ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಲಸ ಮಾಡಿಸಿಕೊಂಡ ಶಾಸಕರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುನಿರತ್ನ ಅವರು ಹೇಳಿದ ಕೆಲಸಗಳನ್ನು ಮಾಡಿಕೊಟ್ಟರೂ, ಬೆನ್ನಿಗೆ ಚೂರಿ ಹಾಕಿದ್ದಾರೆ. ರಾಜೀನಾಮೆ ಕೊಟ್ಟು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದೇ ತಿಳಿಯುತ್ತಿಲ್ಲ. ನಂಬಿಕೆ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ರಾಜೀನಾಮೆ ನೀಡಿರುವ ಶಾಸಕರು ನನಗೆ ಆಪ್ತರಾಗಿದ್ದು, ನಾನೇ ಅವರನ್ನು ಬಿಜೆಪಿಗೆ ಕಳುಹಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.ನಾನು ಬಿಜೆಪಿಗೆ ಹೋಗುವಂತೆ ಯಾರಿಗಾದರೂ ಹೇಳಿದ್ದೇನೆಯೇ? ಅಂತಹ ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.