಒಂದರ್ಥದಲ್ಲಿ ಭ್ರಷ್ಟರಿಗೆ ಆನೆಬಲ ಬಂದಂತಾಗಿದೆ.

ಸಂಸ್ಥೆಯನ್ನು ಸಾರ್ವಜನಿಕ ನೌಕರರ ವಿರುದ್ಧದ ಭ್ರಷ್ಟಾಚಾರ ದೂರುಗಳನ್ನು ವಿಚಾರಣೆಗೆ ಸೀಮಿತಗೊಳಿಸಿ, ಭ್ರಷ್ಟಾಚಾರ ಪ್ರಕರಣಗಳ ಕ್ರಿಮಿನಲ್ ತನಿಖೆಗೆ `ಭ್ರಷ್ಟಾಚಾರ ನಿಗ್ರಹ ದಳ’ ರಚಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿರುವುದರಿಂದ ಕಳೆದ ಏಳೆಂಟು ತಿಂಗಳಿಂದ ಮುಖ್ಯಸ್ಥರೇ ಇಲ್ಲದೆ ಸೊರಗಿದ್ದ ಲೋಕಾಯುಕ್ತಕ್ಕೆ ಹೊಸ ನ್ಯಾಯಮೂರ್ತಿ ನೇಮಕಗೊಂಡರೂ ಅವರ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಬಹುದು. ಲೋಕಾಯುಕ್ತ ಪೇಲವವೆನಿಸುತ್ತದೆ. ಕಡೆಗೂ ಲೋಕಾಯುಕ್ತವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ ಸರ್ಕಾರ ಲೋಕಾಯುಕ್ತದ ಜವಬ್ಧಾರಿಯನ್ನು ತಗ್ಗಿಸುವ ಪ್ರಯತ್ನವಷ್ಟೇ ಎಂದಿದೆ.

