ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

0
368

ಕತೆ ಕತೆ ಕಾರಣ, ಇವಳಿಗೇನ್ ಗೊತ್ತು ಪುರಾಣ? ಅಂತ ಕೆಲವರು ಅನ್ಕೊಳ್ತಾರೆ. ಆದ್ರೆ ಗೆಳೆತನದಲ್ಲಿ ಇದು ಕಾಮನ್ ಅಲ್ವೇ? ಗೆಳೆತನದಲ್ಲಿ ಜಗಳ, ಮುನಿಸು ಸಹಜ. ಅವುಗಳನ್ನೆಲ್ಲ ದಾಟಿ ನಡೆದರೆ ಸುಂದರ ಪಯಣ ಕಾಣಲು ಸಾಧ್ಯ. ಅವಳಿಗೆ ಈ ಮಾತನ್ನ ಜಗಳವಾದಾಗ್ಲೆಲ್ಲ ಹೇಳಿದ್ದೇನೆ. 

ಅವಳೇ ನನ್ನ ಗೆಳತಿ ಅನಿತಾ, ನಾಲ್ಕನೇ ಕ್ಲಾಸಿಂದ ಒಟ್ಟಿಗೆ ಶಾಲೆಗೆ ಹೋಗ್ತಿದ್ವು, ಇಬ್ಬರೂ ಸೇರಿ ಸವೆಸಿದ್ದು ಒಂದೇ ದಾರಿ. ಕನ್ನಡ ಶಾಲೆಯಿಂದ ಬೆಳೆದ ನಂಟು ನಮ್ಮದು, ಕಾಲೇಜು ಹಂತದವರೆಗೆ ಬಂದು ತಲುಪಿದೆ. ಮಳೆಗಾಲದಲ್ಲಂತೂ ಎದ್ದು ಬಿದ್ದು ಕೈ ಹಿಡಿದು ಬಸ್ ಹತ್ತಿ ಕಾಲೇಜು ತಲುಪುವುದೇ ಮಹಾನ್ ಸಾಹಸ. ಆಪ್ತ ಗೆಳತಿಯರೊಂದಿಗೆ ಆಟ-ಓಟ-ಪಾಠ ಎಂದ್ರೆ ಇಷ್ಟ. ಇಬ್ಬರೂ ಕಾಲೇಜಿಗೆ ಒಟ್ಟಿಗೆ ಹೋಗಿ ಬರುವೆವು. ಕಾಲೇಜಿನಲ್ಲಿ, ಒಟ್ಟಿಗೆ ಕುಳಿತುಕೊಳ್ಳುವೆವು. ಮತ್ತೆ ಹಿಂತಿರುಗಿದರೆ ಒಟ್ಟಿಗೆ ಮನೆ ತಲುಪುವೆವು. ಮನೆ ಸಹಿತ ಅಕ್ಕ-ಪಕ್ಕದಲ್ಲಿವೆ. ತುಂಬಾ ಮಾತನಾಡುವುದು, ಎಲ್ಲರನ್ನೂ ಬೇಗ ಹಚ್ಚಿಕೊಳ್ಳುವುದು, ನಗುವುದು, ಮಾತನಾಡಿಸುವುದು ಆಕೆಯ ಗುಣ. ಹಾಗಾಗಿಯೇ ನಂಗೂ ಇಷ್ಟ ಅವಳಂದ್ರೆ. ಅವಳಿಗೂ ನಾನಂದ್ರೆ ಜೀವ. ಆದರೆ ಅವಳಿಗೆ ತುಂಬಾ ಗೆಳತಿಯರಿದ್ದಾರೆ. ನನಗೆ ಅವಳೊಬ್ಳೇ ಗೆಳತಿ!

ಅಂದು ಮಳೆಗಾಲದ ಸಮಯ. ತುಂತುರು ಮಳೆಯಲ್ಲಿ ನೆನೆಯುತ್ತಾ ಮಧ್ಯಾಹ್ನ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯವದು. ನಮ್ಮೂರಿನ ಮುಂದಿನ ಊರಿನವಳೊಬ್ಬಳು ನಮ್ಮದೇ ಕ್ಲಾಸಿನವಳು ಹೋಗಬೇಕಾದ್ರೆ, ಕ್ಲಾಸ್ ಮುಗಿಸಿ ಬರುವಾಗಲೂ ಸಿಗ್ತಾಳೆ. ಆಕೆ ಒಳ್ಳೆಯವಳು. ಆದರೆ ನಮ್ಮಿಬ್ಬರ ಮಧ್ಯೆ ಬಂದಿದ್ದಾಳೆ ಅನ್ನೋ ಕೊರಗಿದೆ.

ಈಗೀಗ ಅನಿತ ನನಗಿಂತ ಹೆಚ್ಚಾಗಿ ಅವಳ ಜೊತೆ ಬೆರಿತಾಳೆ. ಕ್ಲಾಸಿನಲ್ಲಿ ಹೇಳಿಕೊಟ್ಟ ಪಾಠದ ಚರ್ಚೆಯನ್ನ ಅವಳ ಜೊತೆ ನಡೆಸ್ತಾಳೆ. ಬಸ್ಸಿನಲ್ಲಿ ಅನಿತಾಳ ಪಕ್ಕ ಅವಳೇ ಕೂರ್ತಾಳೆ. ಇದೆಲ್ಲ ನನಗೆ ಬೇಸರ ತರ್ತಾ ಇದೆ. ಒಂದೊಂದ್ಸಲ ಅನಿತಾ ನನ್ನ ಫ್ರೆಂಡ್ ಅಲ್ವೇ ಅಲ್ಲ.. ಅನ್ನುವಷ್ಟರ ಮಟ್ಟಿಗಿನ ಕೋಪ. ಇನ್ನು ಕೆಲವೊಮ್ಮೆ ಅವರ ಮಧ್ಯದ ಗೆಳೆತನವನ್ನ ನಾನು ತಪ್ಪು ತಿಳಿಯುತ್ತಿದ್ದೇನೆಯೇ? ಎಂಬ ತವಕ. ಇನ್ನೊಮ್ಮೆ, ಅನಿತಾಳು ನನ್ನ ಗೆಳೆತನವನ್ನ ಬಿಟ್ಟೋಗ್ತಾಳೆ ಅನ್ನೋ ಆತಂಕ. ಇವೆಲ್ಲದರ ಮಧ್ಯೆ ಸೋತು ಮಳೆಯಲ್ಲಿ ನೆನಯುತ್ತ ನಿಂತಿದ್ದೇನೆ. ಮಳೆಯಲ್ಲಿ ನೆಂದರೆ, ರಭಸದ ನೀರಿಗೆ ತಲೆ ಭಾರ ಹಗುವಾಗುತ್ತೇನೋ.. ಎಂಬ ನಂಬಿಕೆ. ಎಲ್ಲದಕ್ಕೂ ಸಮಯವೇ ಉತ್ತರಿಸುತ್ತೆ ಎಂದು ಸುಮ್ಮನಾಗಿದ್ದೇನೆ. ಕಾದು ನೋಡಬೇಕಿದೆ ಅನಿತಾಳ ನಿರ್ಧಾರಕ್ಕೆ !
ಬಿಟ್ಟೋಗ್ಬೇಡ ಗೆಳತಿ, ನಿನ್ನವಳು ನಾನು..

ಶ್ರುತಿ ಹೆಗಡೆ. ಹುಳಗೋಳ

LEAVE A REPLY

Please enter your comment!
Please enter your name here