ಆ ಪ್ರೀತಿಯನ್ನು ಹೇಗೆ ಸಾಯಿಸಿಬಿಟ್ರು ಗೊತ್ತಾ..? ರಿಯಲ್ ಲವ್ ಸ್ಟೋರಿ..!

1
97

ಅವಳು ಬ್ರಾಹ್ಮಣರ ಮನೆ ಹುಡುಗಿ ಅರ್ಚನಾ, ಮುದ್ದು ಮುದ್ದಾಗಿ ಎಲ್ಲರ ಜೊತೆ ಮಾತಾಡ್ಕೊಂಡು ಓಡಾಡ್ತಿದ್ರೆ ನೋಡಿದವರ ದೃಷ್ಟಿ ಖಂಡಿತ ತಾಗ್ತಿತ್ತು..! ಇಡೀ ಕಾಲೇಜಿಗೇ ಅವಳೊಂತರಾ ಚೆಲುವಾಂತ ರಾಜಕುಮಾರಿ. ಅವನ ಕಣ್ಣಿಗೂ ಬಿದ್ದೇ ಬಿಟ್ಲು, ಅವನೋ ನೋಡಿದವನೇ ಸುಸ್ತು..! ಇವಳೇ ನನ್ನ ಹೆಂಡತಿ ಅಂತ ಡಿಸೈಡ್ ಮಾಡ್ಬಿಟ್ಟ..! ಕಣ್ ಕಣ್ಣ ಸಲಿಗೆ ಶುರುವಾಯ್ತು.. ಅಂದಹಾಗೆ ಅವನು ಮುಸ್ಲಿಮರ ಬೀದಿಯ ಹುಡುಗ ಶಾಹಿದ್..! ಒಂದೇ ಊರು, ಒಂದೇ ಕಾಲೇಜು, ಒಂದೇ ಕ್ಲಾಸು, ಆದ್ರೆ ಜಾತಿ ಬೇರೆ ಬೇರೆ.. ಪ್ರೀತಿಗೆ ಜಾತಿ ಎಲ್ಲಿದೆ..? ಶುರುವಾಯ್ತು ಶಾಹಿದ್- ಅರ್ಚನಾ ಪ್ರೇಮ್ ಕಹಾನಿ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅದು ಬಳ್ಳಾರಿ ಜಿಲ್ಲೆಯ ಒಂದು ಸಣ್ಣ ಊರು. ಹಿಂದೂ ಮುಸ್ಲಿಮರು ಅಣ್ಣ-ತಮ್ಮ, ಅಕ್ಕ-ತಂಗಿಯರ ತರ ಇರೋ ಊರದು. ಇವರಿಬ್ಬರ ಲವ್ ಸ್ಟೋರಿ ಆರಂಭವಾಗೋದು ಇದೇ ಊರಲ್ಲಿ.. ಕ್ಲಾಸ್ ರೂಮಲ್ಲಿ, ಲ್ಯಾಬ್ ನಲ್ಲಿ, ಲೈಬ್ರರಿಯಲ್ಲಿ, ಕಾಲೇಜು ಪಾರ್ಕಲ್ಲಿ, ಬಸ್ ಸ್ಟ್ಯಾಂಡಲ್ಲಿ, ಹೀಗೆ ಲವ್ ಈಸ್ ಎವರಿವೇರ್ ಅಂತ ಖುಷಿಖುಷಿಯಾಗಿದ್ರು ಅವರಿಬ್ಬರು..! ಕಾಲೇಜು ದಿನಗಳು ಮುಗೀತು, ಸೈನ್ಸ್ ಓದ್ತಾ ಇದ್ದ ಶಾಹಿದ್ ಗೆ ಇಂಜಿನಿಯರ್ ಆಗೋ ಆಸೆ. ಆದ್ರೆ ಅದಕ್ಕೆ 4 ವರ್ಷ ಬೇಕು. ಅಷ್ಟರೊಳಗೆ ಅರ್ಚನಾಗೆ ಮದುವೆ ಮಾಡಿದ್ರೆ ಕಷ್ಟ ಅಂತ ಇಂಜಿನಿಯರಿಂಗ್ ಆಸೆ ಬಿಟ್ಟು ಡಿ.ಎಡ್ ಮಾಡ್ದ..! ಡಿ.