ಆದರೆ ಸರ್ಕಾರ ಸಾರ್ವಜನಿಕ ನೌಕರರ ವಿರುದ್ದದ ದೂರುಗಳ ವಿಚಾರಣೆ ನಡೆಸಲು ಲೋಕಾಯುಕ್ತರಿಗೆ ಅಧಿಕಾರ ನೀಡುವ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಕ್ರಿಮಿನಲ್ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡುವ ಎರಡು ಪ್ರತ್ಯೇಕ ಶಾಸನಗಳ ಗೊಂದಲ ಸರಿಪಡಿಸಲು ಈ ತೀರ್ಮಾನ ಕೈಗೊಂಡಿರುವುದಾಗಿ ಸಮಜಾಯಿಷಿ ನೀಡಿದೆ. ಹೊಸದಾಗಿ ಭ್ರಷ್ಟಾಚಾರ ನಿಗ್ರಹ ದಳ ರಚಿಸುವ ತೀರ್ಮಾನದಿಂದ ಹಾಲಿ ಲೋಕಾಯುಕ್ತದಲ್ಲಿನ ಪೊಲೀಸ್ ವಿಭಾಗವು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರ ಜವಾಬ್ದಾರಿ ನಿರ್ವಹಣೆಗೆ ನೆರವಾಗುವುದಕ್ಕಷ್ಟೇ ಸೀಮಿತವಾಗಲಿದೆ. ಹಾಗೆಯೇ ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ `ಜಾಗೃತ ಕೋಶ’ ಅಥವಾ ವಿಜಿಲೆನ್ಸ್ ವಿಂಗ್ ರಚಿಸಲಾಗಿದ್ದು, ಕೇಂದ್ರ ಸರ್ಕಾರದ ಜಾಗೃತ ಆಯೋಗದ ಮಾದರಿಯಲ್ಲಿ ಈ ಕೋಶಗಳು ಕಾರ್ಯನಿರ್ವಹಿಸಲಿವೆ. ಆಯ ಇಲಾಖೆಗಳ ಅಧಿಕಾರಿ, ನೌಕರರ ವಿರುದ್ದದ ದೂರು ಹಾಗೂ ಕುಂದು ಕೊರತೆ ಸ್ವೀಕರಿಸುವುದು, ಪರಿಶೀಲಿಸಿ ತ್ವರಿತ ಪರಿಹಾರ ನೀಡುವ ಅಧಿಕಾರವನ್ನು ಜಾಗೃತಕೋಶದ ಅಧಿಕಾರಿಗಳಿಗೆ ನೀಡಲಾಗಿದೆ. ಜಾಗೃತ ವ್ಯವಸ್ಥೆಯ ಮಾರ್ಗದರ್ಶನ, ಮೇಲುಸ್ತುವಾರಿ ಹಾಗೂ ಆಡಳಿತಾತ್ಮಕ ನಿರ್ವಹಣೆಗಾಗಿ ಜಾಗೃತ ಸಲಹಾ ಮಂಡಳಿಯನ್ನೂ ರಚಿಸಲಾಗಿದೆ. ಈ ಮಂಡಳಿಗೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಿಪಿಎಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಡಿಜಿಪಿ ಹಾಗೂ ಆಡಳಿತದಲ್ಲಿ ಅನುಭವ ಹೊಂದಿರುವ ಇಬ್ಬರು ಗಣ್ಯರು ಈ ಮಂಡಳಿ ಸದಸ್ಯರಾಗಿರುತ್ತಾರೆ. ಡಿಪಿಎಆರ್ ಜಾಗೃತ ವಿಭಾಗದ ಕಾರ್ಯದರ್ಶಿ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಒಟ್ಟು 322 ಹುದ್ದೆಗಳನ್ನು ಸೃಷಿಸಲಾಗಿದೆ. ಎಡಿಜಿಪಿ ಮುಖ್ಯಸ್ಥರಾದ ಈ ದಳದಲ್ಲಿ ಒಬ್ಬರು ಐಜಿಪಿ, ಹತ್ತು ಎಸ್ಪಿ, 35 ಡಿವೈಎಸ್ಪಿ, 75 ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 200 ಮಂದಿ ಹೆಡ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಗಳು ಇರಲಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಒಟ್ಟಾರೆ ಮೇಲ್ವಿಚಾರಣೆ ಮಾಡಲಿದೆ. ಈ ದಳಕ್ಕೆ ಆಡಳಿತಾತ್ಮಕ ಬೆಂಬಲ ನೀಡಲು ಡಿಪಿಎಆರ್ ಇಲಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿ ದರ್ಜೆಯ ಹುದ್ದೆಯನ್ನು ಸೃಷ್ಟಿಸಿ, ಅವರ ನೇತೃತ್ವದಲ್ಲಿ ಒಂದು `ಜಾಗೃತ ವಿಭಾಗ’ ರಚಿಸಲಾಗಿದೆ. ಈ ಕಾರ್ಯದರ್ಶಿಯು ಮುಖ್ಯ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಯವರಿಗೆ ವರದಿ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.

