No menu items!
22.1 C
Munich
Friday, May 22, 2026

ನನಗೆ ಯಾವುದೇ ಸ್ಟೇಟಸ್ ಬೇಡ: ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

Must read

ನನಗೆ ಯಾವುದೇ ಸ್ಟೇಟಸ್ ಬೇಡ: ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನಾನು ಕನ್ನಡ ನಾಡಿನ ಹುಡುಗ. ಇಲ್ಲಿ ತೆರಿಗೆ ಕಟ್ಟುವ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಕೇಳುತ್ತಿದ್ದೇನೆ” ಎಂದು ತಿರುಗೇಟು ನೀಡಿದ್ದಾರೆ.
ನಗರದ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸ್ಟೇಟಸ್ ಬಗ್ಗೆ ಟೀಕೆ ಮಾಡಿದ ಡಿಕೆಶಿಗೆ ನಾನು ಕಾಮನ್ ಮ್ಯಾನ್ ಆಗಿ ಉತ್ತರ ಕೊಡುತ್ತೇನೆ. ನನಗೆ ಯಾವುದೇ ಸ್ಟೇಟಸ್ ಬೇಕಿಲ್ಲ” ಎಂದು ಟಾಂಗ್ ನೀಡಿದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ವಿಚಾರವನ್ನೂ ಉಲ್ಲೇಖಿಸಿದ ನಿಖಿಲ್, “ಉಪಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಅಧ್ಯಕ್ಷರಾಗಲಿ” ಎಂದು ವ್ಯಂಗ್ಯವಾಡಿದರು.
“ನಿನ್ನೆ ನಡೆದ ಪ್ರತಿಭಟನೆಯಲ್ಲಿ ಸಿಎಂ ಹಾಗೂ ಡಿಸಿಎಂ ‘ಐ ಆಮ್ ಕಾಕ್ರೋಚ್’ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷದ ನಾಯಕರು ಇಂತಹ ಟೀ-ಶರ್ಟ್ ಬಿಡುಗಡೆ ಮಾಡುವುದು ದುರಂತ” ಎಂದು ಕಿಡಿಕಾರಿದರು.
ಬಿಡದಿ ಕೈಗಾರಿಕಾ ಮಹಾ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದ ನಿಖಿಲ್, “ಈ ಯೋಜನೆ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿತ್ತು. ಆದರೆ ರೈತರ ಮನವಿಗೆ ಸ್ಪಂದಿಸಿ ಅದನ್ನು ಕೈಬಿಡಲಾಗಿತ್ತು” ಎಂದು ನೆನಪಿಸಿದರು.
“ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಂಡಿದೆ. ‘ಅಲ್ಲಿ ರೈತರೇ ಇಲ್ಲ’ ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಏಕೆ ಕಿತ್ತುಕೊಳ್ಳುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಡಿಸಿಎಂ ಮೊದಲು ಗ್ರಾಮಗಳಿಗೆ ಬಂದು ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಅವರು, “ಈ ಯೋಜನೆಯಲ್ಲಿ ಸ್ಥಳೀಯರಿಗೆ ಕನಿಷ್ಠ ಶೇ.50ರಷ್ಟು ಉದ್ಯೋಗ ನೀಡುವುದು ಕಡ್ಡಾಯ ಎಂಬ ಕಾನೂನು ತರಲಿ. ಆಗ ನಾನು ಒಪ್ಪುತ್ತೇನೆ” ಎಂದು ಸವಾಲು ಹಾಕಿದರು.
“ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ” ಎಂದು ನಿಖಿಲ್ ಹೇಳಿದರು.

- Advertisement -spot_img

More articles

- Advertisement -spot_img

Latest article