ಎಡ್ ಮುಗೀತಿದ್ದ ಹಾಗೇ ಪಿಯುಸಿ ಮೇಲೆ ಅವನಿಗೆ ಪೊಲೀಸ್ ಕೆಲಸವೂ ಸಿಕ್ತು.. ! ಅವಳೂ ಬೇರೆ ಕಡೆ ಡಿ.ಎಡ್ ಮುಗಿಸಿ ಮನೆಗೆ ವಾಪಸ್ ಬಂದ್ಲು..! ಶಾಹಿದ್ ಪೊಲೀಸ್ ಟ್ರೈನಿಂಗ್ ಹೊರಡೋಕೆ ಮುಂಚೆ ಪಕ್ಕದ ಊರಿನ ಗುಡ್ಡದ ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿ, `ನಂಗೆ ತಾಳಿ ಕಟ್ಟು’ ಅಂತ ಅರಿಶಿನ ಕೊಂಬು ಕಟ್ಟಿಸ್ಕೊಂಡು ಬರ್ತಾಳೆ ಅರ್ಚನಾ.. ! ಅದಾದ ಮೇಲೆ ಶಾಹಿದ್ ಟ್ರೈನಿಂಗ್ ಪಿರಿಯಡ್ ನಲ್ಲಿದ್ದ. ಅವಳು ಒಂದು ದಿನ ಫೋನ್ ಮಾಡಿದ್ಲು.. `ಲೋ ಶಾಹಿದ್, ನೀನು ಪೊಲೀಸ್ ಆದ್ರೆ ಮನೆಗೆ ತುಂಬಾ ಲೇಟಾಗಿ ಬರ್ತೀಯ, ನಂಗೆ ಮದುವೆಯಾದ ಮೇಲೆ ರಾತ್ರಿ ಒಬ್ಬಳೇ ಮನೇಲಿರೋಕೆ ಭಯ ಆಗುತ್ತೆ. ಆ ಪೊಲೀಸ್ ಕೆಲಸ ಬಿಟ್ಟುಬಿಡು’ ಅಂದ್ಲು.. ! ಅಷ್ಟೆ.. ಮರು ಮಾತಾಡದೇ ಓಕೆ ಹೇಳಿ ಕೈಯಲ್ಲಿದ್ದ ಪೊಲೀಸ್ ಕೆಲಸ ಬಿಟ್ಟು ಬಂದೇ ಬಿಟ್ಟ ಶಾಹಿದ್..!
ವಾಪಸ್ ಬಂದು ಬಳ್ಳಾರಿಯಲ್ಲಿ ಡಿ.ಎಡ್ ಆಧಾರದ ಮೇಲೆ ಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರ್ಕೊಂಡ. ಈ ಟೈಮಲ್ಲಿ ಅರ್ಚನಾ ಮನೆಯಲ್ಲಿ ಇವರಿಬ್ಬರ ಪ್ರೇಮ ಪುರಾಣ ಗೊತ್ತಾಯ್ತು..! ಯಾವಾಗ ಶಾಹಿದ್ -ಅರ್ಚನಾ ಲವ್ ಮಾಡ್ತಿದಾರೆ ಅಂತ ಗೊತ್ತಾಯ್ತೊ, ಅವತ್ತಿಂದ ಅರ್ಚನಾ ಎಲ್ಲಿದ್ದಾಳೆ ಅಂತಾನೆ ಗೊತ್ತಾಗಲ್ಲ..! ಎಲ್ಲೇ ಹುಡುಕಿದ್ರು ಅರ್ಚನಾ ಇಲ್ಲ..! ಅವಳಪ್ಪನಿಗೆ ವಿಚಾರಿಸಿದ್ರೆ ಗೊತ್ತಿಲ್ಲ ಅನ್ನೋ ಸಿದ್ಧ ಉತ್ತರ..! ಶಾಹಿದ್ ತನ್ನ ಸ್ನೇಹಿತರನ್ನು ಬಿಟ್ಟು ಬೇಹುಗಾರಿಕೆ ಮಾಡಿದ್ರೂ ನೋ ಯೂಸ್..! ಅರ್ಚನಾ ಇಲ್ಲ, ಇಲ್ಲ, ಇಲ್ಲ.. !