ಇವೆಲ್ಲವನ್ನು ಗಮನಿಸಿದಾಗ ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದು ಖಾತ್ರಿಯಾಗುತ್ತದೆ. ಭ್ರಷ್ಟರ ವಿರುದ್ಧ ಯಾರ ಅಪ್ಪಣೆಯೂ ಇಲ್ಲದೇ ಎಫ್ಐಆರ್ ದಾಖಲಿಸುತ್ತಿದ್ದ ಲೋಕಾಯುಕ್ತದ ಪರಮಾಧಿಕಾರವನ್ನು ಎಸಿಬಿಗೆ ಕೊಟ್ಟು ಅಂತಿಮ ನಿರ್ಣಯ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕಿದೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತದೆ. ಅಲ್ಲಿಗೆ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತವನ್ನು ಕಾಲಾಂತರದಲ್ಲಿ ನಾಮಕಾವಸ್ತೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿರೋದು ಸುಳ್ಳಲ್ಲ. ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಬಿಜೆಪಿಗೂ, ಮಿಕ್ಕ ಪಕ್ಷಗಳಿಗೂ ಲೋಕಾಯುಕ್ತ ಒಂದಲ್ಲ ಒಂದು ರೀತಿಯಲ್ಲಿ ತಪರಾಕಿ ಕೊಟ್ಟಿದೆ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕರ್ಾರ ಬೀಳುವುದಕ್ಕೆ ಲೋಕಾಯುಕ್ತದ ಕೊಡುಗೆ ಬಹುದೊಡ್ಡದಿದೆ. ರಾಜಕಾರಣಿಗಳ ಹಿಂದೆ ಬೀಳುವ ಮೂಲಕ ರಾಜ್ಯದ ಲೋಕಾಯುಕ್ತ ಇಡೀ ದೇಶದಲ್ಲೇ ಸುದ್ದಿ ಮಾಡಿತ್ತು. ಇಂದಿಗೂ ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಕರ್ನಾಟಕದ ಲೋಕಾಯುಕ್ತ ಗುರುತಿಸಿಕೊಳ್ಳುತ್ತಿದೆ.

ಹೆಚ್ಚಾಗಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಮಗ್ಗಲು ಮುರಿಯುತ್ತಿದ್ದ ಲೋಕಾಯುಕ್ತದ ಪವರ್ ಕಿತ್ತುಕೊಳ್ಳುವುದಕ್ಕೆ, ಅದರ ರೆಕ್ಕೆಪುಕ್ಕಗಳನ್ನು ಕತ್ತರಿಸಿ ಹಾಕುವುದಕ್ಕೆ ಹಿಂದಿನಿಂದಲೂ ಪ್ರಯತ್ನವಾಗುತ್ತಲೇ ಇದೆ. ಈ ಹಿಂದೆ ಭಾಸ್ಕರ್ ರಾವ್ ಮತ್ತು ಸುಭಾಷ್ ಅಡಿ ವಿಷಯದ ಕುರಿತಂತೆಯೂ ರಾಜಕಾರಣಿಗಳು ಉತ್ಸುಕರಾಗಿದ್ದು ಲೋಕಾಯುಕ್ತದ ಮೇಲಿನ ಪ್ರೀತಿಯಿಂದೇನಲ್ಲ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಭಾಗವಾಗಿ ರಾಜಕಾರಣಿಗಳು ಇದರ ಹಿಂದೆ ಬಿದ್ದಿದ್ದರು. ಭಾಸ್ಕರ್ ರಾವ್ ರಾಜೀನಾಮೆ ನೀಡುತ್ತಿದ್ದಂತೆ ಹೊಸ ಲೋಕಾಯುಕ್ತರನ್ನು ಇನ್ನೊಂದು ತಿಂಗಳಲ್ಲಿ ನೇಮಕ ಮಾಡಲಾಗುವುದು. ಹತ್ತು ವರ್ಷ ಹೈಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿದವರನ್ನು ಪರಿಗಣಿಸಲಾಗುವುದು. ಹೈಕೋರ್ಟ್ ಯಾರ ಹೆಸರನ್ನು ಸೂಚಿಸುತ್ತೋ ಅವರೇ ಲೋಕಾಯುಕ್ತರಾಗುತ್ತಾರೆ. ಲೋಕಾಯುಕ್ತ ಸಂಸ್ಥೆಯನ್ನ ಯಾವುದೇ ಕಾರಣಕ್ಕೂ ದುರ್ಬಲಗೊಳಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಸರ್ಕಾರ ನಾಲ್ಕೈದು ತಿಂಗಳು ಕಳೆದರೂ ಲೋಕಾಯುಕ್ತರನ್ನು ನೇಮಕ ಮಾಡಿಲ್ಲ. ಎಸ್ ಆರ್ ನಾಯಕ್ ಹೆಸರನ್ನು ಪ್ರಸ್ತಾಪ ಮಾಡಿ ಸುಮ್ಮನಾಗಿದೆ.

