ವರಮಹಾಲಕ್ಷ್ಮಿ‌ ವ್ರತಾಚರಣೆಯ ಹಿನ್ನೆಲೆ.. ಮಹತ್ವ.. ಸಿರಿದೇವಿಯ ಆಚರಿಸುವ ಬಗೆ ಹೇಗೆ..?

0
400

ಶ್ರಾವಣ‌ ಮಾಸ ಬಂತೂ ಅಂದರೆ ಸಾಲು‌ ಸಾಲು ಹಬ್ಬಗಳು ಶುರುವಾಗುತ್ತೆ.‌ ಅದರಲ್ಲೂ‌‌ ಮೊದಲ ಶ್ರಾವಣ ಶುಕ್ರವಾರದಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ನಾಡಿನೆಲ್ಲಡೆ ವರಮಹಾಲಕ್ಷ್ಮಿ‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಮಹಿಳೆಯರಿಗೇ ಈ ಹಬ್ಬ ತುಂಬಾ ವಿಶೇಷವಾದದ್ದು. ಲಕ್ಷ್ಮಿಗೆ ಅಲಂಕಾರ ಮಾಡಿ ,  ವ್ರತ ಮಾಡಿದರೆ ಆರೋಗ್ಯ, ನೆಮ್ಮದಿ, ಐಶ್ವರ್ಯವನ್ನು ಲಕ್ಷ್ಮೀ ದೇವಿಯು
ಕರುಣಿಸುತ್ತಾಳೆ ಎಂಬುವುದು ನಂಬುಗೆ.ಕ್ರಿಯಾಶೀಲತೆಗೂ ಶುಭ್ರತೆಗೂ ಅಂತರಂಗ-ಬಹಿರಂಗದ ಸಿರಿತನಕ್ಕೂ ಸಂಕೇತವಾಗಿರುವವಳು ಲಕ್ಷ್ಮಿ. ಕ್ಷೀರಸಾಗರದಲ್ಲಿ ಜನಿಸಿದ ಲಕ್ಷ್ಮಿದೇವಿ ಶ್ರೀ ಮಹಾವಿಷ್ಣುವಿನ ವಕ್ಷಸ್ಥಳದಲ್ಲಿ ನೆಲೆಸಿರುವವಳು. ಮನೆಯಲ್ಲಿ ಪ್ರತಿ ದಿನವೂ ದೀಪವನ್ನು ಬೆಳಗುವುದರಿಂದ, ತುಳಸಿಯನ್ನು ಪೂಜಿಸುವುದರಿಂದ, ಮನೆಯ ಮುಂದೆ ರಂಗೋಲಿಯಿಂದ ಹಿಡಿದು ಸುಮಂಗಲಿಯ ಹಣೆಯಲ್ಲಿ ಕಮಲದಲ್ಲಿ, ಆನೆಯ ಕುಂಭಸ್ಥಳದಲ್ಲಿ ಹಸುವಿನ ಬಾಲದಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ನಂಬಿದ್ದೇವೆ. ನಾವು ಪ್ರತಿದಿನ ಲಕ್ಷ್ಮೀ ಪೂಜೆ ಸಲ್ಲಿಸುತ್ತೇವೆ. ಆದರೆ‌ ಶ್ರಾವಣ ಶುಕ್ರವಾರದಂದು ಮಾಡುವ ವರಮಹಾಲಕ್ಷ್ಮಿ‌ ವ್ರತ ‌ಅತ್ಯಂತ ಶ್ರೇಷ್ಠ. ಕಾರಣ ಸ್ವತಃ ಪಾರ್ವತಿ ದೇವಿಯು ಸಹ ವರಮಹಾಲಕ್ಷ್ಮಿ‌ ವ್ರತವನ್ನು ಆಚರಿಸಿದ್ದರು ಎನ್ನಲಾಗುತ್ತೆ.

ವರಮಹಾಲಕ್ಷ್ಮಿ ಆಚರಣೆಗೆ ಕಠಿಣ ನಿಯಮಗಳಿಲ್ಲ, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಒಲಿಯುತ್ತಾಳೆ. ಲಕ್ಷ್ಮಿ ಪೂಜೆಗೆ ಗೋಧೂಳಿ ಸಮಯ ಶ್ರೇಷ್ಠವೆಂದು ಹೇಳಲಾಗುತ್ತದೆ.

