ವೈದ್ಯರು ದೇವರಿಗೆ ಸಮಾನ.. ಆದರೆ, ಇವತ್ತು ವೈದ್ಯಕೀಯ ಕ್ಷೇತ್ರ ಉದ್ಯಮವಾಗಿ ಬೆಳೆದಿದ್ದು, ಎಷ್ಟೋ ಮಂದಿ ವೈದ್ಯರಿಗೆ ರೋಗಿಯ ಜೀವಕ್ಕಿಂತ ಹಣವೇ ಮುಖ್ಯವಾಗಿದೆ..! ಧನದಾಹಿ ವೈದ್ಯರ ನಡುವೆ ಇಲ್ಲೊಬ್ಬ ಮಾದರಿ ವೈದ್ಯರು ಇದ್ದಾರೆ..!
ಹೌದು, ಅವರು ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಪಾಫ್ಲುರ್ ಆಸ್ಪತ್ರೆಯ ವೈದ್ಯ ಡಾ. ಓಂಕಾರ್ ಹೋಟಾ. ಅಷ್ಟಕ್ಕೂ ಈ ಡಾಕ್ಟರ್ ಗುಣಗಾನ ಏಕೆ ಅಂತೀರಾ..? ಈ ಸುದ್ದಿಯನ್ನು ಕಂಪ್ಲಿಟ್ ಓದಿದ್ರೆ ನೀವೇ ಈ ಡಾಕ್ಟರ್ ಬ ಗ್ಗೆ ಮೆಚ್ಚುಗೆಯ ಮಾತುಗಳನ್ನಾಡ್ತೀರಿ…!
ಮಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಗ್ರಾಮದಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ರು. ಅಲ್ಲಿಗೆ ಹೋದ ಡಾಕ್ಟರ್ ಓಂಕಾರ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಲ್ಲಿಯೇ ಹೆರಿಗೆ ಮಾಡಿಸಿದ್ರು. ಆದರೆ, ಹೆರಿಗೆ ನಂತರ ಅತಿಯಾದ ರಕ್ತಸ್ರಾವದಿಂದ ಬಾಣಂತಿ ಪರಿಸ್ಥಿತಿ ಚಿಂತಾಜನಕವಾಯ್ತು. ಆಗ ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯವಾಯ್ತು. ಆದರೆ. ಆ ಊರಿಗೆ ರಸ್ತೆ ಸಂಪರ್ಕ ಸರಿಯಿಲ್ಲ. ಆದ್ದರಿಂದ ಆ ಬಾಣಂತಿಯನ್ನು ಮಂಚದಲ್ಲೇ ಮಲಗಿಸಿ ಒಂದು ಕಡೆ ಪತಿ ಹತ್ರ ಮಂಚವನ್ನು ಎತ್ತಿಕೊಳ್ಳೋಕೆ ಹೇಳಿ, ಇನ್ನೊಂದು ಕಡೆ ತಾವೇ ಹಿಡಿದುಕೊಂಡು ಸುಮಾರು 8 ಕಿಮೀ ವರೆಗೆ ನಡೆದುಕೊಂಡೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಓಂಕಾರ್ ಅವರ ಮಾನವೀಯತೆ, ಕರ್ತವ್ಯ ನಿಷ್ಠೆಯನ್ನು ಮೆಚ್ಚಲೇ ಬೇಕಲ್ಲವೇ..?