ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದಿದೆ. ಇಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನವೆಂಬರ್ 20ರಂದು ಹೊಸ ಸರ್ಕಾರ ರಚನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸ ವಿಧಾನಸಭೆ ರಚನೆಯಾದ ನಂತರ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಮತ್ತು ಸರ್ಕಾರ ರಚಿಸಲು ಈ ರಾಜೀನಾಮೆ ಅನಿವಾರ್ಯವಾಗಿತ್ತು. ಈಗಾಗಲೇ ರಾಜ್ಯಪಾಲರು ಚುನಾಯಿತ ಸದಸ್ಯರ ಪಟ್ಟಿಯನ್ನು ಸ್ವೀಕರಿಸಿದ್ದು, ಆಹ್ವಾನ ನೀಡಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ.
ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ “ಅಗತ್ಯ ಕ್ರಮ” ತೆಗೆದುಕೊಳ್ಳಲು ನಿತೀಶ್ ಕುಮಾರ್ ಅವರಿಗೆ ಸಂಪುಟ ಅಧಿಕಾರ ನೀಡಿತ್ತು. ಅದರೆ ಒಂದೇ ದಿನದಲ್ಲಿ ರಾಜೀನಾಮೆ ಸಲ್ಲಿಕೆ ನಡೆದಿದೆ. ಎನ್‌ಡಿಎ ಒಳಗೆ ಈಗ ಮುಖ್ಯ ಪ್ರಶ್ನೆ ಎಂದರೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಎನ್‌ಡಿಎ ಒಟ್ಟು 243 ಸ್ಥಾನಗಳಲ್ಲಿ 208ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಸಾಧಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕಾಂಗಿಯಾಗಿ 89 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) 85 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ.






