ರಾತ್ರಿ ಮಲಗಿರುವಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ಬ್ರೈನ್ ಟ್ಯೂಮರ್ (Brain Tumor) ಗಂಭೀರ ಹಾಗೂ ಜೀವಕ್ಕೆ ಅಪಾಯಕಾರಿ ಕಾಯಿಲೆ. ಆದರೆ ಕೆಲವು ಆರಂಭಿಕ ಲಕ್ಷಣಗಳನ್ನು ಗಮನಿಸಿದರೆ ಇದನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆಯನ್ನು ಆರಂಭಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ವಿಶೇಷವಾಗಿ ರಾತ್ರಿ ಮಲಗಿರುವಾಗ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಿದರೆ ರೋಗ ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.
ಮೆದುಳಿನ ಗಡ್ಡೆಗಳು ಉಂಟಾಗುವುದು ಹೇಗೆ?
ಮೆದುಳಿನ ಜೀವಕೋಶಗಳು ಅಸಹಜವಾಗಿ ಬೆಳೆಯುವಾಗ ಗಡ್ಡೆ ಉಂಟಾಗುತ್ತದೆ. ಹಾನಿಕರವಲ್ಲದ ಗೆಡ್ಡೆಗಳು ನಿಧಾನವಾಗಿ ಬೆಳೆಯುತ್ತವೆ, ಆದರೆ ಕ್ಯಾನ್ಸರ್ ಸ್ವರೂಪದ ಮಾರಕ ಗೆಡ್ಡೆಗಳು ವೇಗವಾಗಿ ಬೆಳೆಯುತ್ತವೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಬಹುದು. ಗಡ್ಡೆಯ ಗಾತ್ರ, ಸ್ಥಳ, ಸ್ವರೂಪ ಮತ್ತು ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ವಿಧಾನ ನಿರ್ಧರಿಸಲಾಗುತ್ತದೆ.
ರಾತ್ರಿ ಸಮಯದಲ್ಲಿ ಗಮನಿಸಬೇಕಾದ ಪ್ರಮುಖ ಲಕ್ಷಣಗಳು
- ನಿದ್ರೆಯಲ್ಲಿಯೇ ಮೂರ್ಛೆ ಹೋಗುವುದು
ರಾತ್ರಿ ನಿದ್ರೆ ಮಾಡುವಾಗ ಹಠಾತ್ ಮೂರ್ಛೆ ಹೋಗುವುದು ಅಥವಾ ಪ್ರಜ್ಞೆ ಕಳೆದುಕೊಳ್ಳುವುದು ಬ್ರೈನ್ ಟ್ಯೂಮರ್‌ನ ಮುಖ್ಯ ಲಕ್ಷಣಗಳಲ್ಲಿ ಒಂದು. ಇದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸುತ್ತಾರೆ.
- ತೀವ್ರ ತಲೆನೋವು ಮತ್ತು ಮಲಗಿದಾಗ ವಾಂತಿ
ರಾತ್ರಿ ತಲೆಯ ತುಂಬಾ ನೋವು, ನಿದ್ರೆಯಲ್ಲಿಯೇ ವಾಂತಿ ಮಾಡುವುದು ಅಥವಾ ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಕಾಣುವುದು ಮೆದುಳಿನ ಮೇಲೆ ಗಡ್ಡೆಯಿಂದ ಉಂಟಾಗುವ ಒತ್ತಡದ ಪರಿಣಾಮವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
- ನಿದ್ರೆಗೆ ಭಂಗ / ನಿದ್ರಾಹೀನತೆ
ಆಗಾಗ ನಿದ್ರೆ ಮುರಿಯುವುದು, ದೀರ್ಘಕಾಲ ನಿದ್ರೆ ಬರದಿರುವುದು ಅಥವಾ ದಿನವಿಡೀ ದಣಿದ ಭಾವನೆ ಉಂಟಾಗುವುದು ಕೂಡ ಮೆದುಳಿನ ಗಡ್ಡೆಯ ಮೊದಲ ಸೂಚನೆ ಆಗಿರಬಹುದು.
ಇತರೆ ಎಚ್ಚರಿಕಾ ಲಕ್ಷಣಗಳು
– ಆಗಾಗ ತೀವ್ರ ತಲೆನೋವು
– ಮಸುಕಾದ ದೃಷ್ಟಿ
– ನಡವಳಿಕೆ ಅಥವಾ ಮನೋಭಾವದ ಬದಲಾವಣೆ
– ದೇಹದ ಒಂದು ಭಾಗದಲ್ಲಿ ದುರ್ಬಲತೆ
ವೈದ್ಯರ ಪ್ರಕಾರ, ಈ ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ಬ್ರೈನ್ ಟ್ಯೂಮರ್‌ನಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಯಾವುದೇ ಅಸಹಜ ಲಕ್ಷಣ ಕಂಡುಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಜೀವ ರಕ್ಷಿಸಲು ಅವಶ್ಯಕ.






