ಆ ಕಡೆ ಅರುಣಾಚಲವನ್ನು ಅತಂತ್ರಗೊಳಿಸಿದ್ದ ಬಿಜೆಪಿ ಉತ್ತರಾಖಂಡದಲ್ಲಿ ಕಮಲವನ್ನು ಅರಳಿಸುವ ಹುನ್ನಾರದಲ್ಲಿತ್ತು. ಆದರೆ ರಾಷ್ಟ್ರಪತಿ ಆಡಳಿತ, ಕೋರ್ಟ್ ವ್ಯಾಜ್ಯ, ಹಲವು ಆಪರೇಷನ್ ಗಳ ಡ್ರಾಮಗಳೆಲ್ಲವನ್ನೂ ಮೀರಿ ಹರೀಶ್ ರಾವತ್ `ಕೈ’ ಮೇಲಾಗುವಂತೆ ಮಾಡಿದ್ದಾರೆ. ಬಹುಮತಕ್ಕೆ ಬೇಕಾಗಿದ್ದ ಮೂವತ್ತೊಂದು ಸ್ಥಾನಗಳ ಪೈಕಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ 33 ಸೀಟುಗಳನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾವತ್ರನ್ನು ಹಣಿಯಲೇಬೇಕೆಂದು ನಿರ್ಧರಿಸಿದ್ದ ವಿಜಯ್ಬಹುಗುಣ ಬೆಂಬಲಿತ ಬಿಜೆಪಿಗೆ ಸಿಕ್ಕಿದ್ದು 28 ತಟಸ್ಥ ಸ್ಥಾನಗಳಷ್ಟೆ. ಚೆನ್ನಾಗಿ ಹೋಗುತ್ತಿದ್ದ ಉತ್ತರಾಖಂಡ ಸರ್ಕಾರವನ್ನು ಅತಂತ್ರಗೊಳಿಸುತ್ತೇವೆ ಎಂದೇ ಭಾವಿಸಿದ್ದ ಬಿಜೆಪಿಗೆ ನಿಜಕ್ಕೂ ಇದು ಮುಖಭಂಗದ ಸಂಗತಿ. ಐದು ರಾಜ್ಯಗಳ ಚುನಾವಣೆಯ ಈ ಹೊತ್ತಿನಲ್ಲಿ ಉತ್ತರಾಖಂಡದ ಸಮಸ್ಯೆ ಬಗೆಹರಿದಿರುವುದು ಕಾಂಗ್ರೆಸ್ ಪಾಲಿಗೆ ಉತ್ತಮ ಬೆಳವಣಿಗೆ.
ಮುಖ್ಯಮಂತ್ರಿ ಹರೀಶ್ ರಾವತ್ ಹಾಗೂ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ನಡುವೆ ಮೊದಲಿನಿಂದಲೂ ಕೋಲ್ಡ್ವಾರ್ ಇತ್ತು. ಅಸ್ತಿತ್ವದ ವಿಚಾರದಲ್ಲಿ ಎರಡೂ ನಾಯಕರು ಕಿತ್ತಾಡಿಕೊಂಡಿದ್ದು ಉತ್ತರಾಖಂಡ ರಾಜಕಾರಣದಲ್ಲಿ ಬಿರುಗಾಳಿಯೇಳಲು ಕಾರಣವಾಗಿತ್ತು. ಉತ್ತರಾಖಂಡ ಸರ್ಕಾರದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಒಂಬತ್ತು ಶಾಸಕರನ್ನು ಹರೀಶ್ ರಾವತ್ ಸರ್ಕಾರ ವಜಾಗೊಳಿಸಿತ್ತು. ಅವರೆಲ್ಲಾ ಮೊದಲೇ ಅಸಮಾಧಾನದಿಂದ ಬುಸುಗುಡುತ್ತಿದ್ದ ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರ ನೇತೃತ್ವದಲ್ಲಿ ಬಂಡಾಯವೆದ್ದಿದ್ದರು. ಸರ್ಕಾರ ಅತಂತ್ರವಾದ ಕಾರಣ ಕೇಂದ್ರ ಸರ್ಕಾರ ಉತ್ತರಾಖಂಡ ಸರ್ಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತ್ತು. ಅಲ್ಲದೇ ವಿಜಯ್ ಬಹುಗುಣ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿತ್ತು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಹರೀಶ್ ರಾವತ್ ಹೈಕೋಟ್ ಗೆ ಅರ್ಜಿ ಸಲ್ಲಿಸಿದ್ದರು. ಸತತ ನಾಲ್ಕು ದಿನ ಹರೀಶ್ ರಾವತ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೇಫ್, ಮುಖ್ಯ ನ್ಯಾಯಮೂರ್ತಿ ವಿ. ಕೆ ಬಿಸ್ಟ್ ಅವರಿದ್ದ ನ್ಯಾಯಪೀಠವು, ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತಹ ಪರಿಸ್ಥಿತಿಯಿಲ್ಲ, ಉದ್ದೇಶಪೂರ್ವಕವಾಗಿಯೇ ಅದನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿದ ಬಳಿಕ ಮತ್ತೊಬ್ಬರಿಗೆ ಸರ್ಕಾರ ರಚಿಸಲು ಹೇಳಿರುವ ಕೇಂದ್ರದ ಧೋರಣೆ ಅಚ್ಚರಿ ತರಿಸುತ್ತಿದೆ ಎಂದು ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿ ಹರೀಶ್ ರಾವತ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಸುಪ್ರಿಂ ಕೋರ್ಟ್ ರದ್ದುಗೊಳಿಸಿತ್ತು.