ವರಮಹಾಲಕ್ಷ್ಮಿ‌ ಹಬ್ಬದ ಹಿನ್ನೆಲೆ ಏನು..?

ವರಮಹಾಲಕ್ಷ್ಮಿ‌ ಹಬ್ಬವನ್ನು ಶ್ರಾವಣ ಮಾಸದ ಎರಡನೆ ಶುಭ ಶುಕ್ರವಾರ ಆಚರಿಸಲಾಗುತ್ತದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿನ ಒಂದು ಕುಟುಂಬದ ಅತ್ಯಂತ ದೈವ ಭಕ್ತಿಯುಳ್ಳ ಚಾರುಮತಿಯೆಂಬ ಮಹಿಳೆಯ ಕನಸಲ್ಲಿ ತಾಯಿ ಮಹಾಲಕ್ಷ್ಮಿಯು ಕಾಣಿಸಿಕೊಂಡು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವಂತೆ ಹೇಳಿದಳೆಂಬ ನಂಬಿಕೆಯಿಂದ ಆಚರಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಳೆಂಬ ಪ್ರತೀತಿ ಇದೆ.‌ ಹೀಗಾಗಿ
ವರಮಹಾಲಕ್ಷ್ಮಿಯನ್ನು ಹೆಣ್ಣುಮಕ್ಕಳು ಭಕ್ತಿ-ಭಾವದಿಂದ ಪೂಜಿಸುತ್ತಾರೆ.

 

ವರಮಹಾಲಕ್ಷ್ಮಿ‌ ಪೂಜಾ ವಿಧಿವಿಧಾನವೇನು..?

ವರಮಹಾಲಕ್ಷ್ಮಿ‌ ವ್ರತ ಪಾಲಿಸುವ ಹೆಣ್ಣು ಮಕ್ಕಳು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಬೇಕು.‌ ಮನೆ ಶುಚಿಯಾಗಿದ್ದರೆ ಶ್ರೀಲಕ್ಷ್ಮಿ ಒಳಿಯುವಳೆಂಬ ನಂಬಿಕೆ ಇದೆ. ಮನೆಯ ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು.‌ ಭಾರತದ ಆಚರಣೆಯಲ್ಲಿ ಹಬ್ಬಗಳೆಂದರೆ ಮೊದಲಿಗೆ ತಳಿರು ತೋರಣ ಕಟ್ಟುವುದು ರೂಢಿ. ಬಳಿಕ‌‌ ಸ್ನಾನ ಮಾಡಿ ಮಡಿ ಉಡುಪು ಧರಿಸಿ , ಕಳಶ ಕೂರಿಸುವ ಜಾಗದಲ್ಲಿ ರಂಗೋಲಿ ಬಿಡಿಸಿ, ದೇವಿಗೆ ನೈವೇದ್ಯ ತಯಾರಿಸಬೇಕು.

ಚಿಕ್ಕ ಬಿಂದಿಗೆಯನ್ನು‌ ಕಳಶದ ರೂಪದಲ್ಲಿ ಇಡಬೇಕು. ಸಾಮಾನ್ಯವಾಗಿ ಕಳಶವನ್ನು‌ ತಮ್ಮ ಅನುಕೂಲಕ್ಕೆ ತಕ್ಕಂತೆ ಇಡುತ್ತಾರೆ. ‌ಕೆಲವರು ತಾಮ್ರದ ಬಿಂದಿಗೆ ಬಳಸಿದರೆ, ಮತ್ತೆ ಕೆಲವರು‌‌ ಬೆಳ್ಳಿ ತಂಬಿಗೆಯಲ್ಲಿ ಇಡುತ್ತಾರೆ.

ಕೆಲವರು ಕಲಶದಲ್ಲಿ ನೀರು ತುಂಬಿದರೆ ಇನ್ನು ಕೆಲವರು ಧಾನ್ಯ ತುಂಬುತ್ತಾರೆ. ಕಲಶವನ್ನು ಕುರಿಸುವ ಮುನ್ನ ಒಂದು ಬಾಳೆಲೆ ಹಾಕಿ ಅದರಲ್ಲಿ ಅಕ್ಕಿಯನ್ನು ಹರಡಿ, ಅದರ ಮೇಲೆ ಕಳಸ ಕೂರಿಸಬೇಕು. ನಂತರ ಕಳಸದಲ್ಲಿ ಮಾವಿನ ಎಲೆ ಹಾಗೂ ವೀಳ್ಯೆದೆಲೆ ಇರಿಸಿ ಅರಿಶಿಣ -ಕುಂಕುಮ ಹಚ್ಚಿದ ತೆಂಗಿನಕಾಯಿ ಇಡಲಾಗುತ್ತದೆ. ನಂತರ ಲಕ್ಷ್ಮೀ ಮುಖವಾಡ ಇಡಲಾಗುವುದು. ಬಳಿಕ ಲಕ್ಷ್ಮಿ ರೇಷ್ಮೆ ಸೀರೆ ಉಡಿಸಿ ಒಡವೆಗಳಿಂದ ಅಲಂಕರಿಸುತ್ತಾರೆ.

