ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಶೃಂಗೇರಿ ತಾಲೂಕಿನ ಕಿಗ್ಗಾದ ಮಳೆ ದೇವರು ಋಷ್ಯಶೃಂಗೇಶ್ವರಗೆ ಪೂಜೆ ಸಲ್ಲಿಸುವಂತೆ ಶೃಂಗೇರಿ ಮಠದ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಸೂಚಿಸಿದ್ದಾರೆ.
ವರುಣದೇವ ಶಾಂತನಾಗಲು ಋಷ್ಯಶೃಂಗನಿಗೆ ವಿಶೇಷ ಪೂಜೆ ಮಾಡಬೇಕು. ಮೂರು ದಿನಗಳ ಕಾಲ ಸತತವಾಗಿ ಸ್ವಾಮಿಗೆ ಅಗಿಲು ಸೇವೆ ಮತ್ತು ಅಭಿಷೇಕ ಮಾಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಎಂಬಲ್ಲಿ ನೆಲೆನಿಂತಿರುವ ಋಷ್ಯಶೃಂಗೇಶ್ವರ ಸ್ವಾಮಿ ಮಳೆ ದೇವರೆಂದೇ ಪ್ರಸಿದ್ಧಿ. ಮಳೆ ಬಾರದೆ ಇದ್ದಾಗ, ಭಾರಿ ಮಳೆಯಾದಾಗ ಸಹ ಸ್ವಾಮಿಗೆ ಮೂರು ದಿನಗಳ ಅಗಿಲು ಸೇವೆ ಸಲ್ಲಿಸಲಾಗುತ್ತದೆ. ಬರವಿದ್ದಾಗ ಪೂಜೆ ಬಳಿಕ ಮಳೆ ಬರುತ್ತದೆ. ಪ್ರವಾಹ ಸನ್ನಿವೇಶ ನಿರ್ಮಾಣವಾದಾಗ ಪೂಜೆ ಬಳಿಕ ಮಳೆ ಕಡಿಮೆ ಆಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.