ಉತ್ತರಾಖಂಡದಲ್ಲಿ ನಿನ್ನೆ ಬೆಳಿಗ್ಗೆಯಿಂದ ಸರ್ಕಾರವನ್ನು ಯಾರು ರಚಿಸಲಿದ್ದಾರೆ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಸುಪ್ರಿಂ ಕೋರ್ಟ್ ಬಹುಮತ ಸಾಬೀತುಪಡಿಸುವಂತೆ ಹರೀಶ್ ರಾವತ್ಗೆ ಸೂಚಿಸಿದ್ದರಿಂದ, ಅತ್ತ ಬಿಜೆಪಿಯು ತಕ್ಕ ಸಿದ್ದತೆಯಲ್ಲಿದ್ದರಿಂದ- ಕೌತುಕಮಯ ವಾತಾವರಣ ಸೃಷ್ಟಿಯಾಗಿದ್ದು ಸುಳ್ಳಲ್ಲ. ಆದರೆ ಕಡೆಗೂ ಹರೀಶ್ ರಾವತ್ ಬಹುಮತ ಸಾಬೀತುಪಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕೃತ ಘೋಷಣೆಗೆ ಸುಪ್ರಿಂ ಕೋರ್ಟ್ ತಲುಪಿದ್ದ ಮುಚ್ಚಿದ ಲಕೋಟೆಯೂ ತೆರೆದಿದ್ದು ಕಾಂಗ್ರೆಸ್ ಅಧಿಕಾರ ಮುಂದುವರಿಸಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದ್ದ ಬಿಜೆಪಿ ಕಾಂಗ್ರೆಸ್ನ ಹಲವು ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅದಾಗಲೇ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳನ್ನು ಅತಂತ್ರಗೊಳಿಸಿ, ಆಯಾ ರಾಜ್ಯಗಳನ್ನು ಕಬ್ಜಾ ಮಾಡಿಕೊಳ್ಳುವ ಹುನ್ನಾರವನ್ನು ಶುರುಮಾಡಿತ್ತು. ಅದರ ಪ್ರಯತ್ನಕ್ಕೆ ಉತ್ತರಾಖಂಡದಲ್ಲಿ ಬಿದ್ದಿರುವುದು ಮೊದಲ ಏಟು. ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೇನಾದರೂ ಹಿನ್ನಡೆಯಾದರೇ ಜನಪ್ರಿಯ ವ್ಯಕ್ತಿಯ ಪರ್ವ ಮುಗಿದುಬಂದಂತೆ ಲೆಕ್ಕಾ..!!
