ಈಗ ನಾನು ಹೇಳೋ ಎರಡು ಮೂರು ಪದಗಳು ಕೇಳಿದ ಕೂಡಲೇ ನಿಮೆಗ ನೆನಪಾಗೋ ವ್ಯಕ್ತಿ ಯಾರು ಅಂತ ಹೇಳಿ…ಮೊದಲನೇ ಪದ, ಕನ್ನಡ ಪತ್ರಿಕೋದ್ಯಮ. ಆಯ್ತಾ..? ಎರಡನೇದು, ವಿಜಯ ಕರ್ನಾಟಕ ಆಯ್ತಾ..? ಮೂರನೇದು, ಕನ್ನಡ ಪ್ರಭ..! ಈ ಮೂರೂ ಪದಗಳು ಕಿವಿಗೆ ಬಿದ್ದ ಕೂಡಲೇ ನಿಮಗೆ ಯಾರಾದರೊಬ್ಬರ ಮುಖ ನಿಮಗೆ ನೆನಪಾದ್ರೆ ಅವರೇ ವಿಶ್ವೇಶ್ವರ ಭಟ್. ಕನ್ನಡ ಪತ್ರಿಕೋದ್ಯಮದ ಪರಮ ಪತ್ರಕರ್ತ.. ವಿಶ್ವೇಶ್ವರ್ ಭಟ್.. !
ಇವತ್ತು ವಿಜಯವಾಣಿ ಹೆಸರು ಕೇಳಿದ ಕೂಡಲೇ ವಿಜಯ ಸಂಕೇಶ್ವರ್ ಹೆಸರು ನೆನಪಾಗಬಹುದು. ಆದ್ರೆ ಅವತ್ತು `ವಿಜಯ ಕರ್ನಾಟಕ’ ಅಂದ್ರೆ ಮೊದಲು ಕಣ್ಣೆದುರು ಬರ್ತಾ ಇದ್ದಿದ್ದು ವಿಶ್ವೇಶ್ವರ ಭಟ್ಟರೇ..! ದಿನಪತ್ರಕೆಗಳನ್ನು ಓದಿಸೋ ಚಟ ಹತ್ತಿಸೋದಿದೆಯಲ್ಲ, ಅದು ಅಷ್ಟು ಸುಲಭದ ಕೆಲಸವಲ್ಲ..! ಆದ್ರೆ ಕನ್ನಡದ ಓದುಗ ಬೆಳಗ್ಗೆ ಪೇಪರ್ ಬರೋದು ತಡ ಆಯ್ತು ಅಂದ್ರೆ ಚಡಪಡಿಸೋ ಹಾಗೆ ಮಾಡಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲಬೇಕು..!
ಅದು ಪ್ರಜಾವಾಣಿಯ ಕಾಲ, ಕನ್ನಡ ದಿನಪತ್ರಿಕೆಗೆ ಸಮಾನಾರ್ಥಕ ಪದ ಎಂಬಂತೆ ಬೆಳೆದಿತ್ತು ಪ್ರಜಾವಾಣಿ..! ಆ ಟೈಮಲ್ಲಿ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡ್ತೀನಿ ಅಂತ ಬಂದ ವಿಜಯ ಸಂಕೇಶ್ವರರಿಗೆ ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾಗಿ ಸಾಥ್ ಕೊಟ್ಟಿದ್ದು ಇದೇ ವಿಶ್ವೇಶ್ವರ ಭಟ್ಟರು. ಅದು ಅಂತಿಂಥ ಸಾಥ್ ಅಲ್ಲ, ನೋಡನೋಡ್ತಿದ್ದ ಹಾಗೇ ವಿಜಯ ಕನರ್ಾಟಕ ದೇಶದ ನಂಬರ್ ವನ್ ಕನ್ನಡ ದಿನಪತ್ರಿಕೆಯಾಗಿಬಿಡ್ತು. ಕೋಳಿ ಕೂಗಿ, ಅಲಾರಾಂ ಶಬ್ದಕ್ಕೆ ನಿದ್ರೆಯಿಂದ ಏಳ್ತಾ ಇದ್ದ ಜನ, ಪೇಪರ್ ಹುಡುಗನ `ಪೇಪರ್’ ಅನ್ನೋ ಸೌಂಡಿಗೆ ಏಳೋಕೆ ಶುರು ಮಾಡಿದ್ರು.. ! ಸೂರ್ಯ ಹುಟ್ಟೋಕೆ ಮುಂಚೆ ರಾಜ್ಯದ ಮೂಲೆಮೂಲೆಯಲ್ಲಿ `ವಿಜಯ ಕರ್ನಾಟಕ’..! ಸಂಕೇಶ್ವರರಿಗೆ ಏನು ಬೇಕಿತ್ತೋ, ಅದಕ್ಕಿಂತ ಹೆಚ್ಚೇ ಕೊಟ್ಟು ಕನ್ನಡಿಗರ ಮನೆ ಮನ ತಲುಪಿಟ್ಟರು ವಿಶ್ವೇಶ್ವರ ಭಟ್ಟರು..!
