ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

0
691

 

ಜಗತ್ತಿನಲ್ಲಿ ಗೆಳೆತನವೆಂಬುದು ತುಂಬಾ ಮಹತ್ವವಾದ ಸ್ಥಾನವನ್ನು ಹೊಂದಿದೆ. ಪ್ರತಿಯೊಬ್ಬರ ಜೀವನದಲ್ಲೂ ಗೆಳೆಯರು ಇದ್ದೇ ಇರುತ್ತಾರೆ. ಗೆಳೆಯರಿಲ್ಲದೆ ಯಾರೂ ಇರಲು ಸಾಧ್ಯವಿಲ್ಲ ಬಿಡಿ. ಕೆಲವು ಗೆಳೆತನಗಳು ಅವರ ನಡುವಿನ ತಪ್ಪು ತಿಳುವಳಿಕೆಗಳಿಂದ ಅಥವಾ ಇತರ ಸಮಸ್ಯೆಗಳಿಂದಾಗಿ ನಡು ಹಾದಿಯಲ್ಲಿ ಕೊನೆಗೊಳ್ಳುತ್ತವೆ. ಅದೇ ರೀತಿ ಇನ್ನೊಂದೆಡೆ ಜೀವನದ ಉದ್ದಕ್ಕೂ ಒಳ್ಳೆಯ ರೀತಿಯಿಂದ ಮುಂದುವರಿಯುವಂತಹ ಗೆಳೆತನಗಳೂ ಕೂಡಾ ಇವೆ.
ಎಲ್ಲರೂ ಸ್ಕೂಲ್ ಲೈಫಲ್ಲಿ ಆಗೋ ಫ್ರೆಂಡ್ಶಿಪ್ ಲೈಫ್ ಲಾಂಗ್ ಇರುತ್ತದೆ ಅಂದೆಲ್ಲಾ ಹೆಳುತ್ತಾರೆ. ಆದರೆ ನನಗೇನೋ ಕಾಲೇಜಲ್ಲಿ ಆಗೋ ಫ್ರೆಂಡ್ಸ್ ಕೊನೇ ತನಕ ಉಳಿಯುತ್ತಾರೆ ಎಂದು ಅನಿಸುತ್ತಿದೆ. ಎಲ್ಲಾ ಗೆಳೆತನವಲ್ಲದಿದ್ದರೂ ಕೆಲವು ಮಾತ್ರ ಮರೆಯಲಾಗದ ನೆನಪುಗಳನ್ನು ತಂದುಕೊಡುವಂತಹ ಗೆಳೆತನಗಳು. ಯಾಕೆಂದರೆ ನನಗೂ ಮೊದಲು ಅನೇಕ ಗೆಳೆಯರಿದ್ದರು. ಆದರೆ ಜೊತೆಗೇ ಇದ್ದುಕೊಂಡು ಮೋಸ ಮಾಡಿದವರೇ ಹೆಚ್ಚು. ಮೂರೋ ನಾಲ್ಕೋ ಮಂದಿಯ ಗ್ಯಾಂಗ್, ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಬಡ್ಡೀಸ್, ಫ್ರೆಂಡ್ಸ್ ಫಾರೆವರ್ ಎಂದೆಲ್ಲಾ ಬಾಯಲ್ಲಿ ಕೊಚ್ಚಿಕೊಳ್ಳುವ ಗೆಳೆಯರು. ಪೂರ್ತಿ ಲೈಫ್ ಇದೇ ತರ ಇರೋಣ ಎಂಬ ಮಾತುಗಳೆಲ್ಲ ಕೇವಲ ಮಾತುಗಳಾಗಿಯೇ ಉಳಿದ ಗೆಳೆತನಗಳು, ಫ್ರೆಂಡ್ಸ್ ಫಾರೆವರ್ ಹೆಸರಿನ ವಾಟ್ಸಾಪ್ ಗ್ರೂಪು. ಈಗ ಆ ಮಾತುಗಳು ಆಡಿದವರ ಜೊತೆಗೆ ಆ ಗ್ರೂಪುಗಳೂ ಮಾಯವಾಗಿವೆ.
ಯಾವುದೇ ಸಂಬಂಧದಲ್ಲಿ ನಂಬಿಕೆಯೆಂಬುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನಂಬಿಕೆಯಿಲ್ಲದ ಸಂಬಂಧಗಳು ಖುಷಿಯಲ್ಲಿ ಮುಂದುವರಿಯಲೂ ಎಂದಿಗೂ ಸಾಧ್ಯವಿಲ್ಲ. ನನ್ನ ಗೆಳೆಯರಲ್ಲಿ ನನ್ನನ್ನು ನಂಬಿದವರಿಗಿಂತ ಉಳಿದವರನ್ನು ನಂಬಿದವರೇ ಅಧಿಕ. ಉಳಿದವರ ಜೊತೆ ಸೇರಿ ನನ್ನ ನಂಬಿಕೆಗೆ ಮೋಸ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚು.

