ಮಾಸ್ತಿಗುಡು ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ನಟರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ ಗೌಡ ಕೋರ್ಟ್ ಗೆ ಹಾಜರಾಗಿದ್ದಾರೆ.
ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದಿದ್ದ ನಿರ್ಮಾಪಕ ಸುಂದರ್ ಪಿ ಗೌಡಗೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು. ಜಾಮೀನು ರಹಿತ ವಾರೆಂಟ್ ಹಿನ್ನೆಲೆಯಲ್ಲಿ ಸುಂದರ್ ಪಿ ಗೌಡನನ್ನ ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಹೈಡ್ರಾಮವೇ ನಡೆದಿದ್ದು, ಮಂಗಳವಾರ ಸಂಜೆ ವೇಳೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಬೆಂಗಳೂರಿನ ಸುಂದರ್ ಮನೆಗೆ ತೆರಳಿದ್ದರು.
ಈ ವೇಳೆ ಮನೆಯಲ್ಲಿ ಸುಂದರ್ ಹಾಗೂ ನಟ ದುನಿಯ ವಿಜಯ್ ಚರ್ಚೆಯಲ್ಲಿ ತೊಡಗಿದ್ದರು. ವಾರೆಂಟ್ ವಿಚಾರ ತಿಳಿಸಿದ ಪೊಲೀಸರು ಸುಂದರ್ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಬಟ್ಟೆ ಧರಿಸಿ ಬರುವುದಾಗಿ ಹೇಳಿ ಹೋಗಿದ್ದ ಸುಂದರಗೌಡ ಪರಾರಿಯಾಗಿದ್ದರು. ಆರೋಪಿಯ ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು.
ನಾಪತ್ತೆಯಾಗಿದ್ದ ಸುಂದರ್ ಗೌಡ ಇಂದು ರಾಮನಗರ ಕೋರ್ಟ್ ಗೆ ಹಾಜರಾಗಿದ್ದು, ಇವರೊಡನೆ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ ಸಹ ಹಾಜರಾಗಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.