ನನಗಿನ್ನೂ ನೆನಪಿದೆ, ನಾನಾಗ ಇದೇ ವಿಜಯ ಕರ್ನಾಟಕ ಪೇಪರ್ ಹಾಕೋಕೆ ಮನೆಮನೆಗೆ ಹೋಗ್ತಿದ್ದೆ. ವಾಪಸ್ ಬಂದಮೇಲೆ ಸ್ಕೂಲಿಗೆ ಹೋಗೋದ್ರೊಳಗೆ ಪೇಪರ್ ಓದಕ್ಕೆ ಆಗಲ್ಲ ಅಂತ, `ಸೈಕಲ್ ಮೇಲೆ ಕೂತು ಸರ್ಕಸ್ ಮಾಡ್ಕೊಂಡು` ವಿಜಯ ಕರ್ನಾಟಕ’ ಓದ್ತಾ ಬಿದ್ದು ಎಡಗೈಗೆ ನಾಲ್ಕು ಹೊಲಿಗೆ ಹಾಕಿಸಿಕೊಂಡಿದ್ದೆ..! ನಮ್ಮ ಹೋಟೆಲ್ ನಲ್ಲಿ ವಿಜಯ ಕರ್ನಾಟಕದ ಅಷ್ಟೂ ಪುಟಗಳೂ ಒಂದೊಂದು ಟೇಬಲ್ ನಲ್ಲಿ ಒಬ್ಬೊಬ್ಬರ ಕೈಲಿರ್ತಿತ್ತು..! ಆ ಲೆವೆಲ್ ಗೆ ಪೇಪರ್ ಓದಿಸೋ ಚಟ ಹತ್ತಿಸೋದು ಅಂದ್ರೆ ತಮಾಷೇನಾ..? ಇವತ್ತಿಗೂ ಅವತ್ತಿನ ವಿಜಯ ಕರ್ನಾಟಕದ ಒಂದೊಂದು ತಲೆಬರಹಗಳು ನೆನಪಿವೆ..! ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆ ಸುರೀತಿತ್ತು. ಒಂದು ನಿಮಿಷವೂ ಮಳೆ ನಿಲ್ತಾನೇ ಇರಲಿಲ್ಲ..! ಮಾರನೇ ದಿನ ಎಲ್ಲಾ ಪತ್ರಿಕೆಗಳಲ್ಲೂ `ರಾಜ್ಯಾದ್ಯಂತ ಭಾರೀ ಮಳೆ’ , `ಮಳೆಗೆ ತತ್ತರಿಸಿದ ಕರ್ನಾಟಕ’ ಅಂತ ಹೆಡ್ ಲೈನ್ ಕೊಟ್ರೆ, ವಿಜಯ ಕರ್ನಾಟಕದ ಹೆಡ್ ಲೈನ್ ಏನು ಗೊತ್ತಾ..? ` ಮಳೆ..ಮಳೆ..ಮಳೆ..ಮಳೆ…!’ ಇನ್ನೇನು ಬೇಕು ಸಿಕ್ಕಾಪಟ್ಟೆ ಮಳೆ ಅಂತ ಹೇಳೋಕೆ.. ! ತಲೆಬರಹಗಳಲ್ಲಿ ಅವರಷ್ಟು ಆಟವಾಡೋ ಪತ್ರಕರ್ತರನ್ನು ನಾನಂತೂ ನೋಡಿಲ್ಲ..! ಅವರ ಪೆನ್ ಯಾವತ್ತು ಫೆನ್ ಟಾಸ್ಟಿಕ್…!
ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ ಎಂಟ್ರಿ ಕೊಟ್ಟ ಭಟ್ಟರು ಅಲ್ಲೂ ತಮ್ಮ ಅಕ್ಷರ ತಾಕತ್ ತೋರಿಸಿದ್ರು. ನೋಡನೋಡ್ತಿದ್ದ ಹಾಗೇ ಕನ್ನಡ ಪ್ರಭದ ಸರ್ಕ್ಯುಲೇಶನ್ 2 ಲಕ್ಷದ ಗಡಿ ದಾಟಿತ್ತು..! ಸುವರ್ಣ ನ್ಯೂಸ್ ಟಿ.ಆರ್.ಪಿ ಸಹ ಹಂತಹಂತವಾಗಿ ಮೇಲೇರ್ತು. ಟಿವಿಯಾಗ್ಲಿ, ಪೇಪರ್ ಆಗ್ಲಿ ಭಟ್ಟರು ಸೈ ಅನ್ನೋದು ನಿರೂಪಿಸಿದ್ರು..! ಅವರು ಕನ್ನಡಪ್ರಭದಿಂದ ಹೊರಬಂದ ದಿನ ಟ್ವಿಟರ್ ನಲ್ಲಿ ವಿ,ಭಟ್ ಅನ್ನೋ ಆ್ಯಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತೆ ಅಂದ್ರೆ ಅವರು ಅದೆಷ್ಟು ಜನಪ್ರಿಯ ಅಂತ ಲೆಕ್ಕಹಾಕಿ..!
ಭಟ್ಟರ ಸ್ಪೆಷಾಲಿಟಿಗಳಲ್ಲೊಂದು ಅವರು ಅವರ ಜೊತೆಗಿರುವವರನ್ನೂ ಬೆಳೆಸೋದು..! ಎಲ್ಲ ಕ್ರೆಡಿಟ್ ಗಳೂ ನಂಗೇ ಸೇರಬೇಕು ಅಂತ ಭಟ್ಟರು ಯೋಚನೆ ಮಾಡಿದ್ದಿದ್ರೆ ಇವತ್ತು ಪ್ರತಾಪ್ ಸಿಂಹ, ಕೆ.ವಿ.ಪ್ರಭಾಕರ್, ರಾಧಾಕೃಷ್ಣ ಭಡ್ತಿ, ವಿನಾಯಕ ಭಟ್ ಮೂರೂರು, ಷಡಕ್ಷರಿ ಎಂಬ ಹೆಸರುಗಳು ಪತ್ರಿಕೋದ್ಯಮದಲ್ಲಿ ಇಷ್ಟು ಪ್ರಕಾಶಸಿಸ್ತಾ ಇರಲಿಲ್ಲವೇನೋ…! ಹೇಳೋಕೆ ಇನ್ನೂ ಹೆಸರುಗಳಿವೆ, ಆದ್ರೆ ಅವರೆಲ್ಲಾ ಒಂದಿಲ್ಲೊಂದು ಸಂಸ್ಥೆಯಲ್ಲಿ ಕೆಲಸ ಮಾಡ್ತಿರೋದ್ರಿಂದ ಇಲ್ಲಿ ಹೇಳೋದು ಸರಿಯಲ್ಲ..!
ನಾನು ಕೇಳಿದ ಹಾಗೆ ಅವರ ಕ್ಯಾಬಿನ್ ಯಾವತ್ತಿಗೂ ತೆರೆದೇ ಇರುತ್ತೆ. ಯಾರೇ ಬಂದ್ರೂ ಕೂರಿಸಿ ತಾಳ್ಮೆಯಿಂದ ಮಾತಾಡಿಸಿ ಕಳಿಸ್ತಾರೆ. ಯಾವಾಗ್ಲೂ ಏನಾದ್ರೂ ಓದ್ತಾನೇ ಇರ್ತಾರೆ..! ಎಲ್ಲರೂ ದೇಶ ಸುತ್ತು ಅಥವಾ ಕೋಶ ಓದು ಅಂದ್ರೆ, ಇವರು ಕೋಶ ಓದ್ಕೊಂಡು ದೇಶ ವಿದೇಶ ಸುತ್ತುತ್ತಾ ಇರ್ತಾರೆ..! ಅವರ ಜೊತೆಯಲ್ಲಿ ಕೆಲಸ ಮಾಡಿದವರೆಲ್ಲಾ ಅವರ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ ಉದಾಹರಣೆ ಇಲ್ಲ..! ಸಮಯ ನ್ಯೂಸ್ ನ ಬಿಗ್ ತ್ರಿ ಜಯಪ್ರಕಾಶ್ ಶೆಟ್ಟರು ಯಾವಾಗ್ಲೂ ಹೇಳೋ ಮಾತು ನಂಗೆ ನೆನಪಾಗ್ತಿದೆ. ` ಕೀರ್ತಿ, ಏನೇ ಹೇಳು ಮಾರಾಯ, ಭಟ್ ಸರ್ ಮಾತ್ರ ಸೂಪರ್ ಮನುಷ್ಯ.. ಅವರ ಜೊತೆ ಕೆಲಸ ಮಾಡೋಕೇ ಖುಷಿಯಾಗುತ್ತೆ. ಹೀ ಈಸ್ ಜಸ್ಟ್ ಫೆಂಟಾಸ್ಟಿಕ್..!’
