ಮಂಡ್ಯ ದಲ್ಲಿ ಇಂದು ಹೆಲ್ಮೆಟ್ ಹಾಕದಿದ್ದ ವಿಚಾರಕ್ಕೆ ಯುವತಿ ಹಾಗೂ ಪೊಲೀಸರ ನಡುವೆ ನಡು ರಸ್ತೆಯಲ್ಲೇ ವಾಗ್ವಾದ ನಡೆದು, ಯುವತಿಯೊಬ್ಬಳಿಗೆ ಮಹಿಳಾ PSI ಒಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿದೆ. ಮಾಡೆಲ್ ಕಂ ವಿದ್ಯಾರ್ಥಿನಿ ಸುಷ್ಮಿತಾ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದಳು. ಈ ವೇಳೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೂರ್ವ ಠಾಣೆಯ ಅಪರಾಧ ವಿಭಾಗದ ಮಹಿಳಾ PSI ಸುಷ್ಮಿತಾಳ ಬೈಕ್ ನಿಲ್ಲಿಸಿ, ದಂಡ ಕಟ್ಟುವಂತೆ ತಾಕೀತು ಮಾಡಿದ್ದಾರೆ. ದಂಡ ಕಟ್ಟಲು ಹಣವಿಲ್ಲ. ಫೋನ್ ಪೇ ಅಥವಾ ಗೂಗಲ್ ಪೇ ಮಾಡ್ತೇನೆ. ಇಲ್ಲವೇ ಯಾರಿಂದಲಾದರೂ ತರಿಸಿಕೊಡ್ತೀನಿ ಕಾಯಿರಿ ಎಂದು ಉತ್ತರಿಸಿದ್ದಾಳೆ.
ಈ ವೇಳೆ ಏಕಾಏಕಿ ಸಿಬ್ಬಂದಿ ಮೂಲಕ ಆಕೆಯ ಬೈಕ್ ಅನ್ನು ಠಾಣೆಗೆ ಎಳೆದೊಯ್ಯಲು ಯತ್ನಿಸಿದಾಗ ಸುಷ್ಮಿತಾ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸುಷ್ಮಿತಾಗೆ PSI ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸುಷ್ಮಿತಾ PSI ವಿರುದ್ಧ ನಡು ರಸ್ತೆಯಲ್ಲೇ ವಾಗ್ದಾಳಿ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ಸುಷ್ಮಿತಾ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕ್ತಿದ್ದು, ಪೊಲೀಸರನ್ನ ಪ್ರಶ್ನೆ ಮಾಡೋದೇ ತಪ್ಪಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.
ಈ ಘಟನೆ ನಡೆಯೋ ವೇಳೆ ಹಲವು ಸಾರ್ವಜನಿಕರು ಸ್ಥಳದಲ್ಲಿದ್ದರೂ ಕೂಡ ಆ ಯುವತಿ ಸಹಾಯಕ್ಕೆ ಯಾರೂ ಬಾರದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.