ಒಬ್ಬ ನಟ, ಓರ್ವ ನಟಿ, ಅದೇ ಹಳೇ ಕಥೆಯನ್ನು ತಿರುಚಿ ಮುರುಚಿ ಕಣ್ಮುಂದೆ ಇಟ್ಟು ಇದು ಬ್ಲಾಕ್ ಬಸ್ಟರ್ ಸಿನಿಮಾ, ಫ್ಯಾಮಿಲಿ ಎಂಟ್ರಟೈನ್ಮೆಂಟ್ ಕಮರ್ಷಿಯಲ್ ಮೂವಿ ಅಂತ ತೋರಿಸುವವರೇ ಹೆಚ್ಚು.. ಇಂತಹ ಒಂದೇ ಕತೆಯುಳ್ಳ ಹಲವಾರು ಚಿತ್ರಗಳ ನಡುವೆ ಆಗೊಂದು ಈಗೊಂದು ಒಂದೊಳ್ಳೆ ಥ್ರಿಲ್ಲರ್ ಸಿನಿಮಾಗಳು ಬಂದು ಪ್ರೇಕ್ಷಕರಿಂದ ಭೇಷ್ ಗಿರಿ ಪಡೆದು ಹೋಗುತ್ತವೆ..
ಅಂತಹದ್ದೇ ಕಂಟೆಂಟ್ ಉಳ್ಳ ಥ್ರಿಲ್ಲರ್ ಸಿನಿಮಾಗಳ ಪಟ್ಟಿಗೆ ಖಡಾಖಂಡಿತವಾಗಿ ಸೇರುವ ಸಿನಿಮಾವೇ ತಮಿಳಿನ ‘ತಿಟ್ಟಂ ಇರಂಡು’.. ಎಂದರೆ 2 ಯೋಜನೆ ಎಂದರ್ಥ, ಚಿತ್ರಕ್ಕೆ ಈ ಶೀರ್ಷಿಕೆ ಹೆಮ್ಮೆ ಯಾಕೆ ಇಟ್ಟರು ಎಂಬುದು ನೀವು ಕ್ಲೈಮ್ಯಾಕ್ಸ್ ನೋಡಿದ ನಂತರವಷ್ಟೇ ನಿಮಗೆ ಗೊತ್ತಾಗುತ್ತದೆ. ಬಸ್ ಜರ್ನಿ ಯೊಂದರಲ್ಲಿ ಭೇಟಿಯಾಗುವ ನಾಯಕ ಮತ್ತು ನಾಯಕಿ, ಮೊದಲ ಭೇಟಿಯಲ್ಲಿಯೇ ಸ್ನೇಹ ಸಲುಗೆ, ನಾಯಕಿಗೆ ನಾಯಕನ ಫೋನ್ ನಂಬರ್ ಹುಡುಕಿಕೊಂಡು ಇಷ್ಟ ಪಡ್ತಾಳೆ..
ಆದರೆ ಈ ಕಥೆಯ ನಾಯಕಿ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಕತೆಗಳ ರೀತಿಯ ನಾಯಕಿಯಲ್ಲ ಬದಲಾಗಿ ಇಲ್ಲಿ ಆಕೆ ಓರ್ವ ನಿಷ್ಠಾವಂತ ಪೊಲೀಸ್.. ಹೀಗೆ ಪೊಲೀಸ್ ಆಗಿರುವಂತಹ ನಾಯಕಿಗೆ ಲವ್ ಹುಟ್ಟುತ್ತೆ, ಗ್ಯಾಪಲ್ಲಿ ಸ್ನೇಹಿತೆಯ ಸಾವು, ಸ್ನೇಹಿತೆಯ ಸಾವಿನ ರಹಸ್ಯ ಭೇದಿಸಲು ಹೋದ ಕೂಡಲೇ ಮತ್ತೊಂದು ಯುವತಿಯ ಸಾವು.. ಎರಡೂ ಕೊಲೆಗಳಿಗೂ ಲಿಂಕ್ ಇದೆ ಎಂದು ಗೊತ್ತಾಗುವಷ್ಟರಲ್ಲಿ ದೊಡ್ಡದೊಂದು ಇಂಟರ್ವೆಲ್ ಟ್ವಿಸ್ಟ್..