ಒಬ್ಬ ರಿಪೋರ್ಟರ್, ಕಾಪಿ ಎಡಿಟರ್ ಆದ್ರೇನೇ ಪ್ರಪಂಚ ತಲೆಮೇಲೆ ಬಿದ್ದ ಹಾಗಾಡೋ ಪತ್ರಕರ್ತರ ನಡುವೆ, ಪ್ರಧಾನ ಸಂಪಾದಕರ ಹುದ್ದೆಯಲ್ಲಿದ್ದೂ, ಆ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೆಚುಕಮ್ಮಿ 50 ಪುಸ್ತಕ ಬರೆಯೋದು ಅಂದ್ರೆ ತಮಾಷೇನಾ..? ನೂರೆಂಟು ಮಾತು, ಸುದ್ದಿಮನೆಕಥೆ, ವಕ್ರತುಂಡೋಕ್ತಿ, ತಲೆಬರಹ, ಸ್ಫೂತರ್ಿಸೆಲೆ ಹೀಗೆ ಅದೆಷ್ಟೋ…! ಪತ್ರಿಕೆಯಲ್ಲಿ ಸಣ್ಣಪುಟ್ಟ ತಪ್ಪುಗಳು ಆಗ್ತಾನೇ ಇರುತ್ತೆ, ಆದ್ರೆ ಆ ತಪ್ಪು ಒಪ್ಪಿಕೊಂಡು ಸರಿಪಡಿಸಿಕೊಳ್ತೀವಿ ಅಂತ ಹೇಳೋ ` ತಪ್ಪಾಯ್ತು, ತಿದ್ಕೋತೀವಿ’ ಯೋಚನೆ ಭಟ್ಟರಿಗೆ ಮಾತ್ರ ಬರೋಕೆ ಸಾಧ್ಯ..! ಅದಕ್ಕೇ ಹೇಳಿದ್ದು, ದಿಸ್ ಇದು ಅನ್ನಬಹುದು, ದಟ್ ಅದು ಅನ್ನಬಹುದು.. ಆದ್ರೆ ಒಬ್ಬರು ವಿಶ್ವೇಶ್ವರ `ಭಟ್’ ಆದರೆ ಇಷ್ಟೆಲ್ಲಾ ಮಾಡಬಹುದು..!
ಉತ್ತರಕನ್ನಡದ ಒಂದು ಸಣ್ಣ ಊರಿನಲ್ಲಿ ಹುಟ್ಟಿ, ಚೆನ್ನಾಗಿ ಓದಿ, ಗೋಲ್ಡ್ ಮೆಡಲ್ ತಗೊಂಡು, ಲೆಕ್ಚರರ್ ಆಗಿ, ಮಂತ್ರಿಗೆ ಸಲಹೆಗಾರನಾಗಿ, ಉಪಸಂಪಾದಕನಾಗಿದ್ದ ಪತ್ರಿಕೆಗೇ ಮುಂದೊಂದು ದಿನ ಪ್ರಧಾನ ಸಂಪಾದಕನಾಗಿ ಸೇರಿ ಎತ್ತರೆತ್ತರಕ್ಕೆ ಏರ್ತಾ, ಯುವ ಪತ್ರಕರ್ತರಿಗೆ ಆದರ್ಶವಾಗಿರೋ ವಿಶ್ವೇಶ್ವರ ಭಟ್ಟರಿಗೆ ಹುಟ್ಟುಹಬ್ಬದ ಶುಭಾಶಯ..!
-ಕೀರ್ತಿ ಶಂಕರಘಟ್ಟ