ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ

0
72

ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ

ಬೆಂಗಳೂರು: ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಕೆಲವು ಹೋಟೆಲ್‌ಗಳು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.

ಗ್ಯಾಸ್ ಕೊರತೆ ಹಾಗೂ ಬೆಲೆ ಏರಿಕೆಯನ್ನು ನೆಪವಿಟ್ಟು, ಕೆಲ ಹೋಟೆಲ್‌ಗಳು ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ’ ಸೇರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೆನ್ನೈನಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ಸೇವಿಸಿದ ಬಳಿಕ ಬಿಲ್ ಪಡೆದಾಗ, ಜಿಎಸ್‌ಟಿ ಜೊತೆಗೆ ‘ಗ್ಯಾಸ್ ಶುಲ್ಕ’ ಎಂದು 9.52 ರೂ. ಹೆಚ್ಚುವರಿ ಸೇರಿಸಿರುವುದು ಕಂಡುಬಂದಿದೆ. ಗ್ರಾಹಕರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವ್ಯಾಪಕವಾಗಿ ಹರಿದಾಡುತ್ತಿದೆ.

ಇದೇ ರೀತಿಯ ಘಟನೆ ಬೆಂಗಳೂರಲ್ಲೂ ವರದಿಯಾಗಿದೆ. ನಗರದ ಒಂದು ಹೋಟೆಲ್‌ನಲ್ಲಿ ಗ್ರಾಹಕರೊಬ್ಬರಿಗೆ ‘ಗ್ಯಾಸ್ ಚಾರ್ಜ್’ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂ. ವಸೂಲಿ ಮಾಡಲಾಗಿದೆ.

ಕೆಲವು ಹೋಟೆಲ್‌ಗಳ ಬಿಲ್‌ಗಳಲ್ಲಿ ‘ಗ್ಯಾಸ್ ಶುಲ್ಕ’ ಎಂದು ಸ್ಪಷ್ಟವಾಗಿ ನಮೂದಿಸದಿದ್ದರೂ, ಎಲ್‌ಪಿಜಿ ಪೂರೈಕೆ ಸಮಸ್ಯೆಯ ನೆಪವೊಡ್ಡಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.