ಉದ್ಯಮಿ ಮನೆಯಲ್ಲಿ ಮೂಟೆ ಮೂಟೆ ಹಣ!

0
33

ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿರುವ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್​ ಜೈನ್​ಗೆ ಸಂಬಂಧಿತ ಪ್ರದೇಶಗಳ ಮೇಲೆ ನಡೆದ ದಾಳಿಯ ವೇಳೆ ಈವರೆಗೆ ಬರೋಬ್ಬರಿ 150 ಕೋಟಿ ರೂಪಾಯಿ ನಗದು ಹಣ ವಶಕ್ಕೆ ಪಡೆದಿರುವುದಾಗಿ ಆದಾಯ ತೆರಿಗೆ ಇಲಾಖೆಯ ಮೂಲಗಳು ಶುಕ್ರವಾರ ಬೆಳಗ್ಗೆ ತಿಳಿಸಿದೆ.

ದಾಳಿಗೆ ಸಂಬಂಧಿಸಿದ ಫೋಟೋಗ್ರಾಫ್​ಗಳು ಬಿಡುಗಡೆಯಾಗಿದ್ದು, ಅದರಲ್ಲಿ ನೋಟಿನ ಕಂತೆಗಳ ರಾಶಿಯನ್ನು ಕಾಣಬಹುದಾಗಿದೆ. ನೋಟಿನ ಕಂತೆಗಳನ್ನು ಬಹುದೊಡ್ಡ ವಾರ್ಡ್​ರೋಬ್​ಗಳಲ್ಲಿ ತುಂಬಿಡಲಾಗಿತ್ತು.​ ಎಲ್ಲ ನೋಟಿನ ಕಂತೆಯನ್ನು ಪ್ಲಾಸ್ಟಿಕ್​ ಕವರ್​ನಿಂದ ಸುತ್ತಿ, ಹಳದಿ ಟೇಪ್​ನಿಂದ ಭದ್ರಪಡಿಸಲಾಗಿತ್ತು. ಒಟ್ಟು 30 ನೋಟಿನ ಬಂಡಲ್​ಗಳು ಫೋಟೋದಲ್ಲಿ ಕಾಣುತ್ತದೆ.

ಮತ್ತೊಂದು ಫೋಟೋದಲ್ಲಿ ಐಟಿ ಮತ್ತು ಜಿಎಸ್​ಟಿ ಅಧಿಕಾರಿಗಳು ಕೋಣೆಯೊಂದರ ನೆಲದ ಮೇಲೆ ಕುಳಿತಿರುವುದನ್ನು ಮತ್ತು ಅವರ ಸುತ್ತ ನೋಟಿನ ಕಂತೆಗಳ ರಾಶಿ ಹಾಗೂ ಮೂರು ಹಣ ಎಣಿಸುವ ಯಂತ್ರಗಳನ್ನು ಕಾಣಬಹುದು. ಇದುವರೆಗಿನ ನೋಟಿನ ಎಣಿಕೆಯ ಪ್ರಕಾರ ಉದ್ಯಮಿ ಮನೆಯಲ್ಲಿ 150 ಕೋಟಿ ರೂ. ನಗೆದು ಹಣ ಪತ್ತೆಯಾಗಿದೆ.

ಗುರುವಾರ ಆರಂಭವಾದ ದಾಳಿಯು ಈಗಲೂ ಮುಂದುವರಿದಿದೆ. ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್​ನಲ್ಲಿ ಉದ್ಯಮಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ತೆರಿಗೆ ವಂಚನೆ ಆರೋಪದ ಮೇಲೆ ಜಿಎಸ್​ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಉದ್ಯಮಿ ಮನೆಯಲ್ಲಿ ಕಂಡುಬಂದು ನೋಟಿ ಕಂತೆಗಳನ್ನು ನೋಡಿ ಐಟಿ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಅವರು ಕೂಡ ದಾಳಿಯಲ್ಲಿ ಕೈಜೋಡಿಸಿದ್ದಾರೆ.

ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ. ಈ ನಕಲಿ ಇನ್‌ವಾಯ್ಸ್‌ಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here