ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು, 27ಕ್ಕೂ ಹೆಚ್ಚು ಮಂದಿ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ವಿಭಾಗದ ಸದಸ್ಯರೆಂದು ಮೂಲಗಳು ತಿಳಿಸಿವೆ.
ನವದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾದ ಕೆಲವು ದಿನಗಳಲ್ಲೇ ಮತ್ತೊಂದು ಸ್ಫೋಟ ಸಂಭವಿಸಿರುವುದು ಭದ್ರತಾ ಇಲಾಖೆಯಲ್ಲಿ ಆತಂಕ ಹೆಚ್ಚಿಸಿದೆ.
ತನಿಖಾ ಮೂಲಗಳ ಪ್ರಕಾರ, ಈ ಸ್ಫೋಟಕ್ಕೂ ದೆಹಲಿ ಸ್ಫೋಟಕ್ಕೂ ನೇರ ಸಂಬಂಧ ಇರಬಹುದೆಂದು ಶಂಕಿಸಲಾಗಿದೆ. ಹರಿಯಾಣದ ಫರಿದಾಬಾದಿನಲ್ಲಿ ಬಂಧಿಸಲಾದ ಉಗ್ರ ಮುಜಮ್ಮಿಲ್ ಗನೈನ ಬಾಡಿಗೆ ಮನೆಯಿಂದ ವಶಪಡಿಸಿಕೊಂಡಿದ್ದ 360 ಕಿಲೋಗ್ರಾಂ ಸ್ಫೋಟಕ ವಸ್ತುಗಳಲ್ಲಿ ಒಂದು ಭಾಗವನ್ನು ಮಾದರಿ ಪರಿಶೀಲನೆಗಾಗಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿತ್ತು. ಈ ಸಂಗ್ರಹಿತ ಸ್ಫೋಟಕ ವಸ್ತುಗಳಿಂದಲೇ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿರಬಹುದು ಎಂಬುದು ಪ್ರಾಥಮಿಕ ತನಿಖೆಯ ಮಾಹಿತಿ.