ಇಷ್ಟೆಲ್ಲಾ ನೋವುಗಳನ್ನು ನೋಡಿದ ನಾನು ಗೆಳೆತನದ ಮೇಲಿನ ನಂಬಿಕೆಯನ್ನೇ ಕಳಕೊಂಡಿದ್ದೆ ಆ ಸಮಯದಲ್ಲಿ ನನಗೆ ಸಿಕ್ಕಂತಹಾ ಇಬ್ಬರು ನನ್ನಲ್ಲಿ ಗೆಳೆತನ ಎಂಬ ಸಂಬಂಧದ ಮೇಲೆ ಪುನಃ ನಂಬಿಕೆ ಬರುವಂತೆ ಮಾಡಿದರು. ಅವರಿಬ್ಬರು ನನ್ನ ಜೀವನದಲ್ಲಿ ಬಂದ ಮೇಲೆ ನನ್ನ ಎಲ್ಲಾ ಕಷ್ಟಗಳು ನನಗೆ ಏನೂ ಅಲ್ಲ ಎಂದು ಅನಿಸಲು ಶುರುವಾಯಿತು. ಉಳಿದವರನ್ನು ನಂಬದೆ ನನ್ನನ್ನು ನಂಬಿ ಕಷ್ಟಗಳನ್ನು ಎದುರಿಸಲು ಕಲಿಸಿದವರು ಇವರು. ನನ್ನ ಕಷ್ಟಗಳನ್ನು ಅವರ ಕಷ್ಟಗಳಾಗಿ ಕಂಡು ನನ್ನ ಮನಸನ್ನು ಹಗುರಗೊಳಿಸಿದರು.
ನನ್ನ ಮುಖ ಸಪ್ಪಗಾಗಲು ಅವಕಾಶವೇ ಮಾಡಿ ಕೊಡದ ಇವರನ್ನು ನನ್ನ ಗುಟ್ಟಿನ ಪೆಟ್ಟಿಗೆಗಳು ಎಂದು ಕರೆದರೆ ತಪ್ಪಾಗದು. ಯಾವುದೇ ಮುಚ್ಚುಮರೆಗಳಿಲ್ಲದೆ, ಒಬ್ಬರನ್ನು ಒಬ್ಬರು ಪಿಟ್ಟೆ, ಕೇಕು, ಚಿಂಗಿ ಎಂದು ಗೇಲಿ ಮಾಡಿಕೊಂಡು ಹರಟೆ ಹೊಡೆದುಕೊಂಡು ಕಾಲ ಕಳೆಯುತ್ತೇವೆ. ನಮ್ಮದೇ ಏನೇನೋ ಗುಟ್ಟುಗಳು ಅದರ ಜೊತೆಗೆ ಕೋಡ್ ವರ್ಡ್ಸ್ಗಳು ಅವುಗಳು ನಮ್ಮನ್ನು ಹೊರತುಪಡಿಸಿ ಇನ್ಯಾರಿಗೂ ಅರ್ಥವಾಗಲು ಸಾಧ್ಯವೇ ಇಲ್ಲ.
ಕೆಲವೊಮ್ಮೆ ಚಿಕ್ಕ ಪುಟ್ಟ ಜಗಳಗಳು ಆದರೂ ಅವೆಲ್ಲವೂ ಕೆಲ ಕ್ಷಣಗಳಿಗೆ ಮಾತ್ರ. ನನ್ನ ಖುಷಿಯ ಕ್ಷಣಗಳಿಗಿಂತಲೂ ಜಾಸ್ತಿ ನನ್ನ ದುಃಖದ ಕ್ಷಣಗಳಲ್ಲಿ ನನ್ನೊಂದಿಗಿರುವವರು ಇವರು. ನಕ್ಕಾಗ ನನ್ನ ಜೊತೆಗೆ ಅವರೂ ನಗುತ್ತಾರೆ ಅತ್ತಾಗ ಕಣ್ಣೀರು ಒರೆಸಿ ಸಾಂತ್ವನವನ್ನು ನೀಡುತ್ತಾರೆ ಮತ್ತು ಸೋತಾಗ ಮತ್ತೆ ಭರವಸೆಯನ್ನು ಮೂಡಿಸುತ್ತಾರೆ. ನಿಜಕ್ಕೂ ಇಂಥಾ ಗೆಳೆಯರು ಸಿಕ್ಕಿದ ನಾನೂ ತುಂಬಾ ಲಕ್ಕೀ.
ಕಾಲೇಜು ಲೈಫಲ್ಲಿ ಎಷ್ಟೋ ಫ್ರೆಂಡ್ಸ್ಗಳು ಸಿಕ್ಕಿದ್ದರೂ ಇವರಂಥಾ ಗೆಳೆಯರು ಸಿಕ್ಕಿದ್ದು ಇದೇ ಮೊದಲು. ಅದೇನೋ ಹೇಳುತ್ತಾರಲ್ಲ ಗ್ಯಾಂಗ್ ಆಫ್ ತ್ರೀ ಗರ್ಲ್ಸ್ ಈಸ್ ದಿ ಬೆಸ್ಟ್ ಎಂಬ ಮಾತಿನ ಮೇಲೆ ಇವರು ಸಿಕ್ಕ ಮೇಲೆ ನಂಬಿಕೆ ಮೂಡಿದೆ. ಒಬ್ಬರನ್ನು ಒಬ್ಬರು ಬಿಟ್ಟುಕೊಡದೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಪ್ರೋತ್ಸಹಿಸತ್ತಾ ಇರುವ ನಮ್ಮ ಗೆಳೆತನದಲ್ಲಿ ಉಳಿದವರಂತೆ ಯವುದೇ ರೀತಿಯ ಪ್ರಾಮಿಸ್‌ಗಳು ಇಲ್ಲ. ಆದರೂ ಜೀವನದ ಉದ್ದಕ್ಕೂ ಈ ಗೆಳೆತನ ಹೀಗೆ ಇರುತ್ತದೆಯೆಂಬ ನಂಬಿಕೆ ಮೂವರಲ್ಲೂ ಇದೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ಈ ನಮ್ಮ ಸ್ನೇಹ ಎಂದೆಂದಿಗೂ ಶಾಶ್ವತ.

ಪಲ್ಲವಿ ಕೋಂಬ್ರಾಜೆ

LEAVE A REPLY

Please enter your comment!
Please enter your name here