ಇಂದು ಬೆಳಿಗ್ಗೆಯಷ್ಟೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು, ರಾಜ್ಯ ವಿಧಾನಸಭಾ ಚುನಾವಣೆಗೆ ಮಧ್ಯಂತರ ಚುನಾವಣೆ ಖಚಿತ ಎಂಬ ಮಾತುಗಳನ್ನಾಡಿರುವ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ 20 ಮಂದಿ ಅತೃಪ್ತ ಶಾಸಕರಿದ್ದು, ಅವರನ್ನು ನಾವು ಸಂಪರ್ಕ ಮಾಡಿಲ್ಲ. ಆದರೆ ಅವರು ಯಾವುದೇ ಸಂದರ್ಭದಲ್ಲಿ ಹೊರ ಬರುವುದು ಖಚಿತ ಎಂದು ಹೇಳಿದ್ದಾರೆ.
ದೇವೇಗೌಡರು ಮಧ್ಯಂತರ ಚುನಾವಣೆಯ ಮಾತನಾಡಿದರೂ ರಾಜ್ಯದ ಜನತೆ ಇದನ್ನು ಒಪ್ಪುವುದಿಲ್ಲ. ಅಲ್ಲದೇ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಹೊಂದಿದ್ದು, ಮೈತ್ರಿ ಸರ್ಕಾರ ನಡೆಸಲು ಕಾಂಗ್ರೆಸ್-ಜೆಡಿಎಸ್ ನವರಿಗೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಯಡಿಯೂರಪ್ಪ ಗುಡುಗಿದ್ದಾರೆ.
ಯಡಿಯೂರಪ್ಪನವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಒಂದು ವೇಳೆ ಯಡಿಯೂರಪ್ಪನವರು ಹೇಳಿದ ಸಂಖ್ಯೆಯಷ್ಟು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮೈತ್ರಿ ಸರ್ಕಾರ ಪತನವಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