ಪದ್ಮಮುಖಿಗೆ ತಾವರೆ ಹೂ ಎಂದರೆ ಬಲು ಪ್ರೀತಿ, ಆದ್ದರಿಂದ ಶ್ರೀದೇವಿಗೆ ತಾವರೆ ಹೂವನ್ನು ಅವಳಿಗೆ ಅರ್ಪಿಸಲಾಗುವುದು. ನಂತರ ವಿವಿಧ ಹೂಗಳಿಂದ ಅಲಂಕಾರ ಮಾಡಿ, ಹಣ್ಣುಗಳನ್ನು ಇಟ್ಟು ನೈವೇದ್ಯ ಇಡಲಾಗುವುದು.

ಲಕ್ಷ್ಮೀ ಪೂಜೆಗೆ ದೇವಿಗೆ ಹಸಿರು ಬಣ್ಣದ ರವಿಕೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೈವೇದ್ಯ ಮಾಡಿ ಇಡಲಾಗುವುದು. ಹೀಗೆ ದೇವಿಗೆ ಪೂಜೆ ಸಲ್ಲಿಸುವಾಗ ಮಂಗಳಕರವಾದ ಲಕ್ಷ್ಮಿ ಅಷ್ಟೋತ್ತರ ಮತ್ತು ಲಕ್ಷ್ಮಿ ಸಹಸ್ರನಾಮ ಪಠಿಸಬೇಕು. ಇದರಿಂದ ಪೂಜೆಯಿಂದ ಉತ್ತಮ ಫಲ ಸಿಗುವುದು.

ಪೂಜೆ ನೆರವೇರಿಸುವ ಮಹಿಳೆಯರು ತಮ್ಮ ಬಲಗೈ ಮಣಿಕಟ್ಟಿನಲ್ಲಿ ನಡುವೆ ಸೇವಂತಿಗೆ ಹೂ ಇರುವ ಹಳದಿ ದಾರವನ್ನು ಒಂಬತ್ತು ಗಂಟುಗಳಂತೆ ಮಾಡಿ ಕಟ್ಟಿಕೊಳ್ಳುತ್ತಾರೆ. ಪೂಜೆ ಸಂಪನ್ನಗೊಳ್ಳುವವರೆಗೆ ಆ ದಾರವನ್ನು ಬಿಚ್ಚಬಾರದು. ನಂತರ ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿಣ ಕುಂಕುಮ ನೀಡಲಾಗುವುದು.

ನೈವೇದ್ಯವಾಗಿ ಒಬ್ಬಟ್ಟು, ಸಜ್ಜಿಗೆ, ಹೆಸರು ಬೇಳೆ ಪಾಯಸ ಹೀಗೆ ನಾನ ಬಗೆಯ ಸಿಹಿ ತಿನಿಸು ಮಾಡಲಾಗುವುದು.ಸಾಮಾನ್ಯವಾಗಿ ಲಕ್ಷ್ಮಿಯನ್ನು ಎಂಟು ರೂಪಗಳಲ್ಲಿ ಪೂಜಿಸಲಾಗುತ್ತದೆ. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮಿ, ಶೌರ್ಯಲಕ್ಷ್ಮಿ, ಕೀರ್ತಿಲಕ್ಷ್ಮಿ, ಸೌಮ್ಯಲಕ್ಷ್ಮಿ, ವಿಜಯಲಕ್ಷ್ಮಿ. ಈ ಎಂಟು ರೂಪಗಳು ನಮ್ಮ ಬದುಕಿಗೆ ಬೇಕಾದ ಎಲ್ಲ ಸಿರಿವಂತಿಕೆಯನ್ನೂ ಪ್ರತಿನಿಧಿಸುತ್ತವೆ.

LEAVE A REPLY

Please enter your comment!
Please enter your name here