ಕಳೆದ ವಾರ ತೆರೆ ಕಂಡಿದ್ದ ‘ರಗಡ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ನಾಯಕ ವಿ ನೋದ್ ಪ್ರಭಾಕರ್ ಏಯ್ಟ್ ಪ್ಯಾಕ್ ಮಾಡಿಕೊಂಡಿದ್ದಾರೆ. ಇದರಿಂದಾಗಿಯೇ ಅವರಿಗೆ ಮತ್ತಷ್ಟು ಅವಕಾಶಗಳು ಲಭಿಸುತ್ತಿವೆ.
ಹೌದು, ‘ರಗಡ್’ ಚಿತ್ರದಲ್ಲಿನ ವಿನೋದ್ ಪಾತ್ರವನ್ನು ನೋಡುತ್ತಿರುವ ಪ್ರೇಕ್ಷಕರು ದಿಲ್ ಖುಷ್ ಆಗಿ ಜೈಕಾರ ಹಾಕುತ್ತಿದ್ದಾರೆ.
ಹೀಗಾಗಿ ಎಂಟು ಪ್ಯಾಕ್ ಗೆ ಹುರಿಗಟ್ಟಿಸಿದ ನಂತರ ಅವರಿಗೆ ನಿಜಕ್ಕೂ ಅದೃಷ್ಟ ಖುಲಾಯಿಸಿದೆ ಎಂದು ಹೇಳಬಹುದು. ಈ ಪರಿ ಬಾಡಿ ಬಿಲ್ಡ್ ಮಾಡಿಕೊಂಡ ಕಾರಣಕ್ಕಾಗಿಯೇ ಅವರಿಗೀಗ ಸಾಕಷ್ಟು ಆಯಕ್ಷನ್ ಓರಿಯೆಂಟೆಡ್ ಸಿನಿಮಾಗಳ ಅವಕಾಶಗಳು ಬರುತ್ತಿವೆ.
ಸದ್ಯ ವಿನೋದ್ ‘ಫೈಟರ್’, ‘ಶ್ಯಾಡೋ’ ಹಾಗೂ ‘ಸಿ.ಎಂ’ ಚಿತ್ರಗಳಲ್ಲಿ ನಟಿಸುತ್ತಿದ್ದು, ‘ರಗಡ್’ ಸಿನಿಮಾ ನೋಡುಗರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ಅವರಿಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದು, ಅವುಗಳಲ್ಲಿ ಆಯಕ್ಷನ್ ಕಥೆಯೇ ಪ್ರಧಾನ ಎನ್ನುವ ಕಾರಣಕ್ಕಾಗಿ ಐದಕ್ಕೂ ಹೆಚ್ಚು ಸಿನಿಮಾಗಳನ್ನು ಕತೆ ಕೇಳಿ ತಿರಸ್ಕರಿಸಿದ್ದಾರೆ.
ಸದ್ಯಕ್ಕೆ ವಿನೋದ್ ನಿರ್ದೇಶಕ ಕಾಡು ಶಿವು ಸೇರಿ ಮತ್ತೊಬ್ಬರ ಹೊಸಬರ ಜೊತೆಗಿನ ಎರಡು ಸಿನಿಮಾಗಳಿಗೆ ಓಕೆ ಹೇಳಿದ್ದು, ಆ ಸಿನಿಮಾಗಳು ಮೇ ತಿಂಗಳಿನಿಂದ ಶುರುವಾಗಲಿದೆ. ಸದ್ಯ ‘ಆಟೋರಾಜ’ ಚಿತ್ರದ ಖ್ಯಾತಿಯ ಉದಯ್ ಪ್ರಕಾಶ್ ನಿರ್ದೇಶನದ ‘ವರದ’ಹೆಸರಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.