ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?
ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು ಸಾಮಾನ್ಯ. ಕೆಲವರಿಗೆ ಅವು ಸೌಂದರ್ಯದ ಚಿಹ್ನೆಯಾಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಅಸಹ್ಯವಾಗಬಹುದು. ಆದರೆ ಹೊಸದಾಗಿ ಮಚ್ಚೆಗಳು ಕಾಣಿಸಿಕೊಳ್ಳುವುದು ಅಥವಾ ಈಗಿರುವ ಮಚ್ಚೆಗಳು ಗಾತ್ರದಲ್ಲಿ ದೊಡ್ಡದಾಗುವುದು, ಬಣ್ಣ ಬದಲಾಗುವುದು ಜನರಲ್ಲಿ ಆತಂಕ ಮೂಡಿಸುತ್ತದೆ. ಇಂತಹ ಬದಲಾವಣೆಗಳು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ವೈದ್ಯರ ಪ್ರಕಾರ, ಚಿಕ್ಕ ಮಚ್ಚೆಗಳನ್ನು ನಿರ್ಲಕ್ಷ್ಯ ಮಾಡುವ ಅಭ್ಯಾಸ ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮಚ್ಚೆಗಳ ಬಗ್ಗೆ ಅರಿವು ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.
ಮಚ್ಚೆ ಎಂದರೇನು?
ಚರ್ಮದಲ್ಲಿ ಇರುವ ಮೆಲನಿನ್ ಎಂಬ ವರ್ಣದ್ರವ್ಯದ ಕಾರಣದಿಂದ ಹುಟ್ಟುಮಚ್ಚೆಗಳು ರೂಪುಗೊಳ್ಳುತ್ತವೆ. ಮೆಲನೋಸೈಟ್ಸ್ ಎಂಬ ಚರ್ಮಕೋಶಗಳು ಒಂದೇ ಸ್ಥಳದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಒಟ್ಟುಗೂಡಿ ಹೆಚ್ಚಿನ ವರ್ಣದ್ರವ್ಯವನ್ನು ಉತ್ಪಾದಿಸಿದಾಗ ಮಚ್ಚೆಗಳು ಸೃಷ್ಟಿಯಾಗುತ್ತವೆ. ಇವು ಕಪ್ಪು, ಕಂದು, ತಿಳಿ ಗುಲಾಬಿ ಅಥವಾ ನೀಲಿ ಬಣ್ಣದಲ್ಲಿರಬಹುದು.
ದೇಹದಲ್ಲಿ ಮಚ್ಚೆಗಳು ಹೆಚ್ಚಾಗಲು ಕಾರಣಗಳು
ವೈದ್ಯರ ಮಾಹಿತಿ ಪ್ರಕಾರ, ಒಬ್ಬ ವ್ಯಕ್ತಿಯ ದೇಹದ ಮೇಲೆ ಸಾಮಾನ್ಯವಾಗಿ 10 ರಿಂದ 40 ಮಚ್ಚೆಗಳು ಇರಬಹುದು. ಇದಕ್ಕಿಂತ ಹೆಚ್ಚಿದ್ದರೆ ಎಚ್ಚರಿಕೆ ಅಗತ್ಯ.
ಕುಟುಂಬದ ಸದಸ್ಯರಲ್ಲಿ ಹೆಚ್ಚಿನ ಮಚ್ಚೆಗಳಿದ್ದರೆ, ಅದು ಮುಂದಿನ ಪೀಳಿಗೆಗೂ ವರ್ಸಾಯಾಗುವ ಸಾಧ್ಯತೆ ಇದೆ. ಪ್ರೌಢಾವಸ್ಥೆ ಹಾಗೂ ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನು ಬದಲಾವಣೆಗಳು ಹೊಸ ಮಚ್ಚೆಗಳು ಮೂಡುವುದಕ್ಕೆ ಕಾರಣವಾಗಬಹುದು.
ಸೂರ್ಯನಿಂದ ಬರುವ ಅಲ್ಟ್ರಾ ವೈಯೊಲೆಟ್ ಕಿರಣಗಳು ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಈ ಕಾರಣದಿಂದ ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವ ದೇಹದ ಭಾಗಗಳಲ್ಲಿ ಮಚ್ಚೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಚರ್ಮದಲ್ಲಿ ಆಗುವ ಬದಲಾವಣೆಗಳೂ ಮಚ್ಚೆಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಮಚ್ಚೆಗಳ ಗಾತ್ರ, ಬಣ್ಣ ಅಥವಾ ಆಕಾರದಲ್ಲಿ ಅಚಾನಕ್ ಬದಲಾವಣೆ ಕಂಡುಬಂದರೆ, ರಕ್ತಸ್ರಾವವಾಗಿದ್ರೆ, ನೋವು ಅಥವಾ ಕಿಚ್ಚು ಕಂಡುಬಂದರೆ ತಕ್ಷಣ ಚರ್ಮ ತಜ್ಞರನ್ನು ಸಂಪರ್ಕಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಚರ್ಮವನ್ನು ಸೂರ್ಯನ ತೀವ್ರ ಕಿರಣಗಳಿಂದ ರಕ್ಷಿಸಿಕೊಳ್ಳುವುದು, ಸನ್‌ಸ್ಕ್ರೀನ್ ಬಳಸುವುದು ಹಾಗೂ ಚರ್ಮದ ಮೇಲೆ ಕಾಣಿಸುವ ಯಾವುದೇ ಅಸಾಮಾನ್ಯ ಬದಲಾವಣೆಗಳನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.






