ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ. ಗಲ್ಪ್ ದೇಶಗಳಿಂದ ಎಲ್‌ಪಿಜಿ ಪೂರೈಕೆ ತಾತ್ಕಾಲಿಕವಾಗಿ ನಿಂತಿದ್ದು, ಮುಂದಿನ ಒಂದು ವಾರದಲ್ಲಿ ಬಹುತೇಕ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇಂಧನದ ಆಂತರಿಕ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇರಾನಿನಲ್ಲಿ ಭಾರತದ ಮೂರು ಹಡಗುಗಳಿಗೆ ಪ್ರವೇಶ ನೀಡಿರುವುದು ಮೋದಿ ಸರ್ಕಾರದ ಸಕಾರಾತ್ಮಕ ಪರಿಣಾಮವಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಪ್ರಸ್ತುತ ಎಲ್‌ಪಿಜಿ ಪೂರೈಕೆ ಸಂಬಂಧಿತ ಸಮಸ್ಯೆಯತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದ ಯಾವುದೇ ಭಾಗದಲ್ಲಿ ಏನೇ ಘಟನೆ ನಡೆದರೂ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪರ್ಕಿಸಿ ಟೀಕಿಸುತ್ತಿದ್ದಾರೆ. ಅವರ ಪರಿಸ್ಥಿತಿ ಅಷ್ಟು ಕೆಟ್ಟಾಗಿದೆ ಎಂದು ಆರೋಪಿಸಿದರು.
ಇಡೀ ಜಗತ್ತು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೇಶದ ಹಿತದ ಬಗ್ಗೆ ಯೋಚಿಸಬೇಕು. ಇತರ ದೇಶಗಳಲ್ಲಿ ಏನಾಗುತ್ತಿದೆ ಎಂಬುದನ್ನೂ ಗಮನಿಸಬೇಕು. ಭಾರತದಲ್ಲಿ ಇತರ ರಾಷ್ಟ್ರಗಳಿಗಿಂತ ಉತ್ತಮ ಪರಿಸ್ಥಿತಿ ಇದೆ. ಆದರೆ ಪ್ರತಿಪಕ್ಷಗಳು ಎಲ್ಲ ವಿಚಾರಗಳಲ್ಲೂ ರಾಜಕೀಯ ಮಾಡುವುದನ್ನು ಮುಂದುವರಿಸುತ್ತಿವೆ ಎಂದು ಬೊಮ್ಮಾಯಿ ಹೇಳಿದರು.