ಶಾಹಿದ್ ಹುಚ್ಚನಾಗಿಹೋಗ್ತಾನೆ.. ಊಟ ತಿಂಡಿ ಬಿಟ್ಟು ಅವಳನ್ನ ಹುಡುಕ್ತಾನೆ.. ! ಅವರಪ್ಪನ್ನ ಕೈಕಾಲು ಹಿಡೀತಾನೆ.. ಆದ್ರೆ ಎಲ್ಲೂ ಅರ್ಚನಾ ಸುಳಿವು ಸಿಗೋದೇ ಇಲ್ಲ.. ಆದ್ರೆ ಅವತ್ತು ರಾತ್ರಿ ಮರೆಯಲ್ಲಿ ನಿಂತು ಅವರಪ್ಪನ ಹಿಂದೆ ಬೀಳ್ತಾನೆ.. ರಾತ್ರಿ 12 ಗಂಟೆಗೆ ಅವರಪ್ಪ ಮನೆಯಿಂದ ಹೊರಡ್ತಾನೆ. ಅವರಿಗೆ ಗೊತ್ತಾಗದ ಹಾಗೆ ಶಾಹಿದ್, ಅವನ ಸ್ನೇಹಿತನ ಜೊತೆ ಫಾಲೋ ಮಾಡ್ತಾನೆ. ನಾಲ್ಕೈದು ಬೀದಿ ದಾಟಿದ ಮೇಲೆ ಬೀದಿದೀಪವೂ ಇಲ್ಲದ ಬೀದಿಯ ಕೊನೆಯ ಮನೆಗೆ ಅವರಪ್ಪ ಹೋಗ್ತಾನೆ.. ಅವರಪ್ಪ ಬಂದು ಹೋಗುವ ತನಕ ಕಾದು ಕೂತು, ಅವರು ಹೋದ ತಕ್ಷಣ ಆ ಮನೆಯ ಕಿಟಕಿಯಲ್ಲಿ ನೋಡಿದ್ರೆ ಅವಳು ಕಣ್ಣೀರು ಹಾಕ್ಕೊಂಡು ಕೂತಿದ್ದಾಳೆ.. ಅವಳ ಕೈಗೆ ಹಗ್ಗ ಬಿಗಿದಿಟ್ಟಿದ್ದಾರೆ.. ಅದರ ಇನ್ನೊಂದು ತುದಿ ಅರ್ಚನಾಳ ಅಮ್ಮನ ಕೈಗೆ ಕಟ್ಟಿದ್ದಾರೆ.. `ನನ್ನ ಬಿಡಮ್ಮ, ನಾನ್ ಶಾಹಿದ್ ಜೊತೆ ಚೆನ್ನಾಗಿರ್ತೀನಿ ಅಂತ ಗೋಗರೀತಾ ಇರೋ ಅರ್ಚನಾನ ನೋಡಿ ಶಾಹಿದ್ ಕರುಳು ಕಿತ್ತು ಬರುತ್ತೆ..! ಆದ್ರೆ ಏನೂ ಮಾಡೋ ಪರಿಸ್ಥಿತಿಯಲ್ಲಿರೋದಿಲ್ಲ ಅವನು. ಆದ್ರೆ ಅವಳು ಜೀವಂತವಾಗಿದ್ದಾಳೆ ಅಂತ ಗೊತ್ತಾಗಿ ಸಣ್ಣ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಡ್ತಾನೆ.. ! ಈ ಕಡೆ ಅರ್ಚನಾ ಊಟ ನೀರು ಬಿಟ್ಟು ಹಠ ಶುರು ಮಾಡ್ತಾಳೆ. ವಿಧಿ ಇಲ್ಲದೇ ಅವಳಪ್ಪನೇ ಅವರ ಮೊಬೈಲ್ ನಿಂದ ಕಾಲ್ ಮಾಡಿಸಿ ಅವನ ಜೊತೆ ಮಾತಾಡಿಸ್ತಾರೆ..