ಜುಮುಕಿಯ ಚಮಕ್‌ಗೆ ಹೃದಯ ಜಾರಿ ಬಿತ್ತು!

0
650

ಹೀಗೆ ಒಂದು ಸಂಜೆ ಮೊಬೈಲ್ ನೋಡುತ್ತಾ ಕೂತಿದ್ದೆ. ಇದ್ದಕ್ಕಿದ್ದಂತೆ ನಮ್ಮ ಗ್ಯಾಂಗಿನಲ್ಲಿದ್ದ ಹುಡುಗಿಯೊಬ್ಬಳ ವಾಟ್ಸಾಪ್ ಡಿ.ಪಿ ಕಣ್ಣಿಗೆ ಬಿತ್ತು, ಅಬ್ಬಾ ಅವಳ ಚೆಲುವ ಕಂಡು ಒಮ್ಮೆ ಕಣ್ಣು ತಿಕ್ಕಿಕೊಂಡು ನೋಡಿದೆ! ಇನ್ನೂ ಚೆಲುವಾಗಿ ಕಂಡಳು. ಒಂದು ನಿಮಿಷವೂ ಯೋಚನೆ ಮಾಡಲಿಲ್ಲ ಗೆಳತಿಗೆ ಕರೆ ಮಾಡಿ ನೇರವಾಗಿ ಕೇಳಿಯೇ ಬಿಟ್ಟೆ, ಆ ಫೋಟೋದಲ್ಲಿ ನಿನ್ನ ಪಕ್ಕ ನಿಂತಿರುವ ಸುಂದರಿ ಯಾರಮ್ಮಾ ಅಂತ, ಅವಳಿಗೆ ಸ್ವಲ್ಪ ಕೋಪ ಬಂತು ಅಂತ ಕಾಣುತ್ತೆ, ಆದರೂ ಅಲ್ಪ ಸ್ವಲ್ಪ ಮಾಹಿತಿ ಕೊಟ್ಟಳು. ಮಾಮೂಲಿಯಂತೆ ಹುಡುಗರ ಚಾಳಿ ನನಗೂ ಅಂಟಿತ್ತು ಮಾಹಿತಿ ಸಿಕ್ಕಿತಲ್ಲಾ ಫೇಸ್‌ಬುಕ್ಕಿನಲ್ಲಿ ಬೇಟೆ ಶುರು. ಹೆಸರು ಗೊತ್ತಿತ್ತು ಹುಡುಕಿದೆ, ಮನದಾಳದಲ್ಲಿ ಆಹ್ವಾನ ತಯಾರಾಗಿತ್ತಾದರೂ ಮೊದಲು ಗೆಳೆತನದ ರಿಕ್ವೆಸ್ಟ್ ಒಂದನ್ನು ಕಳುಹಿಸಿದೆ. ಕ್ಷಣಾರ್ಧದಲ್ಲಿ ಗೆಳೆತನಕ್ಕೆ ಸಮ್ಮತಿ ದೊರೆಯಿತು. ಆಶ್ಚರ್ಯದಿಂದ ನಿಮಗೆ ನಾನು ಗೊತ್ತಾ ಎಂಬುದಾಗಿ ಒಂದು ಸಂದೇಶ ಬಿಟ್ಟೆ. ಅವಳು ಇಲ್ಲ ನಿಮ್ಮ ಗೆಳತಿ ಮತ್ತು ನಾನು ಒಂದೇ ಕೋಣೆಯಲ್ಲಿ ಇರುವವರು ನಿಮಗೆ ನನ್ನ ಬಗ್ಗೆ ಮಾಹಿತಿ ಕೊಟ್ಟಿದ್ದು ನನ್ನ ಹತ್ತಿರವೇ ಕೇಳಿ ಎಂದಳು. ಒಮ್ಮೆ ಎಂಥಾ ಬುದ್ಧಿವಂತೆಯ ಬಳಿ ಮಾಹಿತಿ ಕೇಳಿದೆನಲ್ಲಾ ಎಂದು ನಾಚಿಕೆಯಾಯಿತು. ಆದರೂ ಮನಸ್ಸು ಆ ಚೆಲುವಿಗೆ ಸೋತಿತ್ತು, ನಮ್ಮ ಮೊಬೈಲ್ ಸಂಭಾಷಣೆ ಮುಂದುವರೆದಿತ್ತು.
ಪರಿಚಯವಾಗಿ ಒಂದು ವಾರವಾಗಿತ್ತು, ರಾತ್ರಿ ಒಂದು ಗಂಟೆ ಎರಡು ಗಂಟೆ ತನಕ ಬರೀ ಫೆಸ್‌ಬುಕ್ ಚಾಟಿಂಗ್ ಮಾಡಿಕೊಂಡಿದ್ದ ನಾವು ಒಬ್ಬರ ಮುಖವನ್ನು ಒಬ್ಬರು ನೇರವಾಗಿ ನೋಡಿರಲಿಲ್ಲ.

