ಡಿಸಿಎಂ ಭೇಟಿಯಾದ ಸ್ಯಾಂಡಲ್ ವುಡ್ ಲೀಡರ್.. ಚಿತ್ರರಂಗಕ್ಕೆ ನೆರವು ನೀಡುವಂತೆ ಮನವಿ..

0
141

ಕೊರೊನಾ ದಾಳಿಯಿಂದಾಗಿ ಇಡೀ ಚಿತ್ರರಂಗ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಸರ್ಕಾರ ಚಿತ್ರೋದ್ಯಮದ ನೆರವಿಗೆ ನಿಲ್ಲಬೇಕೆಂದು ನಟ ಶಿವರಾಜ್ ಕುಮಾರ್ ಮನವಿ‌‌ ಮಾಡಿದ್ದಾರೆ. ಇಂದು ಉಪಮುಖ್ಯಮಂತ್ರಿಗಳ ಭೇಟಿ ಮಾಡಿ ಮನವಿ‌‌ ಸಲ್ಲಿಸಿದರು.

ಕೆಲ ದಿನಗಳ ಹಿಂದಷ್ಟೇ ಶಿವರಾಜಕುಮಾರ್ ನಿವಾಸದಲ್ಲಿ ಚಿತ್ರರಂಗದ ಗಣ್ಯರು, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮುಂತಾದವರು ಸೇರಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಚಿತ್ರರಂಗದ ನೇತೃತ್ವವನ್ನ ವಹಿಸಿಕೊಳ್ಳುವಂತೆ ಶಿವರಾಜ್ ಕುಮಾರ್ ಅವರ ಮುಂದೆ ಒಮ್ಮತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದರಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿರಂಗದ ನೇತೃತ್ವವನ್ನು ವಹಿಸಿಕೊಂಡಿದ್ದರು. ಇದರ ಬೆನ್ನಲೇ ಸ್ಯಾಂಡಲ್ ವುಡ್ ಲೀಡರ್ ಶಿವಣ್ಣ, ನಟರೊಂದಿಗೆ ಸಭೆ ನಡೆಸಿದ್ದರು. ಹಿರಿಯ ನಟರಾದ ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್ ಸೇರಿದಂತೆ ಹಲವು ನಟರು ಶಿವಣ್ಣನಿಗೆ ಸಾಥ್ ನೀಡಿದರು. ಜೊತೆಗೆ ಒಂದಷ್ಟು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು ಅಲ್ಲದೇ ಒಮ್ಮತದಿಂದ ಶಿವಣ್ಣನ ಜೊತೆಗಿರುವ ಅಭಿಪ್ರಾಯ ವ್ಯಕ್ತಪಡಿಸಿದರು.‌

ಅದೇ ದಿನ ಶಿವರಾಜ್ ಕುಮಾರ್ ನಿವಾಸದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರನ್ನು ಆಹ್ವಾನಿಸಿ ಚಿತ್ರರಂಗದ ಪ್ರಸ್ತುತ ಸಮಸ್ಯೆಗಳು ಹಾಗೂ ಭವಿಷ್ಯದಲ್ಲಿ ಎದುರಿಸ ಬೇಕಾಗಿರುವ ಸವಾಲುಗಳು ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಮಸ್ಯೆಗಳನ್ನು ಆಲಿಸಿ ಚಿತ್ರರಂಗದ ಮನವಿ ಸ್ವೀಕರಿಸಿದ ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗಳ‌ ಗಮನಕ್ಕೆ ತರುವ ಭರವಸೆಯನ್ನು ನೀಡಿದ್ದರು. ಶಿವಣ್ಣನ ಮನೆಯಲ್ಲಿ ನಡೆದ ಸಂಭೆಯಲ್ಲಿ ಬಹುತೇಕ ಕಲಾವಿದರು ಹಾಜರಿದ್ದರು.

ಇದೀಗ ಚಿತ್ರರಂಗದ ನಾಯಕತ್ವ ವಹಿಸಿಕೊಂಡ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿರಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಎಲ್ಲಾ ‌ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ‌‌ ಮೊದಲ ಹಂತವಾಗಿ ಈಗಾಗಲೇ ಸಚಿವರನ್ನು ಭೇಟಿಯಾಗಿದ್ದ ಶಿವಣ್ಣ, ಸದ್ಯ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿದ್ದಾರೆ.

ಮೊದಲ ಬಾರಿಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರೇಸ್ ಕೋರ್ಸ್ ನಲ್ಲಿರುವ ಡಿಸಿಎಂ ನಿವಾಸಕ್ಕೆ ತೆರಳಿದ ಶಿವರಾಜ್ ಕುಮಾರ್ ಕೆಲವು ಸಮಯ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇದೀಗ ಶಿವಣ್ಣ ಅಶ್ವತ್ಥ್ ನಾರಾಯಣ ಅವರ ಜೊತೆ ಮಾತನಾಡಿ ಕೊರೊನಾ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವ ಚಿತ್ರರಂಗದ ಪುನಶ್ಚೇತನಕ್ಕೆ ಸರ್ಕಾರ ನೆರವು ಮಾಡಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಸಂಕಷ್ಟದಲ್ಲಿರುವ ಸಹ ಕಲಾವಿದರು ಚಿತ್ರರಂಗವನ್ನೇ ಅವಲಂಬಿಸಿರುವ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಶಿವಣ್ಣ ಮನವಿ ಮಾಡಿದ್ದಾರೆ.

ಇನ್ನೂ ಶಿವರಾಜ್ ಕುಮಾರ್ ಸಿ ಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಬೇಕಿತ್ತು. ಆದರೆ ಸಿಎಂಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ , ಭೇಟಿಯನ್ನು ಮುಂದೂಡಿದ್ದಾರೆ. ಸದ್ಯದಲ್ಲೇ ಸಿಎಂ ಭೇಟಿಯಾಗಿ ಚಿತ್ರರಂಗದ ಪುನಶ್ಚೇತನದ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಜೊತೆಗೆ ಮಾರ್ಚ್ ತಿಂಗಳಿನಿಂದ ಚಿತ್ರ ಪ್ರದರ್ಶನವಿಲ್ಲದೇ ಥಿಯೇಟರ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಶೂಟಿಂಗ್ ಮಾಡಲು ಕೂಡ ನಿರ್ಮಾಪಕರು ಬಂಡವಾಳ ಹೂಡುತ್ತಿಲ್ಲ.‌ ಆದಕಾರಣ ಥಿಯೇಟರ್ ಗಳ ಪುನಾರಂಭದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಮುಂದಿನ ದಿನಗಳಲ್ಲಿ ಸಿನಿಮಾರಂಗಕ್ಕೆ ನೆರವಾಗುವಂತಹ ಹೊಸ ಹೊಸ ಯೋಜನೆಗಳನ್ನು ಘೋಷಿಸಬೇಕೆಂಬ ಕೋರಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಇಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here