` ಊಟ ಮಾಡೋಕ್ ಹೇಳಪ್ಪ, ನೀರೂ ಕುಡ್ದಿಲ್ಲ ನನ್ನ ಮಗಳು’ ಅಂತ ಗೋಗರೆದು, `ನೀನು ಬ್ರಾಹ್ಮಣನಾಗಿದ್ರೆ ಈಗ್ಲೇ ಮದುವೆ ಮಾಡಿಸಿಬಿಡ್ತಿದ್ದೆ, ನಿಂಗೆ ನನ್ನ ಮಗಳನ್ನು ಕೊಟ್ಟು ನಾವು ಈ ಊರಲ್ಲಿ ತಲೆ ಎತ್ತಿಕೊಂಡು ತಿರುಗೋಕಾಗಲ್ಲ.. ಪ್ಲೀಸ್ ನನ್ನ ಮಗಳನ್ನು ಮರೆತುಬಿಡು’ ಅಂತ ಬೇಡ್ತಾರೆ.. ಆದ್ರೆ ಅಷ್ಟು ಪ್ರೀತಿಸೋ ಹುಡುಗೀನ ಶಾಹಿದ್ ಬಿಟ್ಟುಬಿಡೋ ಯೋಚನೇನೂ ಮಾಡಲ್ಲ..!
ಶಾಹಿದ್ ಊರ ಮುಖಂಡರನ್ನೆಲ್ಲಾ ಕರೆಸಿ ಪಂಚಾಯ್ತಿ ಮಾಡಿಸ್ತಾನೆ.. ಹಿಂದೂ ಮುಸ್ಲಿಂ ಮುಖಂಡರ ಎದುರು ಜೋರುಜೋರು ಚರ್ಚೆ ನಡೆಯುತ್ತೆ.. ಅವಳು ಎಲ್ಲರ ಎದುರಲ್ಲೇ ಕೂಗಿ ಹೇಳ್ತಾಳೆ..` ನಂಗೆ ಶಾಹಿದ್ ಬೇಕು.. ನಾನು ಮದ್ವೆ ಅಂತಾದ್ರೆ ಅವನನ್ನೇ’ ಅಂತ..! ಅಲ್ಲೇ ಅವರಪ್ಪ ಅವಳ ಕೆನ್ನೆಗೆ ಬಾರಿಸಿ, `ನನ್ನ ಮಗಳು ನನ್ನಿಷ್ಟ’ ಅಂತ ಹೇಳಿ ಎಳೆದುಕೊಂಡು ಹೋಗ್ತಾರೆ..! `ಊರ ಮುಖಂಡರಿಗೂ ಏನು ಮಾಡ್ಬೇಕು ಅಂತ ಗೊತ್ತಾಗದೇ ಕೈಚೆಲ್ಲಿ ಬಿಡ್ತಾರೆ..! ಈ ಕಡೆ ಶಾಹಿದ್ ಅಪ್ಪ ಅಮ್ಮನಿಗೆ ಮಗ ಏನಾಗಿಬಿಡ್ತಾನೋ ಅನ್ನೋ ಚಿಂತೆ ಶುರುವಾಗುತ್ತೆ.. ಶಾಹಿದ್ ಅವಳ ಮನೆಯ ಎದುರಿಗೆ ತನ್ನ ರಾತ್ರಿಗಳನ್ನು ಕಳೆಯೋಕೆ ಶುರು ಮಾಡ್ತಾನೆ…! ಅವಳು ಮನೆಯ ಒಳಗಿಂಯ ಶಾಹಿದ್ ಶಾಹಿದ್ ಅಂತ ಕೂಗ್ತಾ ಕಣ್ಣೀರಿಟ್ರೆ, ಈ ಕಡೆ ಶಾಹಿದ್ ಗೆ ಅಚ್ಚು, ಅಚ್ಚು ಅಂತ ಬಿಕ್ಕಿಬಿಕ್ಕಿ ಅಳೋದು ಬಿಟ್ಟು ಬೇರೆ ದಾರಿಯೇ ತೋಚೋದಿಲ್ಲ.. !
