No menu items!
13.5 C
Munich
Wednesday, April 22, 2026

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

Must read

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

ಬೆಂಗಳೂರುದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ನಡೆದ ಐಪಿಎಲ್ 2026ರ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಹಾಲಿ ಚಾಂಪಿಯನ್‌ ಆಗಿರುವ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 202 ರನ್‌ಗಳ ಗುರಿ ಬೆನ್ನಟ್ಟಿ ಜಯ ಸಾಧಿಸಿ, ಐಪಿಎಲ್ ಇತಿಹಾಸದಲ್ಲೇ ಅತಿ ವೇಗವಾಗಿ 200+ ರನ್ ಚೇಸ್ ಮಾಡಿದ ಹೊಸ ದಾಖಲೆ ನಿರ್ಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್‌ಗಳನ್ನು ಕಲೆಹಾಕಿತು. ನಾಯಕ ಇಶಾನ್ ಕಿಶನ್ 38 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 80 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅನಿಕೇತ್ ವರ್ಮಾ 18 ಎಸೆತಗಳಲ್ಲಿ 43 ರನ್ ಗಳಿಸಿ ಮಿಂಚಿದರೆ, ಹೆನ್ರಿಕ್ ಕ್ಲಾಸೆನ್ 31 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ ಪರವಾಗಿ ಜಾಕೋಬ್ ಡಫಿ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ರೊಮೇರೊ ಶೆಫರ್ಡ್ ಕೂಡ 3 ವಿಕೆಟ್ ಪಡೆದರೆ, ಅಭಿನಂದನ್, ಭುವನೇಶ್ವರ್ ಕುಮಾರ್ ಹಾಗೂ ಸುಯೇಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
202 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿ ಆಘಾತ ಎದುರಾಯಿತು. ಫಿಲ್ ಸಾಲ್ಟ್ ಕೇವಲ 9 ರನ್ ಗಳಿಸಿ ಔಟಾದರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ ಪಡಿಕ್ಕಲ್ ಪಂದ್ಯವನ್ನು ಆರ್‌ಸಿಬಿ ಪರವಾಗಿ ತಿರುಗಿಸಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, 26 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು.
ಪಡಿಕ್ಕಲ್ ಔಟಾಗುವ ಮೊದಲು ವಿರಾಟ್ ಕೊಹ್ಲಿ ಜೊತೆ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿದರು. ನಂತರ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 69 ರನ್ ಗಳಿಸಿದರು. ನಾಯಕ ರಜತ್ ಪಟಿದಾರ್ 12 ಎಸೆತಗಳಲ್ಲಿ 31 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು.
ಅಂತಿಮವಾಗಿ, ಆರ್‌ಸಿಬಿ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದೇ ಮೊದಲ ಬಾರಿಗೆ ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 190+ ರನ್‌ಗಳ ಗುರಿಯನ್ನು ಆರ್‌ಸಿಬಿ ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ಕೂಡ ನಿರ್ಮಿಸಿದೆ.

- Advertisement -spot_img

More articles

- Advertisement -spot_img

Latest article