ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡದ ನಡುವೆ ಆರೋಗ್ಯವಾಗಿರ ಬೇಕಾದರೆ ನೀವು ವರ್ಷಕ್ಕೆ ಮೂರು ಪ್ರವಾಸ ಕೈಗೊಳ್ಳುವುದು ಉತ್ತಮ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ವರ್ಷದಲ್ಲಿ ಮೂರು ವಾರಗಳಿಗಿಂತ ಹೆಚ್ಚಿನ ರಜಾ ದಿನಗಳನ್ನು ಪ್ರವಾಸದಲ್ಲಿ ಕಳೆದವರನ್ನು ಮತ್ತು ಅದಕ್ಕಿಂತ ಕಡಿಮೆ ರಜೆಯನ್ನು ತೆಗೆದುಕೊಂಡವರಿಗೆ ಹೋಲಿಸಿದಾಗ ರಜಾ ಮಜವನ್ನು ಅನುಭವಿಸದ ಶೇ.37ರಷ್ಟು ಜನರು ಮುಂಚಿತವಾಗಿವಾಗಿ ಸಾವನ್ನಪ್ಪುತ್ತಾರೆ ಎಂಬುದು ಸಂಶೋಧಕರು ಕಂಡು ಕೊಂಡಿದ್ದಾರೆ. ಅದರಲ್ಲೂ ಪುರುಷರು ರಜಾ ದಿನಗಳಲ್ಲಿ ಕಳೆಯುವುದು ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದು ಎಂದು ಅಧ್ಯಯನ ತಂಡ ತಿಳಿಸಿದೆ.
‘ಅತ್ಯುತ್ತಮ ಜೀವನಶೈಲಿಯನ್ನು ಹೊಂದಿರುವವರು ರಜಾ ದಿನಗಳನ್ನು ತೆಗೆದುಕೊಳ್ಳದೆ ಕೆಲಸ ಮಾಡುವುದರಿಂದ ಅಪಾಯವಿಲ್ಲ ಎಂದು ಭಾವಿಸಬೇಡಿ. ಏಕೆಂದರೆ ಕೆಲಸದ ಒತ್ತಡಗಳನ್ನು ನಿವಾರಿಸಲು ರಜಾದಿನಗಳು ಉತ್ತಮ ಮಾರ್ಗವೆಂದು‘ ಫಿನ್ಲೆಂಡ್ ಹೆಲ್ಸಿಂಕಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ಟಿಮೊ ಸ್ಟ್ರಾಂಡ್ಬರ್ಗ್ ತಿಳಿಸಿದ್ದಾರೆ.
ಅಧ್ಯಯನದಲ್ಲಿ ಪರೀಕ್ಷಿಸಲಾದ ಕಾರ್ಯ ನಿರ್ವಾಹಕರಲ್ಲಿ ಕಡಿಮೆ ರಜಾ ದಿನಗಳನ್ನು ತೆಗೆದುಕೊಳ್ಳುವವರಲ್ಲಿ ಆರೋಗ್ಯದಲ್ಲಿ ಏರಿಳಿತ ಉಂಟಾಗಿರುವುದು ಕಂಡು ಬಂದಿದೆ. ಇದರಿಂದ ಇವರ ಆಯಸ್ಸು ಕೂಡ ಕುಂಠಿತವಾಗುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದರು. ಈ ಸಂಶೋಧನೆಯ ಒಟ್ಟು ವರದಿಯನ್ನು ಜರ್ಮನಿಯಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಲಾಗಿದೆ. ಈ ಅಧ್ಯಯನವು ಆರೋಗ್ಯದ ಜಾಗೃತಿ ಮೂಡಿಸಲು ನಡೆಸಲಾಗಿಲ್ಲ. ಬದಲಾಗಿ ಹೃದಯದ ರಕ್ತನಾಳದ ಖಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಸಂಶೋಧಕ ಟಿಮೊ ಸ್ಟ್ರಾಂಡ್ಬರ್ಗ್ ತಿಳಿಸಿದ್ದಾರೆ.