ಆ ದಿನಕ್ಕಾಗಿ ಕಾದು ಕುಳಿತಿದ್ದೆ ಅಂತೂ ಅವಳಿಗೆ ಕರುಣೆ ಬಂತು. ಒಂದು ದಿನ ಭೇಟಿಯಾಗಲು ಕರೆದಳು. ಸಂತಸಕ್ಕೆ ಪಾರವೇ ಇರಲಿಲ್ಲ. ಹಾಸ್ಟೆಲ್ಲಿನಲ್ಲಿ ಇದ್ದ ನಾನು ಯಾವ ಬಟ್ಟೆಯನ್ನೂ ಒಗೆಯದೆ ಬಕೇಟಿನಲ್ಲಿ ಪೇರಿಸಿಟ್ಟಿದ್ದರಿಂದ ಬಟ್ಟೆಗೆ ಬರಗಾಲ ಬಂದಿತ್ತು. ಹುಡುಗಿಯನ್ನು ನೋಡಲು ಹೋಗಬಹುದಾದ ಒಂದೇ ಒಂದು ಯೋಗ್ಯವಾದ ಅಂಗಿ ಇಲ್ಲದೆ ಹುಡುಕಾಡಿ, ನಂತರ ಗೆಳೆಯನೊಬ್ಬನ ಅಂಗಿ ಧರಿಸಿ, ಯಾವುದೋ ಘಮ್ ಎನ್ನುವ ಓಸಿ ಸೆಂಟನ್ನು ಹೊಡೆದುಕೊಂಡು ಹೊರಟೆ. ಅವಳು ಹೇಳಿದಲ್ಲಿಗೆ ಹೋದೆ, ಪುಣ್ಯಾತ್ಗಿತ್ತಿ ತುಂಬಾ ಹುಡುಗಿಯರ ಮಧ್ಯದಲ್ಲಿ ಕೂತಿದ್ದಳು. ನಾನು ಹೋದದ್ದನ್ನು ಕಂಡು ನಿಧಾನವಾಗಿ ಎದ್ದು ಬಂದಳು. ಅಬ್ಬಾ ಅದೇನು ಚೆಲುವು, ಅದೇನು ನಡಿಗೆ. ಮನಸ್ಸು ಕುಣಿಯೋ ಅಂತಿತ್ತು. ಆದರೆ, ಅವಳೆದುರು ಮರ್ಯಾದೆ ಹೋದರೆ ಕಷ್ಟ ಅಂತ ಸುಮ್ಮನೆ ಹಾಗೆ ನೋಡುತ್ತಾ ನಿಂತಿದ್ದೆ. ಬಳಿ ಬಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ಕಿವಿ ಮುಚ್ಚಿದ್ದ ಮುಂಗುರಳನ್ನು ಸರಿಸಿ ಜೋಲುತ್ತಿದ್ದ ಅವಳ ಜುಮುಕಿಯನ್ನು ತೋರಿಸಿದಳು. ಹುಡುಗಿಯರಿಗೆ ಜುಮುಕಿ ಚೆಂದವೋ ಜುಮುಕಿಯಿಂದ ಹುಡುಗಿಯರೋ ಚೆಂದವೋ ಗೊತ್ತಿಲ್ಲ, ಅಂದು ಮಾತ್ರ ಎರಡೂ ಒಂದಕ್ಕಿಂತ ಒಂದು ಅಂದವಾಗಿ ಕಂಡವು. ನಗು ನಗುತ್ತಾ ಮಾತನಾಡುತ್ತಿದ್ದ ಅವಳ ಮುಖ, ಕಣ್ಣು ಕುಕ್ಕುತ್ತಿದ್ದ ಅವಳ ಜುಮುಕಿ, ಪಟ ಪಟನೆ ಮಳೆಯಂತೆ ಸುರಿಯುತ್ತಿದ್ದ ಅವಳ ಮಾತು ಎಲ್ಲವೂ ನನ್ನನ್ನು ಪ್ರೀತಿಯೆಂಬ ಸಮುದ್ರಕ್ಕೆ ನೂಕಲು ಸಜ್ಜಾಗಿ ನಿಂತಿದ್ದವು. ಅವಳ ಮಾತು ಮುಗಿದಿತ್ತು, ಆದರೆ ನಗುವು ನಿಂತಿರಲಿಲ್ಲ, ಜುಮುಕಿ ಇವಳನ್ನು ಕಳೆದುಕೊಳ್ಳಬೇಡ ಕಣೋ ಪೆದ್ದ ಎಂದು ಧಮ್ಕಿ ಹಾಕುವುದನ್ನು ಕಮ್ಮಿ ಮಾಡಿರಲಿಲ್ಲ. ಅವಳ ಚೆಲುವ ಕಂಡು ಹೆಪ್ಪುಗಟ್ಟಿದ್ದ ಬೆರಗಿನಲ್ಲೆ ನೇರವಾಗಿ ರೂಮಿಗೆ ಬಂದೆ, ಹುಚ್ಚನಂತೆ ಕುಣಿದು ಕುಪ್ಪಳಿಸಿದೆ. ಅವಳ ಚೆಲುವನ್ನು ನೇರವಾಗಿ ಕಂಡು, ಯಾವುದೇ ಕಾರಣಕ್ಕೂ ಇವಳು ಬೇರೆಯವರ ಮನೆಯ ಮುಂದೆ ರಂಗೋಲಿ ಬಿಡಬಾರದು, ಬಿಟ್ಟರೆ ಅದು ನಮ್ಮ ಮನೆ ಮುಂದೆಯೇ ಆಗಿರಬೇಕು ಎಂಬ ನಿರ್ಧಾರ ಮಾಡಿಕೊಂಡೆ.

