ಒಂದೇ ಓವರ್ ನಲ್ಲಿ ಪಂದ್ಯದ ದಿಕ್ಕು ಬದಲಾಯಿಸಿದ ಶಹಭಾಝ್ ಯಾರು?

0
25

ಪಂದ್ಯದಲ್ಲಿ ಶಹಬಾಝ್ ಅಹ್ಮದ್ ನೀಡಿದ ಬೌಲಿಂಗ್‌ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ದೀರ್ಘಕಾಲದವರೆಗೆ ಅಚ್ಚಳಿಯದಂತೆ ಉಳಿಯಲಿದೆ. ಇನಿಂಗ್ಸ್‌ನ 17ನೇ ಓವರ್‌ನಲ್ಲಿ 3 ವಿಕೆಟ್‌ ಪಡೆದು 1 ರನ್‌ ಮಾತ್ರವೇ ಬಿಟ್ಟುಕೊಟ್ಟು ಸನ್‌ರೈಸರ್ಸ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿದರು.

ಐಪಿಎಲ್‌ ವೃತ್ತಿಬದುಕಿನಲ್ಲಿ ತಮ್ಮ ನಾಲ್ಕನೇ ಪಂದ್ಯವನ್ನಾಡಿದ ಶಹಬಾಝ್, ಸನ್‌ರೈಸರ್ಸ್‌ನ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಜಾನಿ ಬೈರ್‌ಸ್ಟೋವ್‌, ಮನೀಶ್‌ ಪಾಂಡೆ ಮತ್ತು ಅಬ್ದುಲ್‌ ಸಮದ್‌ ಅವರಂತಹ ಪವರ್‌ ಹಿಟ್ಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿ ಚಾಲೆಂಜರ್ಸ್‌ ಪರ ಗೇಮ್‌ ಚೇಂಜಿಂಗ್‌ ಆಟವಾಡಿದರು. ತಮ್ಮ 2 ಓವರ್‌ಗಳ ಸ್ಪೆಲ್‌ನಲ್ಲಿ 7 ರನ್‌ ನೀಡಿ 3 ವಿಕೆಟ್‌ ಪಡೆಯುವ ಮೂಲಕ ಮಿಂಚಿದ ಶಹಬಾಝ್, ಬ್ಯಾಟಿಂಗ್‌ನಲ್ಲೂ ಮೂರನೇ ಕ್ರಮಾಂಕದಲ್ಲಿ ಆಡಿ 14 ರನ್‌ಗಳ ಅತ್ಯಮೂಲ್ಯ ಕೊಡುಗೆ ಸಲ್ಲಿಸಿದರು.

ಕುತೂಹಲದ ಸಂಗತಿ ಏನೆಂದರೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2020ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ಕರೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಶಹಬಾಝ್‌ ಅಹ್ಮದ್‌, ರಣಜಿ ಟ್ರೋಫಿ ಕ್ರಿಕೆಟ್‌ ಆಡುವ ಕಾರಣ ಹಿಂದೆ ಸರಿದಿದ್ದರು. ಬಹುಶಃ ಅಂದು ಶಹಬಾಝ್‌ ಸನ್‌ರೈಸರ್ಸ್‌ ಸೇರಿದ್ದರೆ ಇಂದು ಆರ್‌ಸಿಬಿ ತಂಡದ ಪರ ಇಂಥದ್ದೊಂದು ಪ್ರದರ್ಶನ ಕಾಣಲು ಸಿಗುತ್ತಿರಲಿಲ್ಲ.

ಹರಿಯಾಣ ಮೂಲದವರಾದರೂ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ವೆಸ್ಟ್ ಬೆಂಗಾಲ್‌ ತಂಡದ ಪರ ಆಡುವ 26 ವರ್ಷದ ಆಲ್ರೌಂಡರ್‌ ಶಹಬಾಝ್ ಅಹ್ಮದ್‌ ಅವರನ್ನು ಐಪಿಎಲ್ 2020 ಟೂರ್ನಿಯ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ತಂಡ ಮೂಲ ಬೆಲೆ 20 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು.

“ಅದು ಬಹಳಾ ಕಠಿಣ ಸಂದರ್ಭ. ಆದರೆ, ನನ್ನ ಸಾಮರ್ಥ್ಯದ ಮೇಲೆ ನಾಯಕ ವಿಶ್ವಾಸವಿಟ್ಟರು. ಹೀಗಾಗಿ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಹೀಗಾಗಿ ನನ್ನ ನಾಯಕನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚೆಂಡು ತಿರುವು ಪಡೆಯುತ್ತಿದ್ದ ಕಾರಣ ನನಗೆ 17ನೇ ಓವರ್‌ ಎಸೆಯಲು ಕೊಟ್ಟರು. ಅದು ವಿಕೆಟ್‌ ಪಡೆಯಲು ನನಗೆ ನೆರವಾಯ್ತು ಕೂಡ,” ಎಂದು ಪಂದ್ಯದ ಬಳಿಕ ಮಾತನಾಡಿದ ಅಹ್ಮದ್‌ ಹೇಳಿದ್ದಾರೆ.

2019-20ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಶಹಬಾಝ್ ಅಹ್ಮದ್‌ 7 ಪಂದ್ಯಗಳಲ್ಲಿ 6ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು 10 ವಿಕೆಟ್‌ ಪಡೆದಿದ್ದರು. ಇದರ ಬೆನ್ನಲ್ಲೇ ಅವರಿಗೆ ಆರ್‌ಸಿಬಿ ತಂಡ ಅವಕಾಶದ ಬಾಗಿಲು ತೆರೆದಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಾತ್ರವಲ್ಲ ಶಹಬಾಝ್ ಕ್ಷೇತ್ರರಕ್ಷಣೆಯಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಟೂರ್ನಿ ಆರಂಭಕ್ಕೂ ಮೊದಲು ನಡೆದ ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿ ಶಹಬಾಝ್ 91 ರನ್‌ ಚೆಚ್ಚಿದ್ದರು, ಇದೇ ಕಾರಣಕ್ಕೆ ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಶಹಬಾಝ್‌ಗೆ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಲಾಗಿತ್ತು.

 

LEAVE A REPLY

Please enter your comment!
Please enter your name here