ಉತ್ತರಾಖಂಡದ ಮಟ್ಟಿಗೆ ಹರೀಶ್ ರಾವತ್ ಪ್ರಬಲ ಮುಖ್ಯಮಂತ್ರಿ. ಈ ಹಿಂದೆ ಇದೇ ಹರೀಶ್ ರಾವತ್ ಅವರನ್ನು ಪಕ್ಕಕ್ಕಿಟ್ಟು ಮಾಜಿ ಮುಖ್ಯಮಂತ್ರಿ ಹೇಮಾವತಿ ನಂದನ ಬಹುಗುಣ ಅವರ ಪುತ್ರ ವಿಜಯ್ ಬಹುಗುಣ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತ್ತು. ವಿಜಯ್ ಬಹುಗುಣ ಅವರ ಸೋದರಿ ರೀಟಾ ಬಹುಗುಣ ಅಂದರೆ ಉತ್ತರಾಖಂಡದಲ್ಲಿ ಇವತ್ತಿಗೂ ಒಳ್ಳೇ ಹೆಸರಿದೆ. ಅಷ್ಟಕ್ಕೂ ಉತ್ತರಾಖಂಡದಲ್ಲಿ ಕಾಂಗ್ರೆಸ್ ಒಡೆದಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಯುವ ಮುನ್ನ ಉತ್ತರ ಪ್ರದೇಶ ಒಡೆದು ಇಬ್ಭಾಗವಾದ ನಂತರದ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸಬೇಕು.
ಇಸವಿ 2000ದಲ್ಲಿ ವಾಜಪೇಯಿ ಸರ್ಕಾರ ಉತ್ತರಾಂಚಲವನ್ನು ಸೃಷ್ಟಿಸಿತ್ತು. ಕಾಲಾಂತರದಲ್ಲಿ ಉತ್ತರಾಂಚಲ ಉತ್ತರಾಖಂಡವಾಯ್ತು. ಉತ್ತರಾಖಂಡ ಸೃಷ್ಟಿಯಾದ ಮೊದಲ ಒಂದೂವರೆ ವರ್ಷ ಅಲ್ಲಿ ಬಿಜೆಪಿ ಅಧಿಕಾರ ನಡೆಸಿತು. ಆಮೇಲೆ ಐದುವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತು. ಆಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ಐದು ವರ್ಷ ಪೂರ್ಣಪ್ರಮಾಣದ ಆಡಳಿತ ನಡೆಸಿತು. ಇದಾದ ನಂತರ 2012ರಲ್ಲಿ ನಡೆದ ಎಪ್ಪತ್ತು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ 32, ಹಾಗೂ ಬಿಜೆಪಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮಿಕ್ಕ ಏಳು ಪಕ್ಷೇತರರು ಅಥವಾ ಇನ್ನಿತರರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿ ಉತ್ತರಾಖಂಡದಲ್ಲಿ ಕೈ ಮೇಲಾಗುವಂತೆ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹರೀಶ್ ರಾವತ್ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಲು ಸಿದ್ಧತೆ ನಡೆದಿತ್ತು. ಆದರೆ ಅವರು ಪಕ್ಷದೊಳಗಿದ್ದ, ತಮಗಾಗದವರನ್ನು ಪರೋಕ್ಷವಾಗಿ ಸೋಲಿಸಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. ಹಾಗಾಗಿ ಹೈಕಮಾಂಡ್ ಉತ್ತರಾಖಂಡದ ಸಿಎಂ ಆಗಿ ವಿಜಯ್ ಬಹುಗುಣ ಅವರನ್ನು ನೇಮಿಸಿತ್ತು. ಇದರಿಂದ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ದುಪ್ಪಟ್ಟಾಯಿತು. ಸಿಟ್ಟಾಗಿದ್ದ ಹರೀಶ್ ರಾವತ್ ಅವರನ್ನು ಅವತ್ತಿನ ಮನಮೋಹನ ಸರ್ಕಾರ ಕೇಂದ್ರ ಜಲಸಂಪನ್ಮೂಲ ಸಚಿವರಾಗಿ ಆಯ್ಕೆಮಾಡಿತ್ತು.
