ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಮತ್ತೊಮ್ಮೆ ರಾಜ್ಯಕ್ಕೆ ಕಹಿ ಸುದ್ದಿ ಸಿಕ್ಕಿದೆ. ಪೂರ್ವನಿಗದಿಯಂತೆ ತಮಿಳುನಾಡಿಗೆ ಮಳೆನಾಡಿನ ಅವಧಿಯ ಕಾವೇರಿ ನದಿ ನೀರು ಹರಿಸುವಂತೆ ಪ್ರಾಧಿಕಾರ ಇಂದು ಸೂಚಿಸಿದೆ.

ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ 30.6 ಟಿಎಂಸಿ ಬಾಕಿಯನ್ನು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಕೆ ಹಲ್ದರ್ ಸೂಚಿಸಿದ್ದಾರೆ. ತಮಿಳುನಾಡಿನ ಮೆಟ್ಟೂರ್ ಅಣೆಕಟ್ಟಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 31ರಂದು ಸೂಚಿಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 11ನೇ ಸಭೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಹರಿಸುವಂತೆ ಸಿಡಬ್ಲುಎಂಎ ಅಧ್ಯಕ್ಷತೆ ವಹಿಸಿದ್ದ ಹಲ್ದರ್ ಸೂಚಿಸಿದರು. ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಒಳ ಹರಿವು ಕಡಿಮೆ ಇದೆ ಎಂಬ ಕರ್ನಾಟಕದ ವಾದವನ್ನು ಪುರಸ್ಕರಿಸಲಿಲ್ಲ.






