ಪಕ್ಷದಿಂದ ಈಗಾಗಲೇ ಮಾನಸಿಕವಾಗಿ ದೂರವಾಗಿರುವ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಇನ್ನೆರಡು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಜೊತೆ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಪೈಕಿ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರ ಹೆಸರು ಪ್ರಮುಖವಾಗಿದೆ.
ರಮೇಶ್ ಜಾರಕಿಹೊಳಿಯವರ ಕಟ್ಟಾ ಬೆಂಬಲಿಗರಾಗಿರುವ ಮಹೇಶ್ ಕುಮಟಳ್ಳಿ ಈ ಹಿಂದೆ ಅತೃಪ್ತ ಶಾಸಕರು ಮುಂಬೈನಲ್ಲಿ ಬೀಡುಬಿಟ್ಟಿದ್ದ ವೇಳೆ ಅವರೊಂದಿಗಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸಿದ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲವೆಂದು ಹೇಳಿದ್ದರು.
ಇದೀಗ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಬಳಿಕ ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಗಳು ನಡೆಯುತ್ತಿದ್ದು, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಮುಂದಾಗಿದ್ದಾರೆ.ಇವರ ಜೊತೆಗೆ ಮಹೇಶ್ ಕುಮಟಳ್ಳಿ ಸಹ ರಾಜೀನಾಮೆ ನೀಡಲಿದ್ದಾರೆಂದು ಹೇಳಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಯಾರ ಸಂಪರ್ಕಕ್ಕೂ ಸಿಗದ ಮಹೇಶ್ ಕುಮಟಳ್ಳಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.