ಹೀಗೆ ಎರಡೂ ಕೊಲೆಗಳ ಕೊಲೆಗಾರ ಯಾರು ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಇತರ ಕ್ರೈಂ ಥ್ರಿಲ್ಲರ್ ಗಳ ರೀತಿ ಇಲ್ಲಿಯೂ ಫಿಂಗರ್ ಪ್ರಿಂಟ್ ಟೆಸ್ಟ್, ಫೊರೆನ್ಸಿಕ್ ಡಿಪಾರ್ಟ್ಮೆಂಟ್ ರಿಪೋರ್ಟ್ ಗಳು ಬಂದು ಹೋಗುತ್ತವೆ.. ಆದರೆ ನೆನಪಿಡಿ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುವ ಹೊತ್ತಿಗೆ ಇದ್ಯಾವುದೂ ಪ್ರೇಕ್ಷಕನ ತಲೆಯ ಹತ್ತಿರವೂ ಸುಳಿಯುವುದಿಲ್ಲ. ಹೌದು ಕೊನೆಯ ಇಪ್ಪತ್ತು ನಿಮಿಷ ಚಿತ್ರದ ಕತೆ ದೊಡ್ಡದೊಂದು ತಿರುವು ಪಡೆದುಕೊಂಡು ಬೇರೆಯದ್ದೇ ಹಾದಿಯಲ್ಲಿ ಸಾಗಿ ಬಿಡುತ್ತದೆ. ನಿಜ ಹೇಳಬೇಕೆಂದರೆ ಈ ತರಹದ ಪ್ರಯತ್ನ ವಿಭಿನ್ನ ಮತ್ತು ಹೊಸತನದಿಂದ ಕೂಡಿದೆ.
ಪ್ರತಿ ಥ್ರಿಲ್ಲರ್ ಸಿನಿಮಾಗಳು ಕೂಡ ಕೊನೆಗೆ ಜಾಗೃತಿ ಮೂಡಿಸುವ ಮೂಲಕ ಕೊನೆಗೊಂಡರೆ ಈ ಚಿತ್ರದಲ್ಲಿ ಜಾಗೃತಿಯ ಜತೆಗೆ ಒಂದೊಳ್ಳೆ ಸಂದೇಶವನ್ನು ಸಹ ನಿರ್ದೇಶಕರು ಪ್ರೇಕ್ಷಕರಿಗೆ ಅರ್ಪಿಸಿದ್ದಾರೆ. ಇಂತಹ ಚಿತ್ರಗಳ ಕುರಿತು ವಿಮರ್ಶೆ ಮಾಡುವಾಗ ಯಾವುದೇ ಕಾರಣಕ್ಕೂ ಕೊಂಚ ಚಿತ್ರಕತೆಯನ್ನು ಕೂಡ ಬಿಟ್ಟುಕೊಡಬಾರದು. ಹೀಗಾಗಿ ಮೊದಲಾರ್ಧದ ಕೊಂಚ ಅಂಶಗಳನ್ನು ತೆಗೆದುಕೊಂಡು ಚಿತ್ರ ಯಾವ ರೀತಿ ಸಾಗುತ್ತದೆ ಎಂಬುದನ್ನು ಹೇಳಿ ಮುಗಿಸಿದ್ದೇವಷ್ಟೇ.. ಬೇರೆ ಅಂಶಗಳ ಕುರಿತು ಅಥವಾ ಪಾತ್ರಗಳ ಬಗ್ಗೆ ವಿಮರ್ಶಿಸಲು ಹೋದರೆ ಕೊಂಚ ಚಿತ್ರಕತೆಯನ್ನು ನಿಮಗೆ ಹೇಳಲೇಬೇಕಾದಂತಹ ಪರಿಸ್ಥಿತಿಯಿದೆ.
ಹೀಗಾಗಿ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟ ಪಡುವಂತಹ ಭಿನ್ನವಿಭಿನ್ನ, ನೂತನ ಕತೆಯನ್ನು ಹೊಂದಿರುವಂತಹ ಸಿನಿಮಾಗಳನ್ನು ನೋಡಲು ಇಷ್ಟ ಪಡುವಂತಹ ಪ್ರೇಕ್ಷಕರಿಗೆ ತಿಟ್ಟಂ ಇರಂಡು ಒಂದೊಳ್ಳೆ ಆಪ್ಷನ್. ನನಗೆ ಭಾಷೆ ಅಡ್ಡಿಯಿಲ್ಲ ನಾನು ಒಂದೊಳ್ಳೆ ವಿಭಿನ್ನ ಕಥಾ ಹಂದರವಿರುವ ಸಿನಿಮಾವನ್ನು ನೋಡಬೇಕು ಎಂದು ಇಷ್ಟಪಡುವ ಸಿನಿಮಾ ಪ್ರೇಕ್ಷಕರು ಈ ಸಿನಿಮಾವನ್ನು ಆರಾಮಾಗಿ ನೋಡಬಹುದು.. ಈ ಚಿತ್ರವು ಸೋನಿ ಲಿವ್ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ..