ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್ ಗಳು ಜೈಲುಪಾಲು
ಬೆಂಗಳೂರು: ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ಗಳು ಇದೀಗ ಜೈಲುಪಾಲಾಗಿದ್ದಾರೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ.
ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಬಂಧಿತ ಮೂವರಲ್ಲಿ ಇಬ್ಬರನ್ನು ನಂದೀಶ್ ಅಲಿಯಾಸ್ ಕಾಟು ಮತ್ತು ರಂಜಿತ್ ಅಲಿಯಾಸ್ ರಂಜು ಎಂದು ಗುರುತಿಸಲಾಗಿದೆ.
ಆರೋಪಿ ನಂದೀಶ್ ಅಲಿಯಾಸ್ ಕಾಟು ಈ ಹಿಂದೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಮತ್ತು ಬ್ಯಾಟರಾಯನಪುರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿವೆ.
ಇನ್ನೊಬ್ಬ ಆರೋಪಿ ರಂಜಿತ್ ಅಲಿಯಾಸ್ ರಂಜು ಕೂಡ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧವೂ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಸದ್ಯ ಬಂಧಿತ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.






