ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತದೆ ಗೊತ್ತಾ..?
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಆರೋಗ್ಯಕರ. ಬಾಳೆಹಣ್ಣಿನಲ್ಲಿ ವಿವಿಧ ಪೋಷಕಾಂಶಗಳಿವೆ. ಇವು ದೇಹದಲ್ಲಿರುವ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಅನೇಕ ಜನರು ತೂಕ ಹೆಚ್ಚಿಸಲು ಅಥವಾ ತಮ್ಮ ದೇಹವನ್ನು ಸದೃಢವಾಗಿಡಲು ಬಾಳೆಹಣ್ಣು ತಿನ್ನುತ್ತಾರೆ. ಹೀಗೆ ಪೋಷಕಾಂಶಗಳಲ್ಲಿ ಹೇರಳವಾಗಿರುವ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು
ಜೀರ್ಣಕ್ರಿಯೆಗೆ ಸಹಕಾರಿ :
ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಬಾಳೆಹಣ್ಣಿನ ಸೇವನೆ ಉತ್ತಮ. ಜೊತೆಗೆ ಜೀರ್ಣಕ್ರಿಯೆಯ ತೊಂದರೆಯನ್ನು ದೂರ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಪೆಸ್ಟಿನ್ ಅಂಶವು ಮಲಬದ್ಧತೆಯನ್ನು ದೂರವಿರಿಸುತ್ತದೆ,
ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ:
ರಕ್ತದೊತ್ತಡದಲ್ಲಿನ ಏರುಪೇರುಗಳಿಂದ ನೀವು ತೊಂದರೆಗೊಳಗಾಗಿದ್ದರೆ ಅಥವಾ ನೀವು ಬೇಗನೆ ಸುಸ್ತಾಗಲು ಪ್ರಾರಂಭಿಸಿದರೆ ಬಾಳೆಹಣ್ಣು ಸೇವಿಸಬೇಕು. ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಅಂಶ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ ಇದು ದೇಹದೊಳಗೆ ರಕ್ತಪರಿಚಲನೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ದೇಹದ ಮೂಳೆಗಳನ್ನು ಬಲಪಡಿಸುತ್ತದೆ:
ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ದೇಹದ ಮೂಳೆಗಳು ಬಲಗೊಳ್ಳುತ್ತವೆ ಏಕೆಂದರೆ ಬಾಳೆಹಣ್ಣಿನಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವಿದೆ, ಇದು ನಿಮ್ಮ ಆಹಾರದಿಂದ ಕ್ಯಾಲ್ಸಿಯಂ ನ್ನು ಹೀರಿಕೊಳ್ಳುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಮತ್ತು ಮೂಳೆಯ ಸಾಂದ್ರತೆಯೂ ಹೆಚ್ಚಾಗುತ್ತದೆ. ನೀವು ಮೂಳೆಗಳನ್ನು ಗಟ್ಟಿಯಾಗಿಸಲು ಬಯಸಿದರೆ, ಖಂಡಿತವಾಗಿಯೂ ಪ್ರತಿದಿನ ಬಾಳೆಹಣ್ಣು ತಿನ್ನಿರಿ.
ಮಧುಮೇಹಿಗಳಿಗೆ ಒಳ್ಳೆಯದು:
ಮಧುಮೇಹ ರೋಗಿಗಳಿಗೆ ಅವರು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದು ದೊಡ್ಡ ಸಮಸ್ಯೆಯಾಗಿದೆ. ಬಾಳೆಹಣ್ಣು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನವರು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸುತ್ತಾರೆ. ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಇರುವುದರಿಂದ ಮಧುಮೇಹಿಗಳು ತಿನ್ನಲು ಈ ಹಣ್ಣು ಉತ್ತಮವಾಗಿದೆ. ಫೈಬರ್ ಸೇವನೆಯು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದ್ರೋಗಿಗಳಿಗೆ ಒಳ್ಳೆಯದು:
ಹೃದಯ ಸಂಬಂಧಿ ಕಾಯಿಲೆ ಇರುವವರು ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಂ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಹೆಚ್ಚಿನ ಫೈಬರ್ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.