ಹೀಗೆ ಸ್ವಲ್ಪ ದಿನ ಕಳೆಯುತ್ತೆ.. ಆದ್ರೆ ಅರ್ಚನಾಳ ಧ್ವನಿ ಶಾಹಿದ್ ಕಿವಿಗೆ ಬೀಳೋದೇ ಇಲ್ಲ..! ಇವನು ಅಚ್ಚು ಅಚ್ಚು ಅಂತ ಎಷ್ಟೇ ಕೂಗಿದ್ರೂ ಅವಳ ಕಡೆಯಿಂದ ಯಾವ ಉತ್ತರವೂ ಬರೋದಿಲ್ಲ.. ! ಶಾಹಿದ್ ಗೆ ಭಯ ಶುರುವಾಗುತ್ತೆ. ಇನ್ನು ಸುಮ್ಮನಿದ್ರೆ ಆಗಲ್ಲ ಅಂತ ಡಿಸೈಡ್ ಮಾಡ್ಕೊಂಡು, ಅವನ ಸ್ನೇಹಿತರ ಸಹಾಯದಿಂದ ಅವರ ಮನೆಯ ಬಗಿಲು ಮುರಿದು ಒಳಗೆ ನುಗ್ಗೇ ಬಿಡ್ತಾನೆ..! ಅವಳು ಅಲ್ಲೆಲ್ಲೂ ಕಾಣೋದಿಲ್ಲ.. ಅವರಪ್ಪ ತುಂಬಾ ಕೂಲಾಗಿ ಹೇಳ್ತಾರೆ, ` ಬಾಗಿಲು ಮುರ್ಕೊಂಡು ಒಳಗೆ ಬಂದ್ಯಲ್ಲಾ, ಅವಳು ಬಂದ್ರೆ ಕರ್ಕೊಂಡು ಹೋಗು’..! ಶಾಹಿದ್ ಸಂತೋಷಕ್ಕೆ ಪಾರವೇ ಇಲ್ಲ, ಅವಳ ಜೊತೆಗೆ ಮದುವೆಯ ಕನಸು ಕಾಣೋಕೆ ಶುರು ಮಾಡ್ಬಿಟ್ಟ.. ಅಷ್ಟರಲ್ಲಿ ಮನೆಯ ಒಳಗಿಂದ ಹೊರಬಂದ ಅರ್ಚನಾ, ಓಡಿ ಬಂದು ಶಾಹಿದ್ ಕಾಲು ಹಿಡೀತಾಳೆ. ` ದಯವಿಟ್ಟು ನನ್ನ ಕ್ಷಮಿಸಿಬಿಡು, ನಂಗೆ ನಮ್ಮಪ್ಪ ಅಮ್ಮ ಮುಖ್ಯ. ನಿನ್ನ ಮದ್ವೆ ಆದ್ರೆ ಅವರು ಸತ್ತೇ ಹೋಗ್ತಾರೆ, ಪ್ಲೀಸ್ ನನ್ನ ಮರೆತುಬಿಡು..!’
