ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ. ನಂತರ ತೆಲುಗಿನಲ್ಲಿ ವಿಜಯ ದೇವರಕೊಂಡ ಜೊತೆ ನಟಿಸುವ ಮೂಲಕ ಗೀತಾ ಎಂದೇ ಚಿರಪರಿಚಿತರಾದರು ಈ ಕೊಡುಗಿನ ಚೆಲುವೆ. ಇದೀಗ ರಶ್ಮಿಕಾ ಕಾಲಿವುಡ್ ನಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ತೆಲುಗಿನಲ್ಲಿ ಗೀತ ಗೋವಿಂದಂ ಚಿತ್ರ ಹಿಟ್ ಆದ್ಮೇಲೆ ರಶ್ಮಿಕಾ ಅವರಿಗೆ ಆಫರ್ ಗಳ ಮೇಲೆ ಆಫರ್ ಬರುತ್ತಿದೆ.
ಕನ್ನಡ, ತೆಲುಗಿನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ತಮಿಳು ಚಿತ್ರದಲ್ಲಿ ನಟಿಸಲು ತಯಾರಾಗುತ್ತಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ತಮಿಳು ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಕಾರ್ತಿ ಅಭಿನಯದ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.
ಕಾರ್ತಿ ಅಭಿನಯದ ಹೊಸ ಚಿತ್ರಕ್ಕೆ ಭಾಗ್ಯರಾಜ್ ಕಣ್ಣನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕಥೆ ಕೇಳಿರುವ ರಶ್ಮಿಕಾ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ. ಇನ್ನು ರಶ್ಮಿಕಾ ಅಭಿನಯದ ಕನ್ನಡ ಸಿನಿಮಾ ಯಜಮಾನ ಮಾರ್ಚ್ 1ರಂದು ರಿಲೀಸ್ ಆಗುತ್ತಿದೆ.