ನಿರ್ದೇಶಕರು ಕತೆ ಹೇಳುವಾಗ ನಿರ್ಮಾಪಕರು, ನಟರು ನಿದ್ರೆ ಹೋಗುವ ದೃಶ್ಯಗಳು ಸಿನಿಮಾಗಳಲ್ಲಿ ಹಾಸ್ಯ ದೃಶ್ಯಗಳಾಗಿ ಸಾಕಷ್ಟು ಬಾರಿ ಬಳಕೆ ಆಗಿವೆ. ಹಾಗೆಂದು ಇವು ಸುಳ್ಳಲ್ಲ. ಹಲವು ನಿರ್ದೇಶಕರು ಆ ಸಂದರ್ಭವನ್ನು ನಿಜವಾಗಿಯೂ ಎದುರಿಸಿದ್ದಾರೆ.
ಖ್ಯಾತ ನಟರುಗಳೇ ಒಮ್ಮೊಮ್ಮೆ ಕತೆ ಕೇಳುವ ಸಮಯದಲ್ಲಿ ನಿದ್ದೆಗೆ ಜಾರಿ ಬಿಡುತ್ತಾರೆ. ನಿರ್ಮಾಪಕರದ್ದೂ ಇದೇ ಕತೆ. ಹಲವು ನಿರ್ದೇಶಕರುಗಳು ತಮಗೆ ಆದ ಇಂಥಹಾ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಖ್ಯಾತ ನಿರ್ದೇಶಕರು ಸಹ ಇಂಥಹಾ ಆರಂಭದಲ್ಲಿ ಇಂಥಹಾ ಅವಮಾನಗಳನ್ನು ಅನುಭವಿಸಿದವರೆ.
ತೆಲುಗಿನ ಸೂಪರ್ ಹಿಟ್ ನಿರ್ದೇಶಕರಲ್ಲಿ ಒಬ್ಬರಾದ ತ್ರಿವಿಕ್ರಮ್ ಶ್ರೀನಿವಾಸ್ ಸಹ ಇಂಥಹುದೇ ಸಂದರ್ಭ ಎದುರಿಸಿದ್ದರಂತೆ. ಸೂಪರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಸಿನಿಮಾ ಕತೆ ಹೇಳಬೇಕಾದರೆ ಅವರು ನಿದ್ದೆಗೆ ಜಾರಿದ್ದಾರೆ. ಆದರೆ ಅಂದು ಪವನ್ ನಿದ್ದೆಗೆ ಜಾರಿದ್ದರಿಂದಲೇ ದೊಡ್ಡ ಹಿಟ್ ಒಂದನ್ನು ಮಿಸ್ ಮಾಡಿಕೊಂಡಿದ್ದಾರೆ.
2005 ರಲ್ಲಿ ನಿರ್ದೇಶಕ ತ್ರಿವಿಕ್ರಮ್ ತಮ್ಮ ನಿರ್ದೇಶನದ ಎರಡನೇ ಸಿನಿಮಾವನ್ನು ಪವನ್ ಕಲ್ಯಾಣ್ ಜೊತೆಗೆ ಮಾಡುವ ಆಸೆಯಿಂದ ಪವನ್ ಕಲ್ಯಾಣ್‌ಗೆ ಕತೆ ಹೇಳಿದ್ದರು. ಆದರೆ ಕತೆ ಕೇಳುತ್ತಾ-ಕೇಳುತ್ತಾ ಪವನ್ ಕಲ್ಯಾಣ್ ನಿದ್ದೆ ಮಾಡಿಬಿಟ್ಟರಂತೆ. ಆ ಕತೆಯನ್ನೂ ಅವರು ಒಪ್ಪಿಕೊಳ್ಳಲಿಲ್ಲ. ಆದರೆ ಆ ಸಿನಿಮಾದಲ್ಲಿ ಬೇರೊಬ್ಬರು ನಟಿಸಿ ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು.
ಪವನ್ ಕಲ್ಯಾಣ್ ಹೀಗೆ ನಿದ್ದೆ ಹೋಗಿದ್ದರಿಂದ ಆ ಕತೆ ಮಹೇಶ್ ಬಾಬು ಬಳಿಗೆ ಹೋಯಿತು. ಬುದ್ಧಿವಂತ ಮಹೇಶ್ ಬಾಬು ನಿದ್ದೆ ಮಾಡಲಿಲ್ಲ. ಕತೆ ಕೇಳಿ ಒಪ್ಪಿಕೊಂಡು ನಟಿಸಿದರು. ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ಆ ಸಿನಿಮಾದ ಹೆಸರು ‘ಅತಡು’. ಮಹೇಶ್, ಸೋನು ಸೂದ್, ತ್ರಿಷಾ, ಪ್ರಕಾಶ್ ರೈ, ನಾಸರ್ ಮುಖ್ಯ ಭೂಮಿಕೆಯಲ್ಲಿದ್ದ ಸಿನಿಮಾ ಅದ್ಭುತ ಆಕ್ಷನ್-ಥ್ರಿಲ್ಲರ್ ಸಿನಿಮಾ.