ಹರೀಶ್ ರಾವತ್ ಅವರಿಗೆ ಒಲಿಯಬೇಕಿದ್ದ ಮುಖ್ಯಮಂತ್ರಿಪಟ್ಟವನ್ನು ವಿಜಯ್ ಬಹುಗುಣಗೆ ಕೊಟ್ಟನಂತರ ಕಾಂಗ್ರೆಸ್ ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ವಿಜಯ್ ಬಹುಗುಣ ಅತ್ಯಂತ ಅಸಮರ್ಥ ಆಡಳಿತಗಾರರಾಗಿದ್ದರು. ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಯೋಜನೆಗಳನ್ನು ಘೋಷಿಸುವುದರಲ್ಲಿ, ಅನುಷ್ಠಾನಕ್ಕೆ ತರುವುದರಲ್ಲಿ ಎಡವಿದರು. ಯಕಃಶ್ಚಿತ್ ಪ್ರಕೃತಿ ವಿಕೋಪವನ್ನು ಸಂಭಾಳಿಸಲು ಅವರಿಂದ ಆಗಲಿಲ್ಲ. ಹೀಗಾಗಿ ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಭಾವಿಸಿದ ಹೈಕಮಾಂಡ್, ಲೋಕಸಭಾ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಹರೀಶ್ ರಾವತ್ ಅವರನ್ನು ಮುಖ್ಯಮಂತ್ರಿಗಾದಿಯಲ್ಲಿ ಪ್ರತಿಷ್ಠಾಪಿಸಿತ್ತು. ಬಹುಶಃ ಇಲ್ಲಿಂದ ಶೀತಲವಾಗಿದ್ದ ಸಮರ ಬಹಿರಂಗವಾಗತೊಡಗಿತ್ತು. ಮುಖ್ಯಮಂತ್ರಿಪಟ್ಟ ಒಲಿದರೂ ಅದನ್ನು ದಕ್ಕಿಸಿಕೊಳ್ಳುವುದರಲ್ಲಿ ಹರೀಶ್ ರಾವತ್ ಎಡವಿದರು. ಲೋಕಸಭೆ ಚುನಾವಣೆಯಲ್ಲಿ ಐದೂ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಹರೀಶ್ ರಾವತ್ ತಲೆದಂಡಕ್ಕೆ ಒತ್ತಾಯಗಳು ಕೇಳಿಬಂದವು. ಒಬ್ಬ ಮುಖ್ಯಮಂತ್ರಿಯಾಗಿ ತನ್ನ ಪತ್ನಿಯನ್ನೇ ಗೆಲ್ಲಿಸಿಕೊಳ್ಳಲಾಗದ ಹರೀಶ್ ರಾವತ್ರಿಂದ ಕಾಂಗ್ರೆಸ್ಗೆ ಉಳಿಗಾಲವಿಲ್ಲ ಎಂಬ ಕೂಗು ಕೇಳಿಬಂತು. ಆದರೆ ಕಾಂಗ್ರೆಸ್ ಹೈಕಮಾಂಡ್ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಇಲ್ಲಿ ಸಿದ್ದರಾಮಯ್ಯನವರ ಮೇಲೆ ನಡೆದಂತದ್ದೇ ರಾಜಕೀಯ ಹರೀಶ್ ರಾವತ್ ಮೇಲೆ ನಡೆದರೂ, ಆನಂತರದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆಲ್ಲಿಸಿದರು. ಇದರ ಜೊತೆಜೊತೆಗೆ ತಮ್ಮ ವಿರುದ್ಧ ನಿಂತಿದ್ದ ಕಾಂಗ್ರೆಸ್ ನಾಯಕರನ್ನು ದೂರಮಾಡಿಕೊಂಡರು. ವಿಜಯ್ ಬಹುಗುಣ ರಾಜ್ಯ ಸಭೆಗೆ ಆಯ್ಕೆಯಾಗದಂತೆ ತಡೆದರು. ಇದರಿಂದ ಕೆಂಡಮಂಡಲರಾದ ವಿಜಯ್ ಬಹುಗುಣಗೆ ಚಿತಾವಣೆ ನೀಡಿ ಇಡೀ ಕಾಂಗ್ರೆಸ್ ಅನ್ನೇ ಇಬ್ಭಾಗ ಮಾಡುವ ರೂಪುರೇಶೆ ಸಿದ್ದಪಡಿಸಿದ್ದು ಅವರ ಪುತ್ರ ಸಾಕೇತ್. ಅಪ್ಪ ಸ್ಲೋ ಆದ್ರೆ ಮಗ ಸಿಕ್ಕಾಪಟ್ಟೆ ಫಾಸ್ಟ್. ಹರೀಶ್ ರಾವತ್ ಡೋಂಟ್ಕೇರ್ ಮನಃಸ್ಥಿತಿಯಿಂದ ಉತ್ತರಾಖಂಡದಲ್ಲಿ ಕಾಂಗ್ರೆಸ್ ಪರಿಸ್ಥಿತಿ ವಿಷಮಿಸಿತ್ತು. ಏನೆಲ್ಲಾ ಆಗಿ ಈಗ ಮತ್ತೆ ಉತ್ತರಾಖಂಡದಲ್ಲಿ ಹರೀಶ್ ರಾವತ್ ಕೈ ಮೇಲಾಗಿದೆ.
