No menu items!
24.9 C
Munich
Saturday, May 23, 2026

ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಆರ್. ಅಶೋಕ್ ಸ್ಪಷ್ಟನೆ

Must read

ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಆರ್. ಅಶೋಕ್ ಸ್ಪಷ್ಟನೆ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ವಿಚಾರದಲ್ಲಿ ಬಿಜೆಪಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ದೇವೇಗೌಡರ ಮರು ಆಯ್ಕೆ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ. ಈ ಸಂಬಂಧ ನಮ್ಮ ಬಳಿ ಯಾರೂ ಚರ್ಚೆಗೆ ಬಂದಿಲ್ಲ. ರಾಜ್ಯ ಬಿಜೆಪಿ ನಾಯಕರ ಜೊತೆ ಜೆಡಿಎಸ್ ನಾಯಕರು ಸಹ ಯಾವುದೇ ಮಾತುಕತೆ ನಡೆಸಿಲ್ಲ” ಎಂದು ಹೇಳಿದರು.
ಆಳಂದ ಲಾಡ್ಲೆ ಮಶಾಕ್ ದರ್ಗಾ ಸೇರಿದಂತೆ ಕೋಮು ಗಲಭೆ ಪ್ರಕರಣಗಳನ್ನು ವಾಪಸ್ ಪಡೆದಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ ಅಶೋಕ್, “ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣಗಳನ್ನೂ ಸರ್ಕಾರ ವಾಪಸ್ ಪಡೆದಿದೆ. ಇದು ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣ ಮತ್ತು ವೋಟ್ ಬ್ಯಾಂಕ್ ರಾಜಕೀಯ” ಎಂದು ಆರೋಪಿಸಿದರು.
“ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದು ಅಕ್ಷಮ್ಯ. ಇದು ದೇಶದ ಭದ್ರತೆಗೆ ಆತಂಕ ಉಂಟುಮಾಡುವ ಪ್ರವೃತ್ತಿ. ಸರ್ಕಾರ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ” ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಚುನಾವಣೆಯ ಬಳಿಕ ಸರ್ಕಾರ ಮುಸ್ಲಿಮರಿಗೆ ‘ಬಂಪರ್ ಗಿಫ್ಟ್’ ನೀಡುತ್ತಿದೆ ಎಂದು ಆರೋಪಿಸಿದ ಅವರು, “ಹಿಜಾಬ್ ವಿಚಾರವನ್ನು ಮತ್ತೆ ಮುಂದಕ್ಕೆ ತಂದಿದ್ದಾರೆ. ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಬಾರದು” ಎಂದು ಒತ್ತಾಯಿಸಿದರು.
ಆನೇಕಲ್ ಸಮೀಪದ ಸೂರ್ಯನಗರದಲ್ಲಿ ಮತ್ತೊಂದು ಸ್ಟೇಡಿಯಂ ನಿರ್ಮಾಣ ಯೋಜನೆ ಕುರಿತು ಪ್ರಶ್ನಿಸಿದ ಅಶೋಕ್, “ಯಾವ ಆಟಗಾರರು ಸ್ಟೇಡಿಯಂ ಕೇಳಿದ್ದಾರೆ? ಕಮಿಷನ್ಗಾಗಿ ಯೋಜನೆ ಕೈಗೊಳ್ಳಲಾಗುತ್ತಿದೆಯೇ?” ಎಂದು ಸರ್ಕಾರವನ್ನು ಪ್ರಶ್ನಿಸಿದರು.

- Advertisement -spot_img

More articles

- Advertisement -spot_img

Latest article