ಶಾಹಿದ್ ಜೀವಂತ ಶವವಾಗಿಬಿಟ್ಟ.. ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ.. ಯಾರ ಸಲುವಾಗಿ ಊಟ-ನೀರು-ನಿದ್ದೆ ಬಿಟ್ಟು ಒದ್ದಾಡಿದ್ನೋ, ಅವಳೇ ಕಾಲು ಹಿಡಿದು ಮರೆತುಬಿಡು ಅಂದ್ರೆ ಹೇಗಾಗಬೇಡ.. ಒಂದೇ ಒಂದು ಮಾತಾಡದೇ ಅವಳ ಕೈಯಿಂದ ತನ್ನ ಕಾಲು ಬಿಡಿಸಿಕೊಂಡ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರು ಒರೆಸಿಕೊಂಡು ಅಲ್ಲಿಂದ ಹೊರನಡೆದ.. ! ಮತ್ಯಾವತ್ತೂ ಅವಳ ಮನೆಯ ಕಡೆ ನೋಡಲೂ ಇಲ್ಲ.. ! ಊಟ ಬಿಟ್ಟ, ಅವಳಿಗೋಸ್ಕರ ಸಿಕ್ಕಿದ್ದ ಕೆಲಸ ಬಿಟ್ಟ, ಉದ್ದುದ್ದ ಗಡ್ಡ ಬಿಟ್ಟ.. ಊರಲ್ಲೆಲ್ಲಾ ದೇವ್ ದಾಸ್ ಅಂತ ರೇಗಿಸೋಕೆ ಶುರುಮಾಡಿದ್ರು. ಯಾವತ್ತೂ ಡ್ರಿಂಕ್ಸ್ ಮಾಡದವನು ಕಂಠಪೂರ್ತಿ ಕುಡಿದು ರೋಡಲ್ಲಿ ಬೀಳೋಕೆ ಶುರು ಮಾಡ್ದ..! ಅವನಪ್ಪ ಅಮ್ಮನಿಗೆ ಕಣ್ಣೀರಷ್ಟೇ ಸ್ವಂತ.. ಪ್ರೀತಿಯ ಹಿಂದೆಬಿದ್ದು ಮಗನ ಜೀವನ ಹೀಗೆ ಸರ್ವನಾಶವಾಗ್ತಿದ್ರೆ ಅವರಾದ್ರೂ ಹೇಗೆ ಸಹಿಸಬೇಕು..?
ಈ ಕಡೆ ಅಪ್ಪಮ್ಮನ ಬ್ಲ್ಯಾಕ್ ಮೇಲ್ ಗೆ ಹೆದರಿದ ಅರ್ಚನಾ ಪ್ರೀತಿಸಿದ ಹುಡುಗನನ್ನು ಮರೆತು, ಸಾಯೋ ನಿರ್ಧಾರಾನೂ ಮಾಡ್ತಾಳೆ..! ಆದ್ರೆ ಅವರಪ್ಪ ಅಮ್ಮ ಅವಳನ್ನು ಜೀವಂತ ಶವವಾಗಿಸೋಕೆ ಡಿಸೈಡ್ ಮಾಡಿಬಿಟ್ಟಿದ್ರು..! ಅವರ ನೆಂಟರಲ್ಲೇ ಒಬ್ಬ ಹುಡುಗನನ್ನು ಹುಡುಕಿ ಅವಳ ಮದುವೆಯಯನ್ನೂ ಮಾಡಿಬಿಟ್ರು. ಅಷ್ಟೇ..! ಈಗ ಅವಳಾಯ್ತು, ಅವಳ ಬದುಕಾಯ್ತು..! ಆದ್ರೆ ಅವಳ ನೆನಪಲ್ಲೇ ಕೊರಗ್ತಾ ಇರೋ ಶಾಹಿದ್ ಮದುವೇನೂ ಆಗದೇ ಅವಳ ನೆನಪಲ್ಲೇ ದಿನಗಳನ್ನು ಕಳೀತಿದ್ದಾನೆ.. ಪ್ರೇಮ ಅವನ ಪಾಲಿಗೆ ಮುಳುವಾಗಿಬಿಡ್ತು..! ಜಾತಿ, ಅವರ ಪ್ರೀತಿಯನ್ನು ಸಾಯಿಸಿಬಿಡ್ತು..!
ಇದು ಯಾವುದೇ ಕಟ್ಟು ಕಥೆಯಲ್ಲ..! ಬಳ್ಳಾರಿ ಸಮೀಪ ಊರೊಂದರಲ್ಲಿ ನಡೆದ ರಿಯಲ್ ಲವ್ ಸ್ಟೋರಿ.. !

  • ಕೀರ್ತಿ ಶಂಕರಘಟ್ಟ

1 COMMENT

LEAVE A REPLY

Please enter your comment!
Please enter your name here