ಕಾಂಗ್ರೆಸ್ ನಲ್ಲಿ ಹೀಗ್ಯಾಕಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ; ಕಾಂಗ್ರೆಸ್ನ ದುರ್ಬಲ ಹೈಕಮಾಂಡ್. ಮೋದಿ ವರ್ಚಸ್ಸಿಗೆ ಯಕಃಶ್ಚಿತ್ ಪೈಪೋಟಿ ನೀಡಲು ಯುಪಿಎಯಿಂದ ಆಗುತ್ತಿಲ್ಲ. ಆ ಕಾರಣಕ್ಕೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಅತಂತ್ರ ರಾಜಕಾರಣ ಸೃಷ್ಟಿಯಾಗುತ್ತಿದೆ. ಇವೆಲ್ಲವೂ ಕಾಂಗ್ರೆಸ್ ಮುಕ್ತ ಭಾರತದ ಲಕ್ಷಣಗಳು ಎಂದರೇ ಸುಳ್ಳಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಹದಿನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಇದಾಗಿ ಮೂರು ವರ್ಷಕ್ಕೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರುವುದು ಎಂಟು ರಾಜ್ಯಗಳಲ್ಲಿ ಮಾತ್ರ. ಇದೀಗ ಅಸ್ಸಾಂ, ಕೇರಳದಲ್ಲೂ ಚುನಾವಣೆ ದಿನಾಂಕ ನಿಗಧಿಯಾಗಿದೆ. ಅಲ್ಲೂ ಕಾಂಗ್ರೆಸ್ ಅವಸಾನವಾದರೇ ಆ ಸಂಖ್ಯೆ ಐದಕ್ಕಿಳಿಯುತ್ತದೆ. ಅತ್ತ ಅರುಣಾಚಲದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಅತಂತ್ರವಾಗಿ ಅಲ್ಲೀಗ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಮಣಿಪುರದಲ್ಲೂ ಶಾಸಕರು ಬಂಡೆದ್ದಿದ್ದಾರೆ. ಇಲ್ಲೆಲ್ಲಾ ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೇ ದೇಶದಲ್ಲಿ ಕರ್ನಾಟಕ, ಮಿಝೋರಾಂ, ಮೇಘಾಲಯ, ಹಿಮಾಚಲ ಪ್ರದೇಶಗಳಲ್ಲಷ್ಟೆ ಕಾಂಗ್ರೆಸ್ ಉಳಿದುಕೊಳ್ಳಲಿದೆ. ಪರಿಸ್ಥಿತಿ ಹೀಗೆ ಮುಂದುವರಿದರೇ ದೇಶದಲ್ಲಿ ಕಾಂಗ್ರೆಸ್ ವೈಟ್ವಾಶ್ ಆದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಹೈಕಮಾಂಡ್ ಸರಿಯಾದ ರೀತಿಯಲ್ಲಿ ಮುತುವರ್ಜಿವಹಿಸಿದರೇ ಉಳಿದ ರಾಜ್ಯಗಳಲ್ಲಿ ಐಸಿಯೂನಲ್ಲಿರುವ ಕಾಂಗ್ರೆಸ್ ಸರ್ಕಾರದ ಪ್ರಾಣ ಉಳಿಸಬಹುದು. ರಾಜಕೀಯ ಲೆಕ್ಕಾಚಾರ, ಆಶ್ವಾಸನೆ, ಭರವಸೆ, ಕಣ್ಣೊರೆಸುವ ತಂತ್ರಗಾರಿಕೆ- ಇತರೆ ಪ್ರಕಾರಗಳಲ್ಲಿ ಯಶಸ್ವಿಯಾದರೇ ಮಾತ್ರ ಉತ್ತರಾಖಂಡದಲ್ಲೂ ಕಾಂಗ್ರೆಸ್ ಜೀವಂತವಾಗಿರುತ್ತದೆ.
- ರಾ ಚಿಂತನ್
POPULAR STORIES :
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?