`ಭಾಸ್ಕರ್ ರಾವ್ ಅಂಡ್ ಗ್ಯಾಂಗ್ ಹೊಲ ಮೇಯ್ದು ಎದ್ದುಹೋದ ನಂತರ, ಮುಂದಿನ ದಿನಗಳಲ್ಲಿ ಲೋಕಾಯುಕ್ತ ಮುಖ್ಯಸ್ಥರನ್ನು ಆಯ್ಕೆ ಮಾಡುವಾಗ ಅವರ ಪೂರ್ವಾಪರಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸರ್ಕಾರದ ಕರ್ತವ್ಯ. ಲೋಕಾಯುಕ್ತ ಸ್ಥಾನವನ್ನು ನಿರ್ವಹಿಸುವವರು ಆ ಸ್ಥಾನದ ಘನತೆಯನ್ನು ಗೌರವಿಸಬೇಕಾಗಿದೆ. ರಾಜಕಾರಣಿಗಳ ಜೊತೆಗೆ ಅನೈತಿಕ ಸಂಬಂಧಗಳನ್ನು ಹೊಂದುವುದು ಪರೋಕ್ಷವಾಗಿ ಆ ಸ್ಥಾನಕ್ಕೆ ಮಾಡುವ ಅವಮಾನವಾಗಿದೆ. ಲೋಕಾಯುಕ್ತಕ್ಕೆ ಕಳೆದು ಹೋದ ವರ್ಚಸ್ಸು ಮತ್ತೆ ಬರಬೇಕಾದರೆ ಆ ಸ್ಥಾನವನ್ನು ಯೋಗ್ಯ ವ್ಯಕ್ತಿಗಳು ತುಂಬಬೇಕಾಗಿದೆ. ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವಲ್ಲಿ ರಾಜಕಾರಣಿಗಳಿಗಿರುವ ಆಸಕ್ತಿ ಆ ಸ್ಥಾನವನ್ನು ತುಂಬಿಸುವಾಗಲೂ ಇರಬೇಕು’ ಎಂದೆಲ್ಲಾ ಚರ್ಚೆ ನಡೆದಿತ್ತು. ಹೀಗಿರುವಾಗಲೇ ಲೋಕಾಯುಕ್ತವನ್ನು ದುರ್ಬಲಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದೆ.

ಒಂದುಕಡೆ ಲೋಕಾಯುಕ್ತ ಭಾಸ್ಕರ್ರಾವ್ ರಾಜೀನಾಮೆಯಿಂದ ಖಾಲಿಯಾಗಿರುವ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಭ್ರಷ್ಟಾಚಾರದ ಕಳಂಕ ಹೊತ್ತಿರುವ ಲೋಕಾಯುಕ್ತ ಸಂಸ್ಥೆಗೆ ಅತ್ಯುತ್ತಮ ಹಿನ್ನೆಲೆಯುಳ್ಳ ನ್ಯಾಯಾಧೀಶರನ್ನು ತರಬೇಕೆಂಬ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಿರುವಾಗಲೇ ಎಸಿಬಿಯನ್ನು ಅಸ್ತಿತ್ವಕ್ಕೆ ತಂದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವ ಸರ್ಕಾರದ ನಡೆ ನಿಜಕ್ಕೂ ಪ್ರಶ್ನಾತೀತವಾಗಿದೆ.

  •  ರಾ ಚಿಂತನ್

POPULAR  STORIES :

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಭೂಮಿಗೆ ಜ್ವರ ಬಂದಿದೆ..!?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

1 COMMENT

LEAVE A REPLY

Please enter your comment!
Please enter your name here