ರಾತ್ರಿ ಮತ್ತೆ ಫೇಸ್‌ಬುಕ್ ಮಾತುಕಥೆ ಆರಂಭವಾಯಿತು, ಹೇಳಲು ಭಯ, ಹೇಳದೆ ಹೋದರೆ ಕಳೆದುಕೊಳ್ಳಬೇಡ ಎಂದು ಜುಮುಕಿ ಹಾಕಿದ್ದ ಧಮ್ಕಿಯ ಭಯ. ಕೊನೆಗೂ ಇದ್ದ ದೇವರನ್ನೆಲ್ಲಾ ನೆನೆದು ಹೇಳಿಯೇ ಬಿಟ್ಟೆ. ಎಲ್ಲಾ ಹುಡುಗಿಯರಂತೆ ನನಗೆ ಸ್ವಲ್ಪ ಟೈಮ್ ಬೇಕು ಎಂದಳು. ಆಗಲೇ ಎಷ್ಟೋ ವರ್ಷಗಳಿಂದ ಮನಸ್ಸಲ್ಲಿ ಖಾಲಿ ಬಿದ್ದಿದ್ದ ಪ್ರೀತಿಯ ಸಿಂಹಾಸನವನ್ನು ನೀಟಾಗಿ ಒರೆಸಿ ಇಟ್ಟಿದ್ದೆ. ಆ ಬೆಳಗ್ಗೆ ಸೂರ್ಯ ಅದ್ಯಾವ ಮಗ್ಗುಲಲ್ಲಿ ಎದ್ದಿದ್ದನೋ? ಏನೋ? ಗ್ರೀನ್ ಸಿಗ್ನಲ್ ಬಂತು. ಅಂದು ಬೆಳಗ್ಗೆ 7.30ಕ್ಕೆ ಖುಷಿಯ ಕುಣಿತ ಶುರುವಾಗಿತ್ತು. ನಾನು ಹುಚ್ಚೆದ್ದು ಕುಣಿದ ರೀತಿಯನ್ನು ಕಂಡು ನನ್ನ ಗೆಳೆಯರು ತಲೆಕೆಡಿಸಿಕೊಂಡಿದ್ದಂತೂ ಹೌದು. ಅಂದಿನಿಂದ ಎಲ್ಲಾ ಪ್ರೇಮಿಗಳಂತೆ ಮತ್ತೆ ಮತ್ತೆ ಆ ನಗುವಿಗೆ ಸೊಲುವುದು ಆ ಜುಮುಕಿಯ ಕುಣಿತವನ್ನು ನೋಡುವುದೇ ಒಂದು ಖಯಾಲಿಯಾಗಿ ಹೋಗಿದೆ.
ಅಭಿರಾಮ್ ಶರ್ಮ, ಕೊಪ್ಪ.

LEAVE A REPLY

Please